Breaking News
Home / ಜಿಲ್ಲೆ / ಬೆಳಗಾವಿ / ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದರೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ

ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದರೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ

Spread the love

ಬೆಳಗಾವಿ:  ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದರೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ. ಆದ್ದರಿಂದ ಮೂರು ದಿನಗಳಲ್ಲಿ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಜಿಲ್ಲಾಧಿಕಾರಿ ಕಚೇಯ ಸಭಾಂಗಣದಲ್ಲಿ ಮಂಗಳವಾರ (ಜುಲೈ 28) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಗಾಲ ಆರಂಭಗೊಂಡಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿ ರಚನೆಯನ್ನು ಮಾಡಿದ ಬಳಿಕ ಜಿಲ್ಲಾಡಳಿತಕ್ಕೆ ವರದಿಯನ್ನು ಸಲ್ಲಿಸಿ ದೃಢೀಕರಿಸಬೇಕು ಎಂದರು.

ಒಂದು ಲಕ್ಷ ಕ್ಯೂಸೆಕ್ ಹರಿವು ಬಂದರೆ ನೀರು ನುಗ್ಗುವಂತಹ ತೋಟದ ಮನೆಗಳು ಮತ್ತು ಗ್ರಾಮಗಳ ಪಟ್ಟಿ ತಯಾರಿಸಬೇಕು. ಕೃಷ್ಣೆಯಲ್ಲಿ ಎರಡು ಲಕ್ಷ ಕ್ಯೂಸೆಕ್ ಮೀರಿದರೆ ಮಾಂಜರಿ, ಯಡೂರು, ಹಿಂಗಳಿ, ಚಂದೂರ, ಚಂದೂರ ಟೇಕ್ ಸೇರಿದಂತೆ ಏಳು ಗ್ರಾಮಗಳ ಮುಳುಗಡೆಯಾಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಯೋಜನೆ ರೂಪಿಸಲಾಗುತ್ತಿದೆ.

ಮಹಾರಾಷ್ಟ್ರದ ಜಲಾಶಯಗಳು ಶೇ.90 ಭರ್ತಿಯಾದಾಗ ಹಂತ ಹಂತವಾಗಿ ನೀರು ಬಿಡುಗಡೆ ಮಾಡಿದರೆ ಪ್ರವಾಹ ಸ್ಥಿತಿ ತಡೆಗಟ್ಟಬಹುದಾದರೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಮುಂಚಿತವಾಗಿ ಚರ್ಚಿಸಿ ಪರಿಸ್ಥಿತಿ ನಿರ್ವಹಣೆಗೆ ಪ್ರಯತ್ನಿಸಲಾಗುವುದು.     ಖಾನಾಪುರ ಭಾಗದಲ್ಲಿ ಜಾಸ್ತಿ ಮಳೆಯಾದಾಗ ತಕ್ಷಣ ನವೀಲುತೀರ್ಥ ಜಲಾಶಯದ ನೀರಿನ ಪ್ರಮಾಣ ನಿರ್ವಹಣೆ ಕುರಿತು ಎಚ್ಚರಿಕೆ ವಹಿಸಬೇಕು. ಮಹಾರಾಷ್ಟ್ರದಿಂದ ನೀರುಬಿಡುಗಡೆ, ಮಳೆಯ ಪ್ರಮಾಣ ಮತ್ತು ಕೃಷ್ಣಾ, ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾದಾಗ ತಕ್ಷಣವೇ ತಮ್ಮ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಹಾರ ಕೇಂದ್ರ ಸಿದ್ಧತೆಗೆ ಸೂಚನೆ:      ಪ್ರವಾಹ ಸಂದರ್ಭದಲ್ಲಿ ಈ ಬಾರಿ ಪರಿಹಾರ ಕೇಂದ್ರ ಆರಂಭಿಸುವಾಗ ಸಮುದಾಯ ಭವನದ ಬದಲು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಲ್ಲಿ ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಪರಿಹಾರ ಕೇಂದ್ರಗಳಿಗೆ ನೋಡಲ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆಗೆ ಪಟ್ಟಿ ಸಿದ್ಧಪಡಿಸಬೇಕು. ಸರ್ಕಾರಿ ವಾಹನಗಳ ಬಳಕೆ ಮತ್ತು ತುರ್ತು ಸಂದರ್ಭದಲ್ಲಿ ಖಾಸಗಿ ವಾಹನಗಳನ್ನು ಪಡೆಯುವ ಬಗ್ಗೆ ಮುಂಚಿತವಾಗಿ ಪಟ್ಟಿ ಮಾಡಬೇಕು.  ಪರಿಹಾರ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಪಟ್ಟಿ ಸಿದ್ಧವಾಗಿಟ್ಟುಕೊಳ್ಳಬೇಕು.

ಬೋಟ್‍ಗಳ ಸಮಗ್ರ ಮಾಹಿತಿ:     ಜಿಲ್ಲೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಬೋಟ್ ಗಳು ಸುಸಜ್ಜಿತವಾಗಿರುವ ಬಗ್ಗೆ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಇನ್ನೂ ಹೆಚ್ಚಿಗೆ ಅಗತ್ಯವಿರುವ ಬೋಟ್ ಗಳನ್ನು ಖರೀದಿಸಲು ಅಥವಾ ತುರ್ತು ಸಂದರ್ಭದಲ್ಲಿ ಪಡೆಯಲು ಸಂಬಂಧಿಸಿದ ಸಂಸ್ಥೆಯ ಬಗ್ಗೆ ಮುಂಚಿತವಾಗಿಯೇ ಮಾಹಿತಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೂಚನೆ ನೀಡಿದರು.

 ಜಾನುವಾರು ಕೇಂದ್ರಗಳ ಸ್ಥಾಪನೆಗೆ ಪಟ್ಟಿ ಸಿದ್ಧಪಡಿಸಬೇಕು ಮತ್ತು ಕೂಡಲೇ ಅವುಗಳಿಗೆ ಮೇವು ಪೂರೈಸಲು ಅನುಕೂಲವಾಗುವಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರಿಹಾರ ಕೇಂದ್ರಗಳ ಪಕ್ಕದಲ್ಲೇ ಜಾನುವಾರು ಕೇಂದ್ರಗಳನ್ನು ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದರು. ಪರಿಹಾರ ಕೇಂದ್ರಗಳಿಗೆ ಅಗತ್ಯವಿರುವ ಔಷಧಿ ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಕಳೆದ ಬಾರಿ ಪ್ರವಾಹ ಬಂದಾಗ ಜಾನುವಾರುಗಳಿಗೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ಕೂಡ ಮುಂಚಿತವಾಗಿ ಯೋಜನೆ ರೂಪಿಸಬೇಕು. ಕೊಯ್ನಾ ಮತ್ತು ವಾರಣಾ ಜಲಾಶಯದಿಂದ ನೀರು ಬಿಡುಗಡೆ ಬಗ್ಗೆ ನಿರಂತರ ಮಾಹಿತಿ ವಿನಿಮಯದ ಕುರಿತು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಅನುದಾನ ಬಿಡುಗಡೆಯಾದರೆ ತುರ್ತು ಸಂದರ್ಭದಲ್ಲಿ ಸಂತ್ರಸ್ತರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಿದೆ ಎಂದರು.

ಕೋವಿಡ್ ವರದಿ ವಿಳಂಬ; ನೋಟಿಸ್ ನೀಡಲು ಸೂಚನೆ:

 ಕೋವಿಡ್-19 ಗೆ ಸಂಬಂಧಿಸಿದಂತೆ ಗಂಟಲುದ್ರವ ಮಾದರಿ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ಕಳಿಸುವುದು ಕೆಲವು ಕಡೆ ತಡವಾಗುತ್ತಿರುವುದರಿಂದ ವರದಿ ಕೂಡ ವಿಳಂಬವಾಗುತ್ತಿದೆ. ಆದ್ದರಿಂದ ಸಂಗ್ರಹಿತ ಮಾದರಿಯನ್ನು ತಕ್ಷಣವೇ ಪ್ರಯೋಗಾಲಯಕ್ಕೆ ಕಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

 ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲು ವಿಳಂಬ ಮಾಡುವ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ನೋಟಿಸ್ ನೀಡಬೇಕು.     ಕೋವಿಡ್-19 ನಿಯಂತ್ರಣ ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

 ಕರ್ನಾಟಕ ನೀರಾವರಿ ನಿಗಮದ ಬೆಳಗಾವಿ ಉತ್ತರ ವಲಯದ ಮುಖ್ಯ ಎಂಜಿನಿಯರ್ ಕಗಣಲಿ, ಜಲಾಶಯಗಳಿಂದ ನೀರು ನಿಡುಗಡೆಗೆ ಸಂಬಂಧಿಸಿದಂತೆ ಮೇಲ್ವಿಚಾರಣಾ ಸಮಿತಿ ರಚನೆ ಬಳಿಕ ನೀರು ಬಿಡುಗಡೆ ನಿರ್ವಹಣೆಗೆ ಅನುಕೂಲವಾಗಲಿದೆ. ಆದ್ದರಿಂದ ಸಮಿತಿ ರಚನೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ನೀರಾವರಿ ಇಲಾಖೆಯ ಎಂಜಿನಿಯರ್ ಸಿ.ಡಿ.ಪಾಟೀಲ, ಒಂದು ಲಕ್ಷ ಕ್ಯೂಸೆಕ್ ನೀರು ಹರಿವು ಬಂದರೆ ನದಿ ಪಕ್ಕದ ಗ್ರಾಮಗಳ ತೋಟದ ಮನೆ ಮತ್ತು ಗ್ರಾಮಗಳಿಗೆ ನೀರು ನುಗ್ಗುತ್ತದೆ. ಮಹಾರಾಷ್ಟ್ರದ ಜಲಾಶಯಗಳು ಶೇ.90 ಭರ್ತಿಯಾದಾಗ ಹಂತ ಹಂತವಾಗಿ ನೀರು ಬಿಡುಗಡೆ ಮಾಡಿದರೆ ಪ್ರವಾಹ ಸ್ಥಿತಿ ತಡೆಗಟ್ಟಬಹುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಮುಂಚಿತವಾಗಿ ಚರ್ಚಿಸಿದರೆ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗಲಿದೆ.

–3–
    ಮಹಾರಾಷ್ಟ್ರ ನೀರು ಬಿಟ್ಟಾಗ ಆಲಮಟ್ಟಿ ಜಲಾಶಯದ ನೀರಿನ ಪ್ರಮಾಣ 10 ರಿಂದ 20 ಟಿ.ಎಂ.ಸಿ ನೀರು ಕಡಿತಗೊಳಿಸಿದರೆ ಹಿನ್ನೀರಿನಿಂದ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿ ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.
    ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ನೀರಾವರಿ ಇಲಾಖೆಯ ಎಂಜಿನಿಯರ್ ಆರ್. ಬಿ.ಧಾಮಣ್ಣವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ನೀರಾವರಿ, ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ