Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ ಸಿಇಎನ್​ ಪೊಲೀಸರಿಂದ ಸೈಬರ್ ವಂಚಕರ ಬಂಧನ; 50 ಬ್ಯಾಂಕ್ ಖಾತೆ ಫ್ರೀಜ್

ಬೆಳಗಾವಿ ಸಿಇಎನ್​ ಪೊಲೀಸರಿಂದ ಸೈಬರ್ ವಂಚಕರ ಬಂಧನ; 50 ಬ್ಯಾಂಕ್ ಖಾತೆ ಫ್ರೀಜ್

Spread the love

ಬೆಳಗಾವಿ: ಬಿಎಸ್​ಎನ್​ಎಲ್​ ನಿವೃತ್ತ ಉದ್ಯೋಗಿ ಖಾತೆಗೆ ಕನ್ನ ಹಾಕಿ 10 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದ ವಂಚಕರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್. ಗ್ರಾಮದ ಯಲ್ಲಪ್ಪ ಜಾಧವ್‌ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ, ಚಂದ್ರಪ್ರಕಾಶ್(30), ಆಶಾದೇವಿ(25)ಯನ್ನು ಇಂದು ಜಾರ್ಖಂಡ್‌ಗೆ ತೆರಳಿ ಬೆಳಗಾವಿ ಪೊಲೀಸರು( Karnataka police) ಬಂಧಿಸಿದ್ದಾರೆ. ಕೆವೈಸಿ ಅಪ್​ಡೆಟ್ ನೆಪದಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ವಾಟ್ಸಪ್ ಪಡೆದಿದ್ದ ಈ ದಂಪತಿ ಒಟಿಪಿ (OTP) ಪಡೆದು ಆನ್‌ಲೈನ್ ಬ್ಯಾಂಕಿಂಗ್ ಆಯಕ್ಟೀವ್ ಮಾಡಿ ಹಣ ವರ್ಗಾವಣೆ ಮಾಡಿದ್ದರು. 102 ಬಾರಿ ಹಂತ ಹಂತವಾಗಿ 10 ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದ ಖದೀಮರು ಸದ್ಯ ಪೊಲೀಸರ ವಶದಲ್ಲಿದ್ದಾರೆ.

ಈ ಕುರಿತು ಜೂನ್ 9ರಂದೇ ಬೆಳಗಾವಿ ಸಿಇಎನ್ ಠಾಣೆಗೆ ಯಲ್ಪಪ್ಪ ಜಾಧವ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದ, ಸಿಇಎನ್ ಸಿಪಿಐ ಬಿ.ಆರ್.ಗಡ್ಡೇಕರ್ ಮತ್ತು ಅವರ ತಂಡ ಜಾರ್ಖ‌ಂಡ್‌ನ ಜಮತಾರಾ ಜಿಲ್ಲೆಗೆ ತೆರಳಿ ದಂಪತಿಯನ್ನು ಬಂಧಿಸಿದ್ದಾರೆ. ಜತೆಗೆ ದಂಪತಿಗೆ ಸಹಾಯ ಮಾಡುತ್ತಿದ್ದ ಮಹಾರಾಷ್ಟ್ರದ ನಾಸಿಕ್‌ನ ಅನ್ವರ್ ಶೇಖ್(24)ನನ್ನು ಸಹ ಬಂಧಿಸಿದ್ದಾರೆ. ಬಂಧಿತರಿಂದ 5ಮೊಬೈಲ್, 3 ಡೆಬಿಟ್ ಕಾರ್ಡ್ ವಶಕ್ಕೆ ಪಡೆದಿದ್ದು, ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ತೆರೆದಿದ್ದ ಬರೋಬ್ಬರಿ 50 ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ.

ಪೊಲೀಸರು 50 ಬ್ಯಾಂಕ್ ಖಾತೆ ಫ್ರೀಜ್ ಮಾಡಿ 1256000 ರೂಪಾಯಿ ಹಣ ಜಪ್ತಿ ಮಾಡಿದ್ದಾರೆ. ಸೈಬರ್ ವಂಚನೆಗಾಗಿಯೇ ಈ ದಂಪತಿ 48 ಮೊಬೈಲ್, 304 ಸಿಮ್ ಕಾರ್ಡ್ ಬಳಸಿದ್ದರು. ಬೆಳಗಾವಿ ಅಷ್ಟೇ ಅಲ್ಲದೇ ಬೆಂಗಳೂರು, ಕಲಬುರಗಿ, ಹೈದರಾಬಾದ್ ಸೇರಿ ಬೇರೆ ರಾಜ್ಯಗಳಲ್ಲೂ ವಂಚನೆ ಮಾಡಿದ್ದರು ಎಂಬ ವಿಚಾರ ತನಿಖೆ ವೇಳೆ ತಿಳಿದುಬಂದಿದೆ.

ಬಿಎಸ್​ಎಫ್​ನಿಂದ ಚೀನಿ ಪ್ರಜೆಯ ಬಂಧನ
ಕಳೆದ 2 ವರ್ಷಗಳಲ್ಲಿ 1300 ಸಿಮ್​ಕಾರ್ಡ್​ಗಳನ್ನು ಚೀನಾಕ್ಕೆ ಸಾಗಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್​ಎಫ್) ಬಂಧಿಸಿರುವ ಚೀನಿ ಪ್ರಜೆ ಮಾಹಿತಿ ನೀಡಿದ್ದಾನೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಧಾವಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಬಿಎಸ್​ಎಫ್​ನಿಂದ ಉತ್ತರ ಪ್ರದೇಶ ಪೊಲೀಸರಿಗೆ ವರ್ಗಾಯಿಸಲಾಗಿದೆ.

ಆರೋಪಿಯನ್ನು ಹುಬೆ ಪ್ರಾಂತ್ಯದ ನಿವಾಸಿ ಹ್ಯಾನ್​ ಜುನ್ವೆ ಎಂದು ಗುರುತಿಸಲಾಗಿದೆ. ತನ್ನ ಸಹಚರ ಸುನ್ ಜಿಯಾಂಗ್ ಎಂಬಾತನನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಈ ಹಿಂದೆ ಬಂಧಿಸಿದ್ದರು ಎಂದು ಆರೋಪಿಯು ಬಿಎಸ್​ಎಫ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ವಿಚಾರಣೆ ಇನ್ನೂ ನಡೆಯುತ್ತಿದೆ. ಈತ ಯಾವುದಾದರೂ ಗುಪ್ತಚರ ಇಲಾಖೆ ಅಥವಾ ಇತರ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದ್ದನೇ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಬಿಎಸ್​ಎಫ್ ಡಿಐಜಿ ಎಸ್​.ಎಸ್​.ಗುಲೇರಿಯಾ ಹೇಳಿದ್ದಾರೆ.

ಬಾಂಗ್ಲಾದೇಶಿ ಸಿಮ್​ಕಾರ್ಡ್, ಎರಡು ಪೆನ್​ಡ್ರೈವ್​ಗಳು, ಲ್ಯಾಪ್​ಟಾಪ್, ಎರಡು ಐಫೋನ್​, ಎಟಿಎಂ ಕಾರ್ಡ್​ಗಳು, ಅಮೆರಿಕ ಡಾಲರ್​ಗಳ ಜೊತೆಗೆ ಬಾಂಗ್ಲಾದೇಶಿ ಹಾಗೂ ಭಾರತೀಯ ಕರೆನ್ಸಿಯನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ಗುರುಗ್ರಾಮದಲ್ಲಿ ಸ್ಟಾರ್ ಸ್ಪ್ರಿಂಗ್ ಹೆಸರಿನ ಹೊಟೆಲ್ ಹೊಂದಿರುವುದಾಗಿ ಬಂಧಿತ ಹೇಳಿದ್ದಾನೆ. 2010ರ ನಂತರ ಕನಿಷ್ಠ 4 ಬಾರಿ ಭಾರತಕ್ಕೆ ಬಂದಿದ್ದೇನೆ ಎಂದು ಅವನು ಹೇಳಿದ್ದಾನೆ ಎಂದು ಗುಲೇರಿಯಾ ಹೇಳಿದ್ದಾರೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ