Home / Uncategorized / ತಾಲಿಬಾನ್‌ನ ಸೂತ್ರ ಹಿಡಿದಿರುವ ಏಳು ಮಂದಿ ನಾಯಕರು ಯಾರು? ಅವರ ಜವಾಬ್ದಾರಿಗಳೇನು? ಎನ್ನುವ ವಿವರ ಇಲ್ಲಿದೆ.

ತಾಲಿಬಾನ್‌ನ ಸೂತ್ರ ಹಿಡಿದಿರುವ ಏಳು ಮಂದಿ ನಾಯಕರು ಯಾರು? ಅವರ ಜವಾಬ್ದಾರಿಗಳೇನು? ಎನ್ನುವ ವಿವರ ಇಲ್ಲಿದೆ.

Spread the love

 

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಅಧಿಕೃತ ಆಳ್ವಿಕೆ ಆರಂಭಿಸುವುದಷ್ಟೇ ಬಾಕಿಯಿದೆ. ತಾಲಿಬಾನ್ ಸಂಘಟನೆಯಲ್ಲಿ ಈ ಪ್ರಮುಖ 7 ಮಂದಿ ನಾಯಕರೇ ಎಲ್ಲ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ.

 

ತಾಲಿಬಾನ್‌ನ ಸೂತ್ರ ಹಿಡಿದಿರುವ ಏಳು ಮಂದಿ ನಾಯಕರು ಯಾರು? ಅವರ ಜವಾಬ್ದಾರಿಗಳೇನು? ಎನ್ನುವ ವಿವರ ಇಲ್ಲಿದೆ.

ತಾಲಿಬಾನ್‌ ಸಂಘಟನೆಯು ತನ್ನದೇ ಆದ ಏಣಿಶ್ರೇಣಿ ವ್ಯವಸ್ಥೆ ಹೊಂದಿದೆ. ಸಂಘಟನೆಯಲ್ಲಿ 7 ಪ್ರಮುಖ ನಾಯಕರೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ತಾಲಿಬಾನ್ ಸಂಘಟನೆಯ ಬಗ್ಗೆ ಬಹಳಷ್ಟು ವಿಷಯಗಳು ಹೊರ ಜಗತ್ತಿಗೆ ಗೊತ್ತಿಲ್ಲ. ತಾಲಿಬಾನ್ ಸಂಘಟನೆ, ಅದರ ನಾಯಕರು, ಅವರ ಜವಾಬ್ದಾರಿ, ಕಾರ್ಯಾಚರಣೆಗಳು ನಿಗೂಢ. ತಾಲಿಬಾನ್‌ನ ಕೆಲ ಟಾಪ್ ನಾಯಕರ ಬಗ್ಗೆ ಮಾತ್ರ ಹೊರ ಜಗತ್ತಿಗೆ ಗೊತ್ತಿದೆ. ಈಗ ತಾಲಿಬಾನ್ ಸಂಘಟನೆಯು ತಮ್ಮನ್ನು ತಾವು ಉದಾರವಾದಿ ಸಂಘಟನೆ ಎಂದು ಬಿಂಬಿಸಿಕೊಳ್ಳುವ ಯತ್ನ ಮಾಡುತ್ತಿದೆ. ಅಫ್ಘಾನ್ ಸೈನಿಕರು, ಅಧಿಕಾರಿಗಳು ಸೇರಿದಂತೆ ತಮ್ಮ ವಿರುದ್ಧ ಇದ್ದವರಿಗೆ ಕ್ಷಮಾದಾನ ನೀಡಿದ್ದಾರೆ.

ಎಲ್ಲ ಜನಾಂಗ, ವರ್ಗಗಳನ್ನು ಒಳಗೊಳ್ಳುವ ಸರ್ಕಾರ ರಚನೆಯ ಮಾತುಗಳನ್ನಾಡುತ್ತಿದ್ದಾರೆ. ನೆರೆಹೊರೆಯ ದೇಶಗಳಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಅಫ್ಘಾನ್ ನೆಲವನ್ನು ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ. ಮಹಿಳೆಯರು ಷರಿಯತ್ ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಬಹುದು ಎಂದು ಹೇಳಿರುವ ತಾಲಿಬಾನ್ ಸಂಘಟನೆಯು ಆಮೆರಿಕಾ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ತಮ್ಮ ಆಳ್ವಿಕೆಗೆ ಮನ್ನಣೆ, ಮಾನ್ಯತೆ ಪಡೆಯಲು ಯತ್ನಿಸುತ್ತಿದೆ.

ಈಗ ತಾಲಿಬಾನ್ ನಾಯಕರಾಗಿರುವ ಅನೇಕರು 1980ರ ದಶಕದಲ್ಲಿ ಆಮೆರಿಕಾದಿಂದಲೇ ತರಬೇತಿ ಪಡೆದವರು. ಆಗ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದ ಸೋವಿಯತ್ ಒಕ್ಕೂಟದ ವಿರುದ್ಧ ತಾಲಿಬಾನಿಗಳು ಹೋರಾಡುತ್ತಿದ್ದರು. ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಪಶ್ತೂನ್ ಜನಾಂಗವು ಸುನ್ನಿ ಮುಸ್ಲಿಂ ಉಪಪಂಗಡವನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ.

ತಾಲಿಬಾನ್ ಸಂಘಟನೆಯಲ್ಲಿ ನೀತಿ ರೂಪಿಸುವ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ 7 ಮುಖ್ಯ ಜನರ ಪರಿಚಯ ಇಲ್ಲಿದೆ. ತಾಲಿಬಾನ್ ಸಂಘಟನೆಯ ಮುಖ್ಯ ನಾಯಕ ಹಬೀತುಲ್ಲಾ ಅಖಾಂದಾಜ, ನಂತರದ ಸ್ಥಾನದಲ್ಲಿ ಮುಲ್ಲಾ ಅಬ್ದುಲ್ ಘನಿ ಬಾರದರ್, ಸಿರಾಜುದ್ದೀನ್ ಹಕ್ಕಾನಿ, ಮೊಹಮ್ಮದ್ ಯಾಕೂಬ್‌ ಇದ್ದಾರೆ.

ಹಬೀತುಲ್ಲಾ ಅಖಾಂದಾಜ
1961ರಲ್ಲಿ ಹುಟ್ಟಿದ ಹಬೀತುಲ್ಲಾ ಅಖಾಂದಾಜ ತಾಲಿಬಾನ್ ಸಂಘಟನೆಯ ಸುಪ್ರೀಂ ಕಮಾಂಡರ್. ಇದು ತಾಲಿಬಾನ್ ಸಂಘಟನೆಯಲ್ಲಿ ಉನ್ನತ ಱಂಕ್. ಮುಲ್ಲಾ ಓಮರ್​ನನ್ನು 2016ರಲ್ಲಿ ಆಮೆರಿಕಾ ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಿದ ಬಳಿಕ ಹಬೀತುಲ್ಲಾ ಅಖಾಂದಾಜನೇ ಸುಪ್ರೀಂ ಕಮಾಂಡರ್ ಆಗಿದ್ದಾನೆ. ಈತ ತಾಲಿಬಾನ್ ಸಂಘಟನೆಯ ಮೂರನೇ ಸುಪ್ರೀಂ ಕಮಾಂಡರ್. ಈತ ಹೆಚ್ಚಾಗಿ ಧಾರ್ಮಿಕ ನಾಯಕಯಾಗಿಯೂ ಜನಪ್ರಿಯನಾಗಿದ್ದಾನೆ. ಸದಾ ಲೋ ಪ್ರೊಫೈಲ್ ಕಾಪಾಡಿಕೊಳ್ಳುವ ನಾಯಕ ಕಳೆದ ಮೇ ತಿಂಗಳಿನಲ್ಲಿ ರಂಜಾನ್ ಆಚರಣೆ ಬಗ್ಗೆ ಹೇಳಿಕೆ ನೀಡಿದ್ದೇ ಕೊನೆ, ತಾಲಿಬಾನ್ ಸಂಘಟನೆಯ ಸುಪ್ರೀಂ ಕಮಾಂಡರ್ ಆದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಡೆಪ್ಯುಟಿ ಲೀಡರ್ ಮುಲ್ಲಾ ಅಬ್ದುಲ್ ಘನಿ ಬಾರದರ್
ತಾಲಿಬಾನ್ ಸಂಘಟನೆಯ ಡೆಪ್ಯುಟಿ ಲೀಡರ್ ಮುಲ್ಲಾ ಅಬ್ದುಲ್ ಘನಿ ಬಾರದರ್. ತಾಲಿಬಾನ್ ಸಂಘಟನೆಯ ಸಾರ್ವಜನಿಕ ಮುಖ ಅಂದ್ರೆ ಮುಲ್ಲಾ ಅಬ್ದುಲ್ ಘನಿ ಬಾರದರ್. ಈತನೇ ಅಫ್ಘಾನಿಸ್ತಾನದ ಮುಂದಿನ ರಾಷ್ಟ್ರಾಧ್ಯಕ್ಷ ಆಗುವ ಸಾಧ್ಯತೆಯೇ ಹೆಚ್ಚು. ಅಬ್ದುಲ್ ಘನಿ ಬಾರದರ್, ಒಸಾಮಾ ಬಿನ್ ಲಾಡೆನ್ ಜೊತೆಗೆ ಕೆಲಸ ಮಾಡಿದ್ದಾನೆ. ಬಾಮೈದ ಮುಲ್ಲಾ ಮೊಹಮ್ಮದ್ ಓಮರ್ ಜೊತೆಗೆ ಸೇರಿ ತಾಲಿಬಾನ್ ಸಂಘಟನೆ ಸ್ಥಾಪಿಸಿದವನು ಈ ಮುಲ್ಲಾ ಅಬ್ದುಲ್ ಘನಿ ಬಾರದರ್. ಈಗ ತಾಲಿಬಾನ್ ಸಂಘಟನೆಯ ರಾಜಕೀಯ ಮುಖ್ಯಸ್ಥ . 2010 ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಮುಲ್ಲಾ ಅಬ್ದುಲ್ ಘನಿ ಬಾರದರ್​ನನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಅಫ್ಘಾನಿಸ್ತಾನದಲ್ಲಿರುವ ಆಮೆರಿಕಾ ವಿಶೇಷ ರಾಯಭಾರಿ ಜಲಮಯ್ ಖಿಲಾಜದ್, 2018ರಲ್ಲಿ ಈತನನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಹಾಯ ಮಾಡಿದ್ದ. ಡೋನಾಲ್ಡ್ ಟ್ರಂಪ್ ಜೊತೆಗೆ ಶಾಂತಿ ಮಾತುಕತೆ ನಡೆಸಲು ಅನುಕೂಲವಾಗಲೆಂದು ಮುಲ್ಲಾ ಅಬ್ದುಲ್ ಘನಿ ಬಾರದರ್​ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಬಳಿಕ ಕತಾರ್‌ನ ದೋಹಾದಲ್ಲಿ ಮುಲ್ಲಾ ಅಬ್ದುಲ್ ಘನಿ ಬಾರದರ್ ವಾಸ್ತವ್ಯ ಹೂಡಿದ್ದ. ದೋಹಾದಲ್ಲೇ ತಾಲಿಬಾನ್ ಸಂಘಟನೆಯು ತನ್ನ ರಾಜಕೀಯ ವ್ಯವಹಾರಗಳ ಕಚೇರಿ ತೆರೆದಿದೆ. ಕಳೆದ ಮಂಗಳವಾರ ರಾತ್ರಿ ಅಫ್ಘಾನಿಸ್ತಾನದ ಕಂದಹಾರ್​ಗೆ ಅಬ್ದುಲ್ ಘನಿ ಬಾರದರ್ ಬಂದಿಳಿದಿದ್ದಾನೆ. ಕಂದಹಾರ್ ನಗರವೇ ತಾಲಿಬಾನ್ ಸಂಘಟನೆಯ ಹುಟ್ಟೂರು. ಅಬ್ದುಲ್ ಘನಿ ಬಾರದರ್ ಕಳೆದ ವರ್ಷದ ಫೆಬ್ರವರಿಯಲ್ಲಿ ಆಮೆರಿಕಾದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾನೆ. ಆಗಲೇ ಆಮೆರಿಕಾ, ನ್ಯಾಟೊ ಪಡೆಗಳನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವ ಬಗ್ಗೆ ಒಪ್ಪಂದಕ್ಕೆ ಬರಲಾಗಿತ್ತು. ಇತ್ತೀಚೆಗೆ ತಿಯಾಂಜಿನ್​ನಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅನ್ನು ಅಬ್ದುಲ್ ಘನಿ ಬಾರದರ್ ಭೇಟಿಯಾಗಿದ್ದ.

ಸಿರಾಜುದ್ದೀನ್ ಹಕ್ಕಾನಿ
ಹಕ್ಕಾನಿ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿ. ಹಕ್ಕಾನಿ ನೆಟ್​ವರ್ಕ್ ಸಂಘಟನೆಯನ್ನು ಆಮೆರಿಕಾ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ತಾಲಿಬಾನ್ ಸಂಘಟನೆಯ ಡೆಪ್ಯುಟಿ ಲೀಡರ್ ಸಿರಾಜುದ್ದೀನ್ ಹಕ್ಕಾನಿ. ಹಕ್ಕಾನಿ ನೆಟ್​ವರ್ಕ್ 2016ರಲ್ಲಿಯೇ ತಾಲಿಬಾನ್ ಸಂಘಟನೆಯ ಜೊತೆಗೆ ವಿಲೀನಗೊಂಡಿದೆ. ಪಾಕಿಸ್ತಾನ-ಅಫ್ಘನಿಸ್ತಾನದ ನಡುವೆ ಓಡಾಡಿಕೊಂಡು ಇರುತ್ತಿದ್ದ ವ್ಯಕ್ತಿಯೀತ. ತಾಲಿಬಾನ್ ಸಂಘಟನೆಯ ಮಿಲಿಟರಿ, ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ. ಈತನ ಸೋದರನನ್ನು ಬಹರೇನ್​ನಲ್ಲಿ 2014ರಲ್ಲಿ ಆಮೆರಿಕಾ ಪಡೆಗಳು ವಶಕ್ಕೆ ಪಡೆದಿದ್ದವು. ನಾಲ್ಕು ವರ್ಷಗಳ ಬಳಿಕ ಕೈದಿಗಳ ವಿನಿಮಯ ವೇಳೆ ಜೈಲಿನಿಂದ ಬಿಡುಗಡೆ ಮಾಡಿದೆ.

ಮೊಹಮ್ಮದ್ ಯಾಕೂಬ್
ಈತ ತಾಲಿಬಾನ್ ಸ್ಥಾಪಕ ಮುಲ್ಲಾ ಓಮರ್ ಪುತ್ರ. ತಾಲಿಬಾನ್ ಸಂಘಟನೆಯಲ್ಲಿ ನಾಲ್ಕನೇ ಪ್ರಮುಖ ವ್ಯಕ್ತಿ. ಶಿಕ್ಷಿತನಾಗಿರುವ ಈತ ಈಗ ಅಫ್ಘಾನಿಸ್ತಾನದಲ್ಲಿದ್ದಾನೆ. ಸಿರಾಜುದ್ದೀನ್ ಹಕ್ಕಾನಿ ಜೊತೆಗೆ ಸೇರಿ ತಾಲಿಬಾನ್ ಸಂಘಟನೆಯ ಮಿಲಿಟರಿ ಚಟುವಟಿಕೆ ನೋಡಿಕೊಳ್ಳುತ್ತಾನೆ.

ಅಬ್ದುಲ್ ಹಕೀಮ್ ಹಕ್ಕಾನಿ
ಅಬ್ದುಲ್ ಹಕೀಮ್ ಹಕ್ಕಾನಿ ತಾಲಿಬಾನ್ ಸಂಘಟನೆಯ ಪ್ರಮುಖ ಸಂಧಾನಕಾರ. ವಿವಿಧ ದೇಶಗಳು, ಸಂಘಟನೆಗಳ ಜೊತೆಗೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಅಬ್ದುಲ್ ಹಕೀಮ್ ಹಕ್ಕಾನಿಗೆ ನೀಡಲಾಗಿದೆ. ತಾಲಿಬಾನ್​ನ ಸುಪ್ರೀಂ ಲೀಡರ್ ಹಬೀತುಲ್ಲಾ ಅಖಾಂದಾಜಗೆ ಅಬ್ದುಲ್ ಹಕೀಮ್ ಹಕ್ಕಾನಿ ಆಪ್ತ.

ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕಜೈ
ಈತ ಬೇರೆ ತಾಲಿಬಾನ್ ನಾಯಕರಂತಲ್ಲ. ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಾನೆ. 1996ರಿಂದ 2001ರ ಅವಧಿಯಲ್ಲಿ ತಾಲಿಬಾನ್ ಆಳ್ವಿಕೆ ಇದ್ದಾಗ, ಡೆಪ್ಯುಟಿ ವಿದೇಶಾಂಗ ಮಂತ್ರಿಯಾಗಿದ್ದ. ವಿದೇಶಗಳಲ್ಲಿ ಸುತ್ತಿದ್ದಾನೆ. 1996ರಲ್ಲಿ ಆಮೆರಿಕಾಕ್ಕೆ ಭೇಟಿ ನೀಡಿ, ಬಿಲ್ ಕ್ಲಿಂಟನ್ ಸರ್ಕಾರವನ್ನು ತಾಲಿಬಾನ್ ಆಳ್ವಿಕೆಗೆ ಮಾನ್ಯತೆ ನೀಡುವಂತೆ ಮನವೊಲಿಸುವ ವಿಫಲ ಪ್ರಯತ್ನ ನಡೆಸಿದ್ದ. ಚೀನಾಕ್ಕೂ ಸರ್ಕಾರಿ ಅಧಿಕಾರಿಗಳ ನಿಯೋಗ ಕೊಂಡೊಯ್ದಿದ್ದ. ಹಿಂದಿನ ಅಫ್ಘಾನ್ ಸರ್ಕಾರದ ಅಧಿಕಾರಿಗಳ ಜೊತೆಗೆ ಸಂಧಾನದ ಕೆಲಸವನ್ನು ಈತ ಮಾಡಿದ್ದಾನೆ.

ಜಬೀವುಲ್ಲಾ ಮುಜಾಯಿದ್, ಪ್ರಧಾನ ವಕ್ತಾರ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಮೊದಲ ಪತ್ರಿಕಾಗೋಷ್ಠಿ ನಡೆಸಿದಾದ ಸಂಘಟನೆಯ ಪ್ರಧಾನ ವಕ್ತಾರ ಜಬೀವುಲ್ಲಾ ಮುಜಾಯಿದ್. ಕಾಬೂಲ್ ಪ್ರೆಸಿಡೆನ್ಸಿಯಲ್ ಪ್ಯಾಲೇಸ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಾಲಿಬಾನ್ ಸಂಘಟನೆಯ ಈಗಿನ ಒಲವು-ನಿಲುವುಗಳ ಬಗ್ಗೆ ಈತ ಸ್ಪಷ್ಟಪಡಿಸಿದ. ತಾಲಿಬಾನ್ ಸಂಘಟನೆಯ ಸಂದೇಶವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಲುಪಿಸುವ ಹೊಣೆಗಾರಿಕೆ ಈ ಜಬೀವುಲ್ಲಾ ಮುಜಾಯಿದ್‌ ಮೇಲಿದೆ. ಕಳೆದ 20 ವರ್ಷಗಳಿಂದ ತಾಲಿಬಾನ್ ಸಂಘಟನೆಯ ಅಭಿಪ್ರಾಯವನ್ನು ಮಾಧ್ಯಮಗಳಿಗೆ ತಿಳಿಸುತ್ತಿದ್ದುದ್ದೇ ಈ ಜಬೀವುಲ್ಲಾ ಮುಜಾಯಿದ್. ಆಗಸ್ಟ್ 17ರಂದು ಕಾಬೂಲ್​ನ ಪ್ರೆಸಿಡೆನ್ಸಿಯಲ್ ಪ್ಯಾಲೇಸ್​ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ.


Spread the love

About Laxminews 24x7

Check Also

ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

Spread the loveಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಕಂಟ್ರಿ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಸೆಂಟ್ರಿಂಗ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ