ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ 12 ಕೇಸ್ ಪತ್ತೆಯಾಗಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬ ಇಡೀ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಐದೂವರೆ ತಿಂಗಳ ಮಗುವಿನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಇಡೀ ಭಟ್ಕಳ ನಗರವನ್ನು ಸೀಲ್‍ಡೌನ್ ಮಾಡಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳವೀಗ ಕೊರೊನಾ ಹಾಟ್‍ಸ್ಪಾಟ್ ತಾಣವಾಗಿದೆ. ಒಂದೇ ದಿನ 12 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಭಟ್ಕಳದಿಂದ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬದಿಂದಲೇ ಈ ಕೇಸ್ ಪತ್ತೆಯಾಗಿದೆ. ಮೇ 5ರಂದು ಪಟ್ಟಣದ ಮದೀನಾ ಕಾಲೋನಿಯ 18 ವರ್ಷದ ಯುವತಿ ರೋಗಿ ನಂಬರ್ 659ರಿಂದಲೇ 12 ಜನರಿಗೆ ಸೋಂಕು ತಗುಲಿದೆ. ಯುವತಿಯ ಕುಟುಂಬದ 10 ಮಂದಿ ಹಾಗೂ ಪಕ್ಕದ ಮನೆಯಾಕೆ, ಆಕೆ ಗೆಳತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಅತೀ ಹೆಚ್ಚು ಪಾಸಿಟಿವ್ ಬಂದ ಭಟ್ಕಳದ ಮದೀನ ಕಾಲೋನಿಯನ್ನು ಹಾಟ್‍ಸ್ಪಾಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಪೊಲೀಸ್ ಇಲಾಖೆಗೆ ಇಡೀ ತಾಲೂಕನ್ನ ಕಂಟ್ರೋಲ್‍ಗೆ ತೆಗೆದುಕೊಂಡಿದೆ. ಇಡೀ ಭಟ್ಕಳವನ್ನು 5 ವಲಯಗಳಾಗಿ ವಿಂಗಡಿಸಿ ಪ್ರತಿ ವಲಯಕ್ಕೆ ಓರ್ವ ಪೊಲೀಸ್ ಅಧಿಕಾರಿ ಹಾಗೂ ವಲಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಲ್ಲದೇ ಇಂದಿನಿಂದ ಭಟ್ಕಳದಲ್ಲಿ ಖಾಸಗಿ ವೈದ್ಯಕೀಯ ಸೇವೆ, ಮೆಡಿಕಲ್, ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲವೂ ಬಂದ್ ಆಗಲಿದೆ ಎಂದು ಡಿಸಿ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.
ಸೋಂಕಿಗೆ ಒಳಗಾದ ಹನ್ನೆರಡು ಜನರನ್ನ ಕಾರವಾರದ ವಿಶೇಷ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಭಟ್ಕಳ ಮೂಲದ ಮತ್ತೆರಡು ಕುಟುಂಬದವರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಅವರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಹೀಗಾಗಿ ಬೇರೆಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಮಾಹಿತಿ ನೀಡುವಂತೆ ಡಿಸಿ ಕೋರಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಟ್ಟು 24 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 12 ಜನರು ಈಗಾಗಲೇ ಗುಣಮುಖರಾಗಿ ಮನೆಗಳನ್ನ ಸೇರಿಕೊಂಡಿದ್ದಾರೆ. ಮತ್ತೆ 12 ಪ್ರಕರಣ ದಾಖಲಾಗಿರುವುದು ಅಧಿಕಾರಿಗಳ ವಲಯಕ್ಕೆ ತಲೆನೋವು ಉಂಟುಮಾಡಿದೆ. ಇವರ ಸಂಖ್ಯೆ ಇನ್ನೆರೆಡು ದಿನದಲ್ಲಿ ಮತ್ತಷ್ಟು ಏರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ.