Home / ಕೊರೊನಾವೈರಸ್ / ಖಾಸಗಿ ಬಸ್ ಗಳ ಆರ್ಥಿಕ ಸಂಕಷ್ಟ

ಖಾಸಗಿ ಬಸ್ ಗಳ ಆರ್ಥಿಕ ಸಂಕಷ್ಟ

Spread the love

ಶಿವಮೊಗ್ಗ: ಲಾಕ್‌ಡೌನ್ ತೆರವು ಬಳಿಕ ಸರ್ಕಾರಿ ಕಚೇರಿ ಆರಂಭಗೊಂಡಿರುವುದರ ಜೊತೆಗೆ ಎಲ್ಲ ರೀತಿಯ ವ್ಯಾಪಾರ-ವಹಿವಾಟುಗಳು ನಡೆಯುತ್ತಿವೆ. ಮಾರುಕಟ್ಟೆ, ಮದುವೆ ಸಮಾರಂಭಗಳಲ್ಲೂ ಜನಸಂದಣಿ ಕಾಣುತ್ತಿದ್ದೇವೆ. ಆದರೆ, ಬಸ್‌ಗಳು ಮಾತ್ರ ‘ಪ್ರಯಾಣಿಕರ ಬರ’ ಎದುರಿಸುತ್ತಿವೆ. ಅದರಲ್ಲೂ ಖಾಸಗಿ ಬಸ್‌ಗಳತ್ತ ಜನ ಸುಳಿಯುತ್ತಿಲ್ಲ.

ನಗರ ಪ್ರದೇಶಗಳನ್ನು ಹೊರತುಪಡಿಸಿದರೆ ಜಿಲ್ಲೆಯ ಬಹುತೇಕ ಗ್ರಾಮೀಣ ಜನರ ಸಂಚಾರಕ್ಕೆ ಖಾಸಗಿ ಬಸ್‌ಗಳೇ ಆಧಾರ. ಕೊರೊನಾ ಲಾಕ್‌ಡೌನ್‌ನಿಂದ ಸಂಚಾರ ಸ್ಥಗಿತಗೊಳಿಸಿದ್ದ ಖಾಸಗಿ ಬಸ್‌ ಉದ್ಯಮ ಇಂದಿಗೂ ಚೇತರಿಕೆ ಕಂಡಿಲ್ಲ. ನಷ್ಟದಲ್ಲೇ ತೆವಳುತ್ತಿದೆ.

ಕೆಲವು ತಿಂಗಳಿನಿಂದ ನಿಂತಲೇ ನಿಂತಿದ್ದ ಬಸ್‌ಗಳು ನಿಧಾನವಾಗಿ ಸೇವೆ ಆರಂಭಿಸಿವೆ. ಬಸ್‌ ಸಂಚಾರ ಆರಂಭಿಸಬೇಕಾದರೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಅಂತರ ಕಾಪಾಡುವುದು, ಕಡ್ಡಾಯ ಮಾಸ್ಕ್, ನಿಗದಿತ ಪ್ರಯಾಣಿಕರ ಸಂಖ್ಯೆ, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ತಪಾಸಣೆಯ ನಿಯಮಗಳನ್ನು ಪಾಲಿಸುವಂತೆ ಸರ್ಕಾರ ಸೂಚಿಸಿತ್ತು.

ಈ ನಿಯಮಗಳು ಖಾಸಗಿ ಬಸ್ ಮಾಲೀಕರಿಗೆ ತಲೆನೋವು ತಂದಿದ್ದವು. ಈಗ ಸರ್ಕಾರ ಹಲವು ನಿಯಮಗಳನ್ನು ಸಡಿಲಗೊಳಿಸಿದೆ. ಸೀಟುಗಳ ಸಂಖ್ಯೆಗೆ ವಿಧಿಸಿದ್ದ ನಿರ್ಬಂಧ ತೆಗೆದು ಹಾಕಲಾಗಿದೆ. ಆದರೆ, ಕೊರೊನಾ ಕಾರಣಕ್ಕೆ ಬಸ್ ಸಂಚಾರಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಪೂರ್ಣಪ್ರಮಾಣದಲ್ಲಿ ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿಲ್ಲ.

ಶೇ 30ರಷ್ಟು ಬಸ್‌ಗಳ ಸಂಚಾರ: ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿವೆ. ಅವುಗಳಲ್ಲಿ ಪ್ರಸ್ತುತ ಸಂಚಾರ ಆರಂಭಿಸಿರುವುದು 150 ಬಸ್‌ಗಳು. ಉಳಿದವು ರಸ್ತೆಗೆ ಇನ್ನೂ ಇಳಿದಿಲ್ಲ. ರಸ್ತೆಗೆ ಇಳಿದ ಬಸ್‌ಗಳೂ ನಿತ್ಯ ಆರ್ಥಿಕ ನಷ್ಟ ಅನುಭವಿಸುತ್ತಿವೆ. ಸಂಗ್ರಹವಾಗುವ ಹಣ ನಿತ್ಯದ ಖರ್ಚುಗಳಿಗೂ ಸಾಲುತ್ತಿಲ್ಲ. ಹಲವು ಮಾಲೀಕರಿಗೆ ಆರ್‌ಟಿಒ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಹಲವು ಮಾಲೀಕರು ಬಸ್‌ಗಳನ್ನು ರಸ್ತೆಗಿಳಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ.

ಖಾಸಗಿ ಬಸ್‌ಗಳಿಗೆ ಕೆಎಸ್‌ಆರ್‌ಟಿಸಿ ಸವಾಲು: ಲಾಕ್‌ಡೌನ್ ನಿಯಮ ಸಡಿಲಗೊಂಡ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಅಧಿಕ ಸಂಖ್ಯೆಯಲ್ಲಿ ರಸ್ತೆಗಿಳಿದಿವೆ. ಜಿಲ್ಲೆಯ ತಾಲ್ಲೂಕು ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಪ್ರಯಾಣಿಕರೂ ಇಂತಹ ಬಸ್‌ಗಳನ್ನೇ ಪ್ರಯಾಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣಿಕರನ್ನು ಸೆಳೆಯುವುದು ಖಾಸಗಿ ಬಸ್ ಮಾಲೀಕರಿಗೆ ಸವಾಲಾಗಿದೆ. ಖಾಸಗಿ ಬಸ್ ಸೇವೆಯಿಂದ ಪ್ರಯಾಣಿಕರು ವಿಮುಖರಾಗಬಹುದು ಎಂಬ ಆತಂಕವೂ ಕಾಡತೊಡಗಿದೆ.

ಬಡ್ಡಿ ಕಟ್ಟಲೂ ಪರದಾಟ: ಐದಾರು ತಿಂಗಳು ಬಸ್‌ಗಳು ನಿಂತಲ್ಲೇ ನಿಂತಿವೆ. ಮಳೆ, ಗಾಳಿ, ಬಿಸಿಲಿಗೆ ತುಕ್ಕು ಹಿಡಿಯಲಾರಂಭಿಸಿದೆ. ಬಂಡವಾಳ ಹಾಕಿರುವ ಮಾಲೀಕರು ಬ್ಯಾಂಕ್ ಬಡ್ಡಿ ಪಾವತಿಸಲು ಪರದಾಡುತ್ತಿದ್ದಾರೆ. ಬಸ್‌ಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ಚಾಲಕರು, ಕ್ಲೀನರ್, ನಿರ್ವಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಿರ್ವಣೆಗೆ ಪರದಾಡುತ್ತಿದ್ದಾರೆ. ಕೆಲವರು ಬೇರೆ ಬೇರೆ ಉದ್ಯೋಗ ಹಿಡಿದಿದ್ದಾರೆ.


Spread the love

About Laxminews 24x7

Check Also

ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’

Spread the love ಗದಗ : ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ (ವೈಮಾನಿಕ ಭೂ ಸಮೀಕ್ಷೆ)ಗೆ ಚಾಲನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ