ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಹಗಲು ರಾತ್ರಿ ಅನ್ನದೆ ಆರಕ್ಷಕರು ಹಾಗೂ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದೀಗ ತಮ್ಮ ಕೆಲಸದ ಒತ್ತಡದ ನಡುವೆಯೂ ಚಿಕ್ಕಬಳ್ಳಾಪುರ ತಹಶೀಲ್ದಾರ್ ಹಾಗೂ ನಂದಿಗಿರಿಧಾಮ ಪೊಲೀಸ್ ಠಾಣೆಯ ಪಿಎಸ್‍ಐ, ನಿರ್ಗತಿಕರಿಗೆ ಉಚಿತ ತರಕಾರಿ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿ ಗ್ರಾಮದ ಬಳಿ 40ಕ್ಕೂ ಹೆಚ್ಚು ಮಂದಿ ಟೈಲ್ಸ್ ಕೆಲಸ ಮಾಡುತ್ತಾರೆ. ಇವರು ಮಧ್ಯ ಪ್ರದೇಶ ಮೂಲದವರಾಗಿದ್ದು, ತಾತ್ಕಾಲಿಕ ಟೆಂಟ್‍ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದಲ್ಲದೇ ಇಂಡಸ್ಟ್ರೀಯಲ್ ಏರಿಯಾದಲ್ಲಿ ಹಲವು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದ ಈ ಕೂಲಿ ಕಾರ್ಮಿಕರ ಸ್ಥಳಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ಪ್ರಶಾಂತ್ ಹಾಗೂ ಪಿಎಸ್‍ಐ ಪಾಟೀಲ್ ಉಚಿತವಾಗಿ ತರಕಾರಿ ವಿತರಣೆ ಮಾಡಿದ್ದಾರೆ. ಪೊಲೀಸರು ಹಾಗೂ ತಹಶೀಲ್ದಾರ್ ಮಾನವೀಯತೆ ಕಾಯಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.