Breaking News
Home / Uncategorized / ಕೊಳವೆಬಾವಿ ಅನುಮತಿ ಇಲ್ಲದೆ ತಗದರೆ ಶಿಕ್ಷೆ

ಕೊಳವೆಬಾವಿ ಅನುಮತಿ ಇಲ್ಲದೆ ತಗದರೆ ಶಿಕ್ಷೆ

Spread the love

ಬೆಂಗಳೂರು: ಕರ್ನಾಟಕ ಅಂತರ್ಜಲ ಪ್ರಾಧಿಕಾರವು ಬಾವಿ ಅಥವಾ ಕೊಳವೆಬಾವಿ ತೆರೆಯುವುದನ್ನು ನಿರ್ಬಂಧಿಸಲು ರಾಜ್ಯದ 15 ಜಿಲ್ಲೆಗಳ 45 ತಾಲೂಕುಗಳಿಗೆ ಸಂಬಂಧಪಟ್ಟಂತೆ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಅಂತರ್ಜಲ (ಅಭಿವೃದ್ಧಿ ನಿರ್ವಹಣೆ ಮತ್ತು ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನುಸಾರ ಅಂತರ್ಜಲ ಅತಿ ಬಳಕೆ ತಾಲೂಕುಗಳೆಂದು 45 ತಾಲೂಕುಗಳನ್ನು ಗುರುತಿಸಿದ್ದು, ಅಲ್ಲಿಗೆ ಸೀಮಿತವಾಗಿ ಅಧಿನಿಯಮ ಅನ್ವಯವಾಗಲಿದೆ.

ಇಂಥ ಕಡೆಗಳಲ್ಲಿ ಬಾವಿ ಅಥವಾ ಕೊಳಬೆಬಾವಿ ಕೊರೆಯಲು ಜಿಲ್ಲಾ ಮಟ್ಟದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಹಾಗೆಯೇ ಅಂತರ್ಜಲ ಬಳಕೆದಾರರು ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಅನುಮತಿ ಪತ್ರ ಹೊಂದಿರದ ಯಾವೊಬ್ಬ ವ್ಯಕ್ತಿಯು ಕೊಳವೆಬಾವಿ ಕೊರೆಸಲು ಹಣಕಾಸಿನ ಸಹಾಯ, ವಿದ್ಯುಚ್ಛಕ್ತಿ ಸಂಪರ್ಕ ಮುಂತಾದ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗುವುದಿಲ್ಲ.

ಮುಖ್ಯವಾಗಿ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಯಾವುದೇ ವ್ಯಕ್ತಿ ಅಥವಾ ಯಾವುದೆ ಕೊರೆಯುವ ಯಂತ್ರದ ಮಾಲೀಕರು ಪ್ರಾಧಿಕಾರದಲ್ಲಿ ನೊಂದಾಯಿಸಿಕೊಳ್ಳದೇ ಅಧಿಸೂಚಿತ ಪ್ರದೇಶದಲ್ಲಿ ಬಾವಿ ಅಥವಾ ಕೊಳವೆ ಬಾವಿ ತೋಡುವ ಕೆಲಸ ಕೈಗೊಂಡರೆ ಅಧಿನಿಯಮದ ಪ್ರಕರಣ 32ರಂತೆ ಶಿಕ್ಷಾರ್ಹರಾಗುತ್ತಾರೆ ಎಂದು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ಆಯಾ ಜಿಲ್ಲೆಯ ಹಿರಿಯ ಭೂ ವಿಜ್ಞಾನಿಗಳನ್ನು ಸಂರ್ಪಸಬಹುದು. ಸರ್ಕಾರದ ಅಂತರ್ಜಲ ಕರ್ನಾಟಕ ವೆಬ್​ಸೈಟನ್ನೂ ಕೂಡ ವೀಕ್ಷಿಸಬಹುದಾಗಿದೆ.

ಪಟ್ಟಿಯಲ್ಲಿರುವ ತಾಲೂಕುಗಳು

1. ಬೆಂಗಳೂರು ನಗರ- ಅನೇಕಲ್,

ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ

2. ಬೆಂಗಳೂರು ಗ್ರಾಮಾಂತರ- ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ

3. ಬಾಗಲಕೋಟೆ- ಬಾದಾಮಿ, ಬಾಗಲಕೋಟೆ

4. ಬೆಳಗಾವಿ- ರಾಮದುರ್ಗ, ಅಥಣಿ, ಸವದತ್ತಿ

5. ಬಳ್ಳಾರಿ- ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ

6. ಚಾಮರಾಜನಗರ- ಗುಂಡ್ಲುಪೇಟೆ

7. ಚಿಕ್ಕಬಳ್ಳಾಪುರ- ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಬಾಗೇಪಲ್ಲಿ

8. ಚಿಕ್ಕಮಗಳೂರು- ಕಡೂರು

9. ಚಿತ್ರದುರ್ಗ- ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು

10. ದಾವಣಗೆರೆ- ಚನ್ನಗಿರಿ, ಜಗಳೂರು

11. ಗದಗ- ಗದಗ, ರೋಣ

12. ಹಾಸನ- ಅರಸೀಕೆರೆ

13. ಕೋಲಾರ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳುಬಾಗಿಲು, ಶ್ರೀನಿವಾಸಪುರ

14. ರಾಮನಗರ- ಕನಕಪುರ, ರಾಮನಗರ

15. ತುಮಕೂರು- ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಿಪಟೂರು, ತುಮಕೂರು

ಗೊಂದಲ ಬಾಕಿ ಇಟ್ಟ ಸರ್ಕಾರ

ಪ್ರಾಧಿಕಾರ ಅಧಿಸೂಚನೆ ಹೊರಡಿಸಿ ಇನ್ನು ಮುಂದೆ ಬೋರ್​ವೆಲ್ ಹಾಕಿಸುವವರು ಅನುಮತಿ ಪಡೆದುಕೊಳ್ಳಬೇಕೆಂದು ಹೇಳಿದೆ. ಆದರೆ, ಅನುಮತಿ ಯಾರಿಗೆ ಕೊಡುತ್ತಾರೆ? ಯಾವ ಮಾನದಂಡದಲ್ಲಿ ಕೊಡುತ್ತಾರೆ? ಯಾವುದಕ್ಕೆ ಆದ್ಯತೆ ಕೊಡಲಾಗುತ್ತದೆ ಎಂಬುದನ್ನು ತಿಳಿಯಪಡಿಸಿಲ್ಲ.

ಕೊಳವೆ ಬಾವಿ ತೋಡಿಸಲು ಅನುಮತಿ ಪಡೆಯಬೇಕು ಸರಿ. ಆದರೆ, ಆದ್ಯತೆ ಏನು? ಯಾವ ಮಾನದಂಡದಲ್ಲಿ ಕೊಡುತ್ತಾರೆಂಬ ಸ್ಪಷ್ಟತೆ ಇಲ್ಲ. ಅಂತರ್ಜಲ ವೃದ್ಧಿಗೆ ಸುರಿಯುತ್ತಿರುವ ಹಣದ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳದೆ ಇದ್ದರೆ, ಇನ್ನೂ ಬಹಳ ಕಷ್ಟದ ದಿನಗಳನ್ನು ನೋಡಬೇಕಾಗುತ್ತದೆ.

| ಆಂಜನೇಯ ರೆಡ್ಡಿ ನೀರಾವರಿ ಹೋರಾಟಗಾರ

ವೆಚ್ಚ ಮಾಡಿದ 20 ಸಾವಿರ ಕೋಟಿ ರೂ. ಏನಾಯ್ತು?

ಕಳೆದ 15-20 ವರ್ಷದಿಂದ ಜಲಾನಯನ, ಅಂತರ್ಜಲ ಅಭಿವೃದ್ಧಿ, ಸುಜಲ-1, ಸುಜಲ-2 ಹೀಗೆ ವಿಶೇಷ ಕಾರ್ಯಕ್ರಮಗಳ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ, ಅರಣ್ಯ, ಕೃಷಿ, ನೀರಾವರಿ ಇಲಾಖೆ ಅಡಿ ಬರೋಬ್ಬರಿ 20-25 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ, ಇದು ಎಷ್ಟು ಫಲ ಕೊಟ್ಟಿದೆ ಎಂಬುದು ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿಯವರ ಪ್ರಶ್ನೆಯಾಗಿದೆ.

ಅಭಿಪ್ರಾಯ ಹಂಚಿಕೊಂಡ ಅವರು, ಅಂತರ್ಜಲ ವೃದ್ಧಿಗೆಂದು ಚೆಕ್ ಡ್ಯಾಂ ನಿರ್ವಣ, ಕೆರೆ ಪುನಶ್ಚೇತನ ಮಾಡಿಕೊಂಡು ಬರಲಾಗಿದೆ. ಆ ಕೆಲಸಕ್ಕೆ ದೊಡ್ಡ ಪ್ರಮಾಣದಲ್ಲಿ ಜನರ ತೆರಿಗೆ ಖರ್ಚು ಮಾಡಲಾಗಿದೆ. ಇಷ್ಟೆಲ್ಲ ವೆಚ್ಚ ಮಾಡಿದ ಮೇಲೂ ಈ ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಸಿಲ್ಲವೇ? ವೃದ್ಧಿಸದೆ ಇದ್ದರೆ ಯೋಜನೆ ಅವೈಜ್ಞಾನಿಕವಾದವೇ? ಮೌಲ್ಯಮಾಪನ ಮಾಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

 


Spread the love

About Laxminews 24x7

Check Also

ಶೂ ವ್ಯಾಪಾರಿ ನಿವಾಸದಲ್ಲಿ ಬರೋಬ್ಬರಿ 40 ಕೋಟಿ ರೂ. ನಗದು ವಶಕ್ಕೆ IT RAID

Spread the love ಉತ್ತರ ಪ್ರದೇಶದ ಆಗ್ರಾದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ಫಲವಾಗಿ 40 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ