Breaking News

ಭಾರತದಲ್ಲಿ ಕೊರೋನಾಗೆ 24 ಗಂಟೆಯಲ್ಲಿ 134 ಸಾವು, 3,722 ಮಂದಿಗೆ ಪಾಸಿಟಿವ್..!

Spread the love

ನವದೆಹಲಿ/ಮುಂಬೈ, ಮೇ 14- ಡೆಡ್ಲಿ ಕೊರೊನಾ ಹಾವಳಿ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ದೇಶದಲ್ಲಿ ಕಿಲ್ಲರ್ ವೈರಸ್ ಆರ್ಭಟ ಲಾಕ್‍ಡೌನ್ ಸಡಿಲಿಕೆ ನಂತರ ದಿನೇ ದಿನೇ ವ್ಯಾಪಕವಾಗುತ್ತಿದ್ದು, ರಾಷ್ಟ್ರವ್ಯಾಪಿ ಭಯಭೀತಿಯ ವಾತಾವರಣ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ.

ಭಾರತದಲ್ಲಿ ಸಾವಿನ ಸಂಖ್ಯೆ 2,500 ದಾಟಿದ್ದು, ಸೋಂಕು ಪೀಡಿತರ ಸಂಖ್ಯೆಯೂ 80,000 ಸನಿಹದಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 134 ಸಾವು ಮತ್ತು 3,722 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮೂರನೇ ಹಂತದ ಲಾಕ್‍ಡೌನ್ ನಂತರ ಸತತ 10ನೇ ದಿನ ಇದು ಅತಿ ಹೆಚ್ಚು ಸೋಂಕುಗಳ ಪ್ರಕರಣವಾಗಿದೆ. ಈ ಅವಧಿಯಲ್ಲಿ ಪ್ರತಿ ದಿನ ಸರಾಸರಿ 3,000 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.

ಸಾಂಕ್ರಾಮಿಕ ರೋಗ ಆಘಾತಕಾರಿ ಮಟ್ಟದಲ್ಲಿ ಸ್ಫೋಟಗೊಂಡಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಚಿಂತೆಗೀಡು ಮಾಡಿದ್ದು, ಜನರು ಮತ್ತಷ್ಟು ಆತಂಕಗೊಂಡಿದ್ದಾರೆ.
ನಿನ್ನೆ ಬೆಳಗ್ಗೆ 8 ಗಂಟೆಯಿಂದ 24 ಗಂಟೆಗಳ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 134 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ.

ಮಹಾರಾಷ್ಟ್ರದಲ್ಲಿ 54, ಗುಜರಾತ್‍ನಲ್ಲಿ 29, ದೆಹಲಿ 20, ಪಶ್ಚಿಮ ಬಂಗಾಳ ಒಂಭತ್ತು, ಮಧ್ಯಪ್ರದೇಶ ಏಳು, ರಾಜಸ್ತಾನ ನಾಲ್ಕು, ತಮಿಳುನಾಡು ಮೂರು, ತೆಲಂಗಾಣ ಮತ್ತು ಕರ್ನಾಟಕ ತಲಾ ಎರಡು, ಹಾಗೂ ಆಂಧ್ರಪ್ರದೇಶ, ಬಿಹಾರ, ಜಮ್ಮು-ಕಾಶ್ಮೀರ ಮತ್ತು ಉತ್ತರ ಪ್ರದೇಶ ತಲಾ ಒಂದೊಂದು ಸಾವು ಸಂಭವಿಸಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ದೇಶದಲ್ಲಿ ಡೆಡ್ಲಿ ಕೋವಿಡ್-19 ವೈರಸ್‍ಗೆ ಬಲಿಯಾದವರ ಸಂಖ್ಯೆ 2,549ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆ 78,003 ತಲುಪಿದೆ. ಇಂದು ರಾತ್ರಿಯೊಳಗೆ ಸೋಂಕಿತರ ಪ್ರಮಾಣ 82,000 ದಾಟುವ ಆತಂಕವೂ ಇದೆ.

ಲಾಕ್‍ಡೌನ್ ಸಡಿಲ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಮಹಾಸ್ಫೋಟವಾಗಿದ್ದು, ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಜೊತೆ ಸಮುದಾಯ ಸೋಂಕಿನ ಸಾಧ್ಯತೆಯ ಭಯವೂ ಆವರಿಸಿದೆ.

ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಶೇ.33.63ರಷ್ಟು ಸುಧಾರಣೆ ಕಂಡುಬಂದಿದ್ದರೂ, ಮತ್ತೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಈವರೆಗೆ ಸಂಭವಿಸಿರುವ 2,549 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಒಟ್ಟು 975 ಸಾವುಗಳು ವರದಿಯಾಗಿವೆ. ನಂತರದ ಸ್ಥಾನಗಳಲ್ಲಿ ಗುಜರಾತ್ (566), ಮಧ್ಯಪ್ರದೇಶ (232), ಪಶ್ಚಿಮ ಬಂಗಾಳ (207), ರಾಜಸ್ತಾನ (121), ದೆಹಲಿ (106), ಉತ್ತರ ಪ್ರದೇಶ (83) ತಮಿಳುನಾಡು (64), ಆಂಧ್ರಪ್ರದೇಶ (47), ತೆಲಂಗಾಣ ( 34), ಕರ್ನಾಟಕ (33) ಮತ್ತು ಪಂಜÁಬ್(32) ರಾಜ್ಯಗಳಿವೆ.

ಹರಿಯಾಣ ಮತ್ತು ಜಮ್ಮು-ಕಾಶ್ಮೀರ ತಲಾ 11, ಬಿಹಾರ ಏಳು, ಕೇರಳ ನಾಲ್ಕು, ಜÁರ್ಖಂಡ್, ಚಂಡಿಗಢ ಮತ್ತು ಒಡಿಶಾ ತಲಾ ಮೂರು, ಅಸ್ಸಾಂ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಎರಡು ಹಾಗೂ ಪುದುಚೇರಿ, ಮೇಘಾಲಯ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 49.219ರಷ್ಟಿದೆ. ಈ ಮಧ್ಯೆ, ಈವರೆಗೆ 26,234 (ಚೇತರಿಕೆ ಪ್ರಮಾಣ ಶೇ.33.63) ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ದೇಶಾದ್ಯಂತ ಜಾರಿಯಲ್ಲಿರುವ ಮೂರನೇ ಹಂತದ ಲಾಕ್‍ಡೌನ್ ಮೇ 17ರ ಬಳಿಕ ಸಡಿಲಗೊಂಡರೆ ಸೋಂಕು ಮತ್ತು ಸಾವು ಪ್ರಕರಣಗಳು ಹೆಚ್ಚಾಗುವ ಆತಂಕವೂ ಇದೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ