ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ನಿಯಮಗಳ ಸಡಿಲಿಕೆಯ 2ನೇ ದಿನವೂ ಮದ್ಯ ಮಾರಾಟ ಜೋರಾಗಿದ್ದು, ಇಂದು 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಮಾಡಲಾಗಿದೆ ಎಂದು ಕೆಎಸ್‍ಬಿಸಿಎಲ್ ಅಧಿಕಾರಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಮಾರಾಟವಾಗಿರುವ ಮದ್ಯದ ಮಾಹಿತಿ ನೀಡಲಾಗಿದ್ದು, 36.37 ಲಕ್ಷ ಲೀಟರ್ ಭಾರತೀಯ ಮದ್ಯ ಹಾಗೂ 7.02 ಲಕ್ಷ ಲೀಟರ್ ಬಿಯರ್ ಮಾರಾಟ ಮಾಡಲಾಗಿದೆ.
ಉಳಿದಂತೆ ಬೆಳಗ್ಗೆಯಿಂದ ನಾಲ್ಕು ಗಂಟೆಯವರೆಗೆ ಕರ್ನಾಟಕ ಪಾನೀಯ ನಿಗಮ (ಕೆಎಸ್‍ಬಿಸಿಎಲ್) ನಿಂದ ಪೂರೈಕೆ ಮಾಡಲಾದ ಮದ್ಯದ ಮಾಹಿತಿಯನ್ನು ನೀಡಲಾಗಿದ್ದು, 3.95 ಲಕ್ಷ ಕೇಸ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ 79 ಸಾವಿರ ಕೇಸ್ ಬಿಯರ್ ಪೂರೈಕೆ ಮಾಡಲಾಗಿದೆ. ಇದರ ಅಂದಾಜು ಬೆಲೆ 183 ಕೋಟಿ ರೂ. ಆಗಿದೆ.
ಬೆಂಗಳೂರಲ್ಲಿ ಒಟ್ಟು 22 ಕೆಎಸ್‍ಬಿಸಿಎಲ್ ಗೋಡೌನ್ ಗಳಿದ್ದು, ನಾಳೆಯಿಂದ ಎಲ್ಲಾ ಮದ್ಯದಂಗಡಿಗಳಲ್ಲಿ ಫುಲ್ ಸ್ಟಾಕ್ ಇರುವಂತೆ ಪೂರೈಸಲಾಗಿದೆ. ಯಶವಂತಪುರದ ಕೆಎಸ್‍ಬಿಸಿಎಲ್ ಗೋಡೌನ್ ನಿಂದ ಐಎಂಎಲ್ 4 ಸಾವಿರ ಕೇಸ್ ಹಾಗೂ 1,550 ಬಿಯರ್ ಕೇಸ್‍ಗಳನ್ನು ಯಶವಂತಪುರ ವ್ಯಾಪ್ತಿಯಲ್ಲಿರುವ 28 ಸಿ.ಎಲ್ 2 ಶಾಪ್‍ಗಳಿಗೆ ಸರಬರಾಜು ಮಾಡಲಾಗಿದೆ. ಇದರ ಅಂದಾಜು ಬೆಲೆ 2.50 ಕೋಟಿ ಆಗಿದೆ.
ನಿನ್ನೆ ಮೊದಲ ದಿನವೇ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಆಗಿತ್ತು. ಅಲ್ಲದೇ ಎಲ್ಲಾ ಪ್ರದೇಶಗಳಲ್ಲಿ ಮದ್ಯ ಪೂರೈಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.