ಬೆಂಗಳೂರು: ಕೊರೊನಾ ಸೃಷ್ಟಿಸಿದ ಅವಾಂತರಗಳಿಂದ ಒಂದೆಡೆ ಜನಸಾಮಾನ್ಯರು ಕೆಲಸವಿಲ್ಲದೇ ಪರದಾಡುತ್ತಿದ್ದರೆ, ಮತ್ತೊಂದೆಡೆ ದುಡಿದ ಕೆಲಸಕ್ಕೂ ಸಂಬಳ ಸಿಗದೇ ಕೆಲ ಜನ ಒದ್ದಾಡುತ್ತಿದ್ದಾರೆ. ಇದಕ್ಕೆ ನೈಜ ಉದಾಹರಣೆಯೆಂದರೆ ಸೆಕ್ಯೂರಿಟಿ ಗಾರ್ಡ್. ಖಾಸಗಿ ಕಾಲೇಜೊಂದು ಸೆಕ್ಯೂರಿಟಿ ಗಾರ್ಡ್ ಗಳಿಗೆ ಸಂಬಳವನ್ನು ನೀಡದೇ ಸತಾಯಿಸುತ್ತಿದೆ.
ಹೌದು. ಕೊರೊನಾದಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಲಾಕ್ ಡೌನ್ ಆದ್ರೂ ಕೆಲವೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನ ಎಂಎಸ್ ಪಾಳ್ಯದ ಸಂಭ್ರಮ ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕೊರೊನಾ ನೆಪವೊಡ್ಡಿ ಮೂರು ತಿಂಗಳ ಸಂಬಳವನ್ನೇ ಹಾಕಿಲ್ಲ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ಮೂರು ತಿಂಗಳ ಸಂಬಳವನ್ನು ಒಬ್ಬರಿಗೆ 10 ಸಾವಿರದಂತೆ ನೀಡಿಲ್ಲವೆಂದು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪ್ರಶ್ನಿಸಲು ಹೋದವರದಿಗಾರರಿಗೆ ಕಾಲೇಜಿನ ಪ್ರಿನ್ಸಿಪಾಲ್, ಯಾವುದಕ್ಕೂ ಉತ್ತರ ಕೊಡದೇ ಮೊಂಡುತನ ಪ್ರದರ್ಶಿಸಿದ್ದಾರೆ. ನಮಗೆನೂ ಗೊತ್ತಿಲ್ಲ, ಮ್ಯಾನೆಜ್ಮೆಂಟ್, ಏಜೆನ್ಸಿಯವ್ರನ್ನು ಕೇಳಿ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸಿದ ಖಾಸಗಿ ಏಜೆನ್ಸಿ, ಕಾಲೇಜು ಮ್ಯಾನೆಜ್ಮೆಂಟ್ ಕೊಟ್ಟಿಲ್ಲ ನಾವು ಸಂಬಂಳ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದುಡಿದ ಬಡ ಜೀವಗಳು ಸಂಬಳವಿಲ್ಲದೇ ಕಷ್ಟಪಡುತ್ತಿವೆ. ಪ್ರತಿಷ್ಠಿತ ಕಾಲೇಜಿಗೆ ತಿಂಗಳಿಗೆ 10 ಸಾವಿರ ಕೊಡೋದು ಭಾರವಾಯಿತೇ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.