Breaking News
Home / ರಾಜ್ಯ / ಅರಣ್ಯ ಸಿಬ್ಬಂದಿಗೆ ಇಂಧನ ಭತ್ಯೆ ಅಗತ್ಯ: ಲಿಂಬಾವಳಿ

ಅರಣ್ಯ ಸಿಬ್ಬಂದಿಗೆ ಇಂಧನ ಭತ್ಯೆ ಅಗತ್ಯ: ಲಿಂಬಾವಳಿ

Spread the love

ಬೆಂಗಳೂರು: ಅರಣ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಗೆ ಇಂಧನ ಭತ್ಯೆ ನೀಡಬೇಕಾದ ಅಗತ್ಯವಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಅರಣ್ಯ ಭವನದಲ್ಲಿ ಬುಧವಾರ ನಡೆದ ಹಿರಿಯ ಐಎಫ್‌ಎಸ್‌ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಇಲಾಖೆಯ ಕೆಳಹಂತದ ಸಿಬ್ಬಂದಿಗೆ ವಾಹನ ಸೌಲಭ್ಯ ನೀಡಿಲ್ಲ. ಅರಣ್ಯ ರಕ್ಷಣೆಗಾಗಿ ಅವರು ಸ್ವಂತ ವಾಹನವನ್ನೇ ಬಳಕೆ ಮಾಡುತ್ತಿದ್ದಾರೆ. ಅಂತಹ ಸಿಬ್ಬಂದಿಗೆ ಇಂಧನ ಭತ್ಯೆಯನ್ನಾದರೂ ನೀಡಬೇಕಿದೆ’ ಎಂದರು.

ಕಾಡು ಪ್ರಾಣಿಗಳ ದಾಳಿಯಿಂದ ಸಣ್ಣ ಸಾಕು ಪ್ರಾಣಿಗಳು ಮೃತಪಟ್ಟರೆ ₹ 5,000 ಮತ್ತು ದೊಡ್ಡ ಪ್ರಾಣಿಗಳು ಮೃತಪಟ್ಟರೆ ₹ 10,000 ಪರಿಹಾರ ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಿಸಬೇಕಿದೆ. ಕಾಡು ಪ್ರಾಣಿಗಳ ದಾಳಿಯಿಂದ ಮನುಷ್ಯರು ಮೃತಪಟ್ಟಾಗ ನೀಡುವ ಪರಿಹಾರದ ಮೊತ್ತವನ್ನೂ ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು.

ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವುದರಿಂದ ವನ್ಯಜೀವಿಗಳಿಗೆ ತೊಂದರೆ ಆಗುತ್ತಿದೆ. ಈ ಕಾರಣದಿಂದಾಗಿ ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಈ ಸಮಸ್ಯೆ ನಿಯಂತ್ರಿಸುವ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಸಚಿವರು ಹೇಳಿದರು.

ಅರಣ್ಯ ಪ್ರದೇಶ ಹೆಚ್ಚಳ ಅಗತ್ಯ: ಸಭೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ರಾಜ್ಯದಲ್ಲಿ ಒಟ್ಟು ಭೂಪ್ರದೇಶದ ಶೇಕಡ 22.8ರಷ್ಟು ಅರಣ್ಯ ಪ್ರದೇಶವಿದೆ. ಅದನ್ನು ಶೇ 33ಕ್ಕೆ ಹೆಚ್ಚಿಸಬೇಕಿದೆ. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣಿನ ಗಿಡಗಳನ್ನು ನೆಡುವುದಕ್ಕೆ ಆದ್ಯತೆ ನೀಡಬೇಕು. ಅರಣ್ಯ ವಾಸಿಗಳು ಮತ್ತು ರೈತರ ಜತೆ ಸೌಹಾರ್ದಯುತ ಸಂಬಂಧ ಇರಿಸಿಕೊಂಡು ಅರಣ್ಯ ಅಭಿವೃದ್ಧಿ ಮಾಡಬೇಕು. ಬೇಸಿಗೆ ಸಮೀಪಿಸುತ್ತಿದ್ದು, ಕಾಡ್ಗಿಚ್ಚು ಹಬ್ಬುವ ಅಪಾಯವಿದೆ. ಕಾಡ್ಗಿಚ್ಚು ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅರಣ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ, ಅರಣ್ಯ ಪಡೆಗಳ ಮುಖ್ಯಸ್ಥರಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್‌ ಮೋಹನ್‌ ಮತ್ತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್‌ ಕುಮಾರ್‌ ಗೋಗಿ ಸಭೆಯಲ್ಲಿದ್ದರು.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ