Breaking News
Home / new delhi / 40 ದಿನ ಬೆಳಗಾವಿ, ಬಳ್ಳಾರಿ ಜೈಲಿನಲ್ಲಿದ್ದ ಏಕನಾಥ ಶಿಂಧೆ!

40 ದಿನ ಬೆಳಗಾವಿ, ಬಳ್ಳಾರಿ ಜೈಲಿನಲ್ಲಿದ್ದ ಏಕನಾಥ ಶಿಂಧೆ!

Spread the love

ಬೆಳಗಾವಿ: ಅತ್ಯಂತ ತಳಮಟ್ಟದಿಂದ ಬದುಕು ಆರಂಭಿಸಿ ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದವರೆಗೂ ಪಯಣ ಬೆಳೆಸಿರುವ ಏಕನಾಥ ಶಿಂದೆ ತಮ್ಮ ಹೋರಾಟದ ಬದುಕಿನಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 40 ದಿನಗಳ ಕಾಲ ಬೆಳಗಾವಿಯ ಹಿಂಡಲಗಾ ಹಾಗೂ ಬಳ್ಳಾರಿ ಜೈಲಿನಲ್ಲಿ ಕಳೆದಿದ್ದರು.

 

1985 ರಲ್ಲಿ ಭುಗಿಲೆದ್ದಿದ್ದ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ದಳ್ಳುರಿ ಬೆಳಗಾವಿಯನ್ನು ಅಕ್ಷರಶಃ ಬೆಂಕಿಯುಂಡೆಯಾಗಿಸಿತ್ತು. ಈ ವೇಳೆ ಬೆಳಗಾವಿಯಲ್ಲಿ ಶರದ್ ಪವಾರ್ ನೀಡಿದ ಕರೆಯಂತೆ ನಡೆದ ಗಡಿ ತಂಟೆ ವೈಪರೀತ್ಯಕ್ಕೆ ಹೋಗಿ ಹಿಂಸಾಚಾರಕ್ಕೆ ತಿರುಗಿತು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸರಕಾರ ಗೋಲಿಬಾರ್ ಗೆ ಆದೇಶಿಸಿತ್ತು. ಇದರಲ್ಲಿ 9 ಜನ ಮರಾಠಿಗರು ಮೃತಪಟ್ಟಿದ್ದರು. ಛಗನ್ ಭುಜಬಲ ಸಹಿತ ಮಹಾರಾಷ್ಟ್ರದ ಅನೇಕ ರಾಜಕೀಯ ಮುಖಂಡರು ರಾಜ್ಯ ಗಡಿಯಿಂದ ಬೆಳಗಾವಿಗೆ ನುಸುಳಿ ಬಂದು ದಂಗೆಯ ನೇತೃತ್ವ ವಹಿಸಿದ್ದರು. ಈ ಮುಖಂಡರನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗಟ್ಟಲಾಯಿತು.. ಅಲ್ಲಿಂದ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಅವರಲ್ಲಿ ಏಕನಾಥ ಶಿಂದೆ ಕೂಡ ಒಬ್ಬರಾಗಿದ್ದರೆನ್ನುವುದು ಉಲ್ಲೇಖನೀಯ. ಈ ಜೈಲುವಾಸ ಶಿಂದೆಯವರ ನಾಯಕತ್ವಕ್ಕೆ ಇನ್ನಷ್ಟು ಬಲ ನೀಡಿತು. ಶಿವಸೇನೆಯಲ್ಲಿ ಹೆಚ್ಚಿನ ಸ್ಥಾನಮಾನ ಗಳಿಸಲು ಇದು ಕಾರಣವಾಯಿತು. ಸಾಮಾನ್ಯಾತಿ ಸಾಮಾನ್ಯರಾಗಿದ್ದ ಏಕನಾಥ ಶಿಂದೆಯವರಿಗೆ ರಾಜಕೀಯದ ಯಶಸ್ಸಿನ ಮೆಟ್ಟಿಲುಗಳನ್ನು ಸೃಷ್ಟಿಸಿದ್ದೇ ಬೆಳಗಾವಿಯ ಆ ‘ಮಹಾ’ದಂಗೆ.

 

1964ರ ಫೆ. 9ರಂದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿ ಗಂಗೂಬಾಯಿ ಹಾಗೂ ಸಂಭಾಜಿ ಶಿಂದೆಯವರ ಪುತ್ರನಾಗಿ ತೀರ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಏಕನಾಥ ಶಿಂದೆ ಕುಟುಂಬ ನಿರ್ವಹಣೆಗಾಗಿ ಓದಿಗೆ ಅರ್ಧಕ್ಕೇ ಸಲಾಂ ಹೊಡೆದು ಆಟೋ ಓಡಿಸುವ ಕೆಲಸ ನಡೆಸುತ್ತಿದ್ದರು. ಇದೇ ವೇಳೆ 1995ರಲ್ಲಿ ಶಿವಸೇನೆಯ ಮುಖ್ಯಸ್ಥ ಬಾಳ ಠಾಕ್ರೆ ಅವರ ಸಂಪರ್ಕಕ್ಕೆ ಬಂದ ಅವರು ರಾಜಕೀಯದ ಒಂದೊಂದೇ ಮೆಟ್ಟಿಲೇರುತ್ತ ಸಾಗಿದರು.

 

1997ರಲ್ಲಿ ಠಾಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾರ್ಪೋರೇಟರ್ ಆದರು. ಠಾಣೆ ಭಾಗದಲ್ಲಿ ಶಿವಸೇನೆ ಬಲಪಡಿಸಿದ ಶ್ರೇಯಸ್ಸು ಶಿಂದೆಯವರಿಗೆ ಸಲ್ಲುತ್ತದೆ. 2001ರಲ್ಲಿ ಠಾಣೆ ಪಾಲಿಕೆಯ ಮೇಯರ್ ಆಗಿ, 2002ರಲ್ಲಿ ಪಾಲಿಕೆಗೆ ಎರಡನೇ ಬಾರಿ ಆಯ್ಕೆಯಾದರು. 2014ರಲ್ಲೇ ಮರಾಠಿ ಮತ್ತು ರಾಜ್ಯಶಾಸ್ತ್ರದಲ್ಲಿ ಬಿಎ ಪದವಿ ಕೂಡ ಗಳಿಸಿಕೊಂಡರು. ಏತನ್ಮಧ್ಯೆ 2013ರಲ್ಲಿ ಅವರು ದುರ್ಗಾಡಿ ಕೋಟೆಯಲ್ಲಿ ನಡೆದ ಕೋಮು ಗಲಭೆಯಲ್ಲಿ 177 ಇತರ ಮುಖಂಡರೊಡನೆ ಜೈಲುವಾಸ ಅನುಭವಿಸಿದ್ದರು.

 

2004ರಲ್ಲಿ ಮೊದಲ ಬಾರಿ ಶಿವಸೇನೆ ಶಾಸಕರಾಗಿ, 2019ರಲ್ಲಿ ಪುನರಾಯ್ಕೆಯಾದರು. 2014ರವರೆಗಿನ ತಮ್ಮ ಶಾಸಕತ್ವದಲ್ಲಿ ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಶಿವಸೇನೆ ಬೆಂಬಲಿತ ಬಿಜೆಪಿ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಈ ಮಧ್ಯೆ ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಸಚಿವರಾಗಿ, ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2020ರಲ್ಲಿ ಠಾಣೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಇದರೊಂದಿಗೇ ಸದಾ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ತೀವ್ರವಾಗಿ ಪ್ರತಿಪಾದಿಸುತ್ತ ಬಂದಿದ್ದ ಅವರನ್ನು ಉದ್ಧವ ಠಾಕ್ರೆ ಸರಕಾರ ಗಡಿ ಉಸ್ತುವಾರಿ ಸಚಿವರಾಗಿಯೂ ನೇಮಿಸಿತ್ತು.

 

ಇದೀಗ ಉದ್ಧವ ಠಾಕ್ರೆ ಅವರ ವಿರುದ್ಧವೇ ಬಂಡೆದ್ದು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದವರೆಗೂ ತಲುಪಿರುವ ಶಿಂದೆ ರಾಷ್ಟ್ರೀಯ ಪಕ್ಷ ಬಿಜೆಪಿ ಬೆಂಬಲಿತ ಸರಕಾರದಲ್ಲಿ ಗಡಿ ವಿಚಾರವಾಗಿ ತಮ್ಮ ಕಠೋರ ಧೋರಣೆಗಳನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲಕಾರಿ ಅಂಶವಾಗಿದೆ.

 

ಜೀವನವನ್ನೇ ತ್ಯಜಿಸುವ ನಿರ್ಧಾರಕ್ಕೆ ನೂಕಿದ್ದ ಕೌಟುಂಬಿಕ ದುರಂತ:

 

ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದವರೆಗೂ ತಲುಪಿರುವ ಏಕನಾಥ ಶಿಂದೆಯವರಿಗೆ ಕುಟುಂಬದಲ್ಲಿ ನಡೆದಿದ್ದ ದುರಂತವೊಂದು ಜೀವನವನ್ನೇ ತ್ಯಜಿಸುವ ನಿರ್ಧಾರ ತಳೆಯುವಂತೆ ಮಾಡಿತ್ತು. 2000ನೇ ಇಸ್ವಿಯ ಜೂ.2ರಂದು ಶಿಂದೆಯವರ 11 ವರ್ಷದ ಪುತ್ರ ದೀಪೇಶ ಹಾಗೂ 7 ವರ್ಷದ ಪುತ್ರಿ ಶುಭದಾ ಅವರ ಸ್ವಗ್ರಾಮದಲ್ಲಿ ಬೋಟಿಂಗ್ ನಲ್ಲಿ ತೊಡಗಿದ್ದಾಗ ಮುಳುಗಿ ಮೃತಪಟ್ಟಿದ್ದರು. ಕಣ್ಣೆದುರೇ ನಡೆದ ಈ ಘಟನೆ ಶಿಂದೆಯವರನ್ನು ಅಕ್ಷರಶಃ ಅಧೀರರಾಗಿ ಕುಸಿದುಹೋಗುವಂತೆ ಮಾಡಿತ್ತು.

 

ಆಗ “ರಾಜಕೀಯವಷ್ಟೇ ಅಲ್ಲ, ಜೀವನವನ್ನೇ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ಹೇಳಿಕೊಂಡಿದ್ದ ಶಿಂಧೆ ಆ ನೋವಿನಿಂದ ಹೊರ ಬರಲು ಸಾಕಷ್ಟು ದಿನಗಳೇ ಬೇಕಾದವು.


Spread the love

About Laxminews 24x7

Check Also

ಅಕ್ಷಯ ತೃತೀಯ 2024ರ ಪೂಜಾ ಸಮಯ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

Spread the loveಅಕ್ಷಯ ತೃತೀಯವನ್ನು ಹಿಂದೂ ಧರ್ಮದಲ್ಲಿ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಧಾರ್ಮಿಕ ದೃಷ್ಟಿಕೋನದ ಹೊರತಾಗಿ, ಅಕ್ಷಯ ತೃತೀಯ ದಿನವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ