Breaking News
Home / ರಾಜಕೀಯ / ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

Spread the love

ಬಜಪೆ: ಎಷ್ಟು ಪ್ರಯತ್ನ ಪಟ್ಟರೂ ಆಧಾರ್‌ ಕಾರ್ಡ್‌ ಪಡೆಯಲು ಸಾಧ್ಯವಾಗದೆ ಇಲ್ಲೊಬ್ಬ ವಿಶೇಷ ಚೇತನ ಯುವತಿ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ.

ಮಂಗಳೂರು ತಾಲೂಕು ಎಕ್ಕಾರು ಗ್ರಾಮ ಪಂಚಾಯತ್‌ನ ತೆಂಕ ಎಕ್ಕಾರು ಪಲ್ಲದ ಕೋಡಿ ಮುರ ಮನೆಯ ಪದ್ಮನಾಭ ಗೌಡ – ಮೀನಾಕ್ಷಿ ದಂಪತಿಯ ಪುತ್ರಿ ಧನ್ಯಶ್ರೀ (23) ಸಂತ್ರಸ್ತ ಯುವತಿ. ಕೂಲಿ ಕಾರ್ಮಿಕ ದಂಪತಿಗೆ ನಾಲ್ವರು ಮಕ್ಕಳು. ಧನ್ಯಶ್ರೀ ಹುಟ್ಟಿನಿಂದ ಅಂಗವೈಕಲ್ಯ ಮತ್ತು ಮಧ್ಯಮ ಬುದ್ಧಿ ಮಾಂದ್ಯತೆಯಿಂದ ಬಳಲುತ್ತಿದ್ದಾರೆ.

ದಿನಗೂಲಿ ಮಾಡಿ ಹೊಟ್ಟೆಹೊರೆ ಯುವ ಹೆತ್ತವರು ಸವಾಲುಗಳ ನಡುವೆಯೂ ಕಷ್ಟಪಟ್ಟು ಮಗಳಿಗೆ ಪ್ರಾಥಮಿಕ ಶಿಕ್ಷಣ ಕೊಡಿಸಿದ್ದಾರೆ. ನಿಂತುಹೋದ ಮಾಸಾಶನ ಧನ್ಯಶ್ರೀಗೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆ ಅಂಗವಿಕಲ ಕಾರ್ಡ್‌ ನೀಡಿದ್ದು, ಆರಂಭದಲ್ಲಿ ಮಾಸಿಕ 500 ರೂ. ಮಾಸಾಶನ ಬರುತ್ತಿತ್ತು. ಆಕೆಗೆ ಮತದಾರರ ಗುರುತಿನ ಚೀಟಿ ಇದ್ದು, ಪಂಚಾಯತ್‌ ಚುನಾವಣೆಯಲ್ಲಿ 2 ಬಾರಿ, ಲೋಕಸಭಾ ಚುನಾವಣೆಯಲ್ಲಿ 1 ಬಾರಿ ಮತ ಚಲಾಯಿಸಿದ್ದರು. 2018ರಲ್ಲಿ ಮಾಸಾಶನ ಏಕಾಏಕಿ ನಿಂತುಹೋಯಿತು. ಯಾಕೆಂದು ವಿಚಾರಿಸಿದಾಗ ವೇತನ ಸಿಗಬೇಕಾದರೆ ಅಧಾರ್‌ ಕಾರ್ಡ್‌ ಲಿಂಕ್‌ ಅಗತ್ಯ ಎಂದು ತಿಳಿದುಬಂತು. ಹೆತ್ತವರು ತಮ್ಮ ಮತ್ತು ಮಗಳ ಅಧಾರ್‌ ಕಾರ್ಡ್‌ಗಾಗಿ ಎಕ್ಕಾರು ಗ್ರಾ.ಪಂ.ನಲ್ಲಿ ನೋಂದಣಿ ಮಾಡಿದರು. ಕೆಲವು ದಿನಗಳ ಬಳಿಕ ಹೆತ್ತವರ ಕಾರ್ಡ್‌ ಬಂದರೂ ಧನ್ಯಶ್ರೀ ಅವರ ಕಾರ್ಡ್‌ ಬರಲಿಲ್ಲ. ಬಳಿಕ ಹಲವಾರು ಬಾರಿ ಎಕ್ಕಾರು ಗ್ರಾ.ಪಂ.ನಲ್ಲಿ ಹಾಗೂ ಬಜಪೆಯಲ್ಲಿರುವ ಸೇವಾ ಕೇಂದ್ರದಲ್ಲಿ ಆಧಾರ್‌ ನೋಂದಣಿಗೆ ಪ್ರಯತ್ನಿಸಿದರೂ ಪ್ರಯತ್ನ ಫ‌ಲ ನೀಡಿಲ್ಲ. ಕಾರಣ ಕೇಳಿದರೆ ಸರಿಯಾದ ಮಾಹಿತಿ ಸಿಗುತ್ತಿಲ್ಲ; ಇದರಿಂದಾಗಿ ಮಗಳಿಗೆ ಅಂಗವಿಕಲ ವೇತನ ಹಾಗೂ ಇತರ ಯಾವುದೇ ಸವಲತ್ತು ಸಿಗುತ್ತಿಲ್ಲ ಎಂಬುದು ಹೆತ್ತವರ ಅಳಲು.

ಮಗಳ ಭವಿಷ್ಯದ ಚಿಂತೆಯಲ್ಲಿ ಮುಳುಗಿರುವ ಹೆತ್ತವರು ಕನಿಷ್ಠ ಸರಕಾರದ ಸವಲತ್ತುಗಳನ್ನಾದರೂ ಪಡೆಯುವುದು ಹೇಗೆ ಎಂದು ತಿಳಿಯದೆ ಸಂಕಷ್ಟಕ್ಕೊಳಗಾಗಿದ್ದು ಜನಪ್ರತಿನಿಧಿ ಗಳು, ಅಧಿಕಾರಿಗಳು ತಮ್ಮ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ