ಬೆಂಗಳೂರು: ವಾರ್ಡ್ ನಂಬರ್ 135 ಪಾದರಾಯನಪುರದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಆದರೂ ಇಮ್ರಾನ್ ಪಾಷಾ ಮನೆಯಿಂದ ಹೊರಬರುತ್ತಿಲ್ಲ.
ಇಮ್ರಾನ್ ಪಾಷಾಗೆ 158 ಜನ ಕಾಂಟ್ಯಾಕ್ಟ್ ಇದ್ದು, ಅದರಲ್ಲೂ 75 ಜನ ಪ್ರೈಮರಿ ಕಾಂಟ್ಯಾಕ್ಟ್ ಇದ್ದಾರೆ. ಉಳಿದವರೆಲ್ಲ ಸೆಕೆಂಡರಿ ಕಾಂಟ್ಯಾಕ್ಟ್ ಎಂದು ತಿಳಿದುಬಂದಿದೆ. ಹೀಗಾಗಿ ಶಾಸಕರು, ಅಧಿಕಾರಿಗಳು ಆಪ್ತರೆಲ್ಲ ಕ್ವಾರಂಟೈನ್ ಆಗುವ ಸಾಧ್ಯತೆ ಇದೆ. ಇಮ್ರಾನ್ ಪಾಷಾ ಕೊರೊನಾ ಪಾಸಿಟಿವ್ ಬಂದರೂ ಇನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿಲ್ಲ.
ಶುಕ್ರವಾರ ರಾತ್ರಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಆದರೆ ಇಡೀ ರಾತ್ರಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅಲ್ಲದೇ ಆರೋಗ್ಯಾಧಿಕಾರಿಗಳು ಮನೆಗೆ ಹೋಗಿದ್ದರೂ ಇಮ್ರಾನ್ ಸಿಕ್ಕಿರಲಿಲ್ಲ. ಈಗ ಆಸ್ಪತ್ರೆಗೆ ಶಿಫ್ಟ್ ಮಾಡಲು ಮತ್ತೆ ಆರೋಗ್ಯಾಧಿಕಾರಿಗಳು ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಹೆಂಡತಿ ಮತ್ತು ಮೂವರು ಮಕ್ಕಳಿದ್ದಾರೆ. ಆದರೆ ಕಾರ್ಪೋರೇಟರ್ ಮನೆಯಿಂದ ಹೊರಬಾರಲಿಲ್ಲ. ಹೀಗಾಗಿ ಇಮ್ರಾನ್‍ಗಾಗಿ ಅಧಿಕಾರಿಗಳು ಕಾದು ನಿಂತಿದ್ದಾರೆ.
ಇಮ್ರಾನ್ ಪಾಷಾ ಹೊರಗೆ ಬಾರದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಮನೆಯ ಬಳಿ ಪೊಲೀಸರನ್ನು ಕಳುಹಿಸಿದ್ದಾರೆ. ನಂತರ ಪೊಲೀಸರು ಇಮ್ರಾನ್ ಪಾಷಾಗೆ ಫೋನ್ ಮಾಡಿದ್ದಾರೆ. ಆಗ ಹೋಗುತ್ತೀನಿ ಸರ್, ಸ್ವಲ್ಪ ಸಮಯ ಕೊಡಿ ಅಂದಿದ್ದಾರೆ. ಇಮ್ರಾನ್ ಪಾಷಾ ಮತ್ತೊಂದು ವರದಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ರಾತ್ರಿ ಮತ್ತೊಮ್ಮೆ ಸ್ಯಾಂಪಲ್ ಕೊಟ್ಟಿದ್ದು, ಮತ್ತೆ ಟೆಸ್ಟ್ ಮಾಡಿಸಿಕೊಂಡು ಆ ವರದಿ ಬಂದ ಬಳಿಕ ಆಸ್ಪತ್ರೆಗೆ ಹೋಗಲು ಇಮ್ರಾನ್ ಕಾಯುತ್ತಿದ್ದಾರೆ. ಈ ಬಗ್ಗೆ ಪೊಲೀಸರೊಂದಿಗೆ ಹೇಳಿದ್ದಾರೆ.
ರಿಪೋರ್ಟ್ ಆಮೇಲೆ ಬರಲಿ ನೀವು ಮೊದಲು ಆಸ್ಪತ್ರೆಗೆ ಹೋಗಿ. ಇಲ್ಲ ಅಂದ್ರೆ ಕೇಸ್ ದಾಖಲು ಮಾಡಬೇಕಾಗುತ್ತೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಬೇಲ್ ಸಿಕ್ಕೊಲ್ಲ. ವರದಿ ಬರುವ ತನಕ ಪ್ರತ್ಯೇಕ ಐಲೋಲೇಷನ್ ಅಲ್ಲಿ ಇರಿ ಅಂತ ಪೊಲೀಸರು ವಾರ್ನಿಂಗ್ ಮಾಡಿದ್ದಾರೆ. ಜೊತೆಗೆ ಕೊರೊನಾ ಹರಡುವ ಸೋಂಕು ನಿಜ. ಈ ಸೋಂಕು ಬೇರೆಯವರಿಗೆ ಹರಡದಂತೆ ಕ್ರಮ ವಹಿಸೊದು ಕಾರ್ಪೋರೇಟರ್ ಕರ್ತವ್ಯ. ಆದರೆ ಪಾಸಿಟಿವ್ ಅಂತ ತಿಳಿದರೂ ಗಂಟೆಗಟ್ಟಲೆ ಮನೆಯಲ್ಲೇ ಏನ್ ಮಾಡುತ್ತಿದ್ದೀರಾ. ನಿಮ್ಮಿಂದ ಬೇರೆಯವರಿಗೆ ಕೊರೊನಾ ಬಂದರೆ ಜವಾಬ್ದಾರಿ ಯಾರು ಎಂದು ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.
ಸಾಮಾನ್ಯವಾಗಿ ಕೊರೊನಾ ರೋಗಿ ಶಿಫ್ಟ್ ಆದ ಮೇಲೆ ಔಷಧಿ ಸಿಂಪಡನೆ ಮಾಡಲಾಗುತ್ತಿದೆ. ಈಗ ರೋಗಿ ಶಿಫ್ಟ್ ಆಗದೇ 12 ಗಂಟೆಗೂ ಹೆಚ್ಚು ಕಾಲ ಕಳೆದ ಹಿನ್ನೆಲೆಯಲ್ಲಿ ಔಷಧಿ ಸಿಂಪಡನೆ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸದ್ಯಕ್ಕೆ ಪಾದರಾಯನಪುರದಲ್ಲಿ ಫುಲ್ ಹೈ ಅಲರ್ಟ್ ಮಾಡಿದ್ದು, ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಮ್ರಾನ್ ಮನೆಯ ಮುಂದೆ ಅವರ ಬೆಂಬಲಿಗರು ಮತ್ತು ಜನರು ಜಮಾಯಿಸಿದ್ದಾರೆ.