Breaking News
Home / ಜಿಲ್ಲೆ / ಗದಗ / 41ನೇ ರೈತ ಹುತಾತ್ಮ ದಿನಾಚರಣೆ; ಹುತಾತ್ಮ ರೈತನಿಗೆ ನಮನ ಸಲ್ಲಿಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ರೈತರು

41ನೇ ರೈತ ಹುತಾತ್ಮ ದಿನಾಚರಣೆ; ಹುತಾತ್ಮ ರೈತನಿಗೆ ನಮನ ಸಲ್ಲಿಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ರೈತರು

Spread the love

ಗದಗ: 41ನೇ ರೈತ ಹುತಾತ್ಮ ದಿನಾಚರಣೆ ಹಿನ್ನೆಯಲ್ಲಿ ಬಂಡಾಯದ ನಾಡಿನತ್ತ ಇಂದು (ಜುಲೈ 21) ರೈತ ಸಮೂಹವೇ ಹರಿದು ಬಂದಿತ್ತು. ಹುತಾತ್ಮ ರೈತನ ವೀರಗಲ್ಲಿಗೆ ಹೂವು ಅರ್ಪಿಸಿ ರೈತರು, ಮುಖಂಡರು, ಜನಪ್ರತಿನಿಧಿಗಳು ನಮನ ಸಲ್ಲಿಸಿದರು. ಈ ವೇಳೆ ಮಹದಾಯಿ, ಕಳಸಾ ಬಂಡೂರಿಗಾಗಿ ರೈತರು ಹಸಿರು ಶಾಲು ಹಾರಿಸುವ ಮೂಲಕ ಮತ್ತೆ ರಣಕಹಳೆ ಊದಿದರು. ಜೊತೆಗೆ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್ ಹಾಕುವ ಮೂಲಕ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಹೋರಾಟಗಾರರು ಸಜ್ಜಾಗಿದ್ದಾರೆ.

ರಾಜ್ಯ ಸರ್ಕಾರ ಅಧಿಕಾರದ ದಾಹ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ ರೈತರು, ನಾಲ್ಕು ಜಿಲ್ಲೆ ಹನ್ನೊಂದು ತಾಲೂಕಿನ ರೈತರು ನಿರಂತರವಾಗಿ ಹೋರಾಟ ಮಾಡಿದರೂ ಯೋಜನೆ ಜಾರಿಯಾಗಿಲ್ಲ ಅಂತ ಜನ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.

ಇಂದು ನರಗುಂದ, ನವಲಗುಂದ ರೈತ ಬಂಡಾಯಕ್ಕೆ 41 ನೇ ವರ್ಷ. ಹೀಗಾಗಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಬಂಡಾಯದ ನಾಡಿಗೆ ಇಡೀ ರಾಜ್ಯದ ರೈತ ಸಮೂಹವೇ ಹರಿದು ಬಂದಿತ್ತು. ಪಟ್ಟಣದ ಬೀದಿಯಲ್ಲಿ ರೈತ ಸೇನಾ ಕರ್ನಾಟಕ, ಮಹದಾಯಿ, ಕಳಸಾ ಬಂಡೂರಿ ಹೋರಾಟ ಸಮಿತಿ ಹಾಗೂ ಕಬ್ಬು ಬೆಳೆಗಾರರ ಸಂಘ ಸೇರಿದಂತೆ 20 ಕ್ಕೂ ಹೆಚ್ಚು ಸಂಘಟನೆ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.

ಹಸಿರು ಶಾಲು ತಿರುಗಿಸುತ್ತಾ, ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದರು ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಯಾಗಿಲ್ಲ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವೆ ಕಾರಣ ಎಂದು ಆಕ್ರೋಶ ಹೊರಹಾಕಿದರು.

ಈಗಾಗಲೇ ಮಹದಾಯಿಗಾಗಿ 6 ವರ್ಷಗಳಿಂದ ಹೋರಾಟ ನಡೆದಿದೆ. ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಅನ್ನೋದು ತೋರಿಸಿಕೊಟ್ಟಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್ ಹಾಕುತ್ತಿದ್ದೇವೆ. ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ. ಸಿಎಂ ಯಡಿಯೂರಪ್ಪ ಈ ಯೋಜನೆ ಮರೆತಿದ್ದಾರೆ. ರಾಜ್ಯದ ಯೋಜನೆ ಬಗ್ಗೆ ಕಾಳಜಿ ಇಲ್ಲ ಅಂತ ಮಹದಾಯಿ ಹೋರಾಟಗಾರ ವೀರೇಶ್ ಸೊಬರದಮಠ ಆರೋಪಿಸಿದರು.

ಹುತಾತ್ಮ ರೈತನ ಸ್ಮಾರಕ

ಹುತಾತ್ಮ ಸ್ಮಾರಕದಿಂದ ಎಪಿಎಂಸಿ ಆವರಣದವರೆಗೂ ರೈತರು ಬೃಹತ್ ರ್ಯಾಲಿ ಮಾಡಿದರು. ರ್ಯಾಲಿಯುದಕ್ಕೂ ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ರಾಷ್ಟ್ರೀಯ ರೈತ ಹೋರಾಟದ ಮೂಂಚೂಣಿ ನಾಯಕರಾದ ಪಂಜಾಬ್ನ ಹರಿಖೇತಸಿಂಗ್, ಹರಿಯಾಣದ ದೀಪಕ ಲಂಬಾ, ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಸೇರಿದಂತೆ ಹಲವು ರೈತ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದರು. ಬಳಿಕ ಎಪಿಎಂಸಿ ಆವರಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದರು. ಈ ವೇಳೆ ಮಾತನಾಡಿದ ರೈತ ಮುಖಂಡರು ಕೇಂದ್ರ ಸರ್ಕಾರ ಜಾರಿ ಮಾಡಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹರಿಹಾಯ್ದರು. ಈ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಕೇಂದ್ರ ಸರ್ಕಾರದ ರೈತ ವಿರೋಧಿ, ರೈತರಿಗೆ ಮಾರಕ ಕಾಯ್ದೆಗಳನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸುವಂತೆ ಕರೆ ನೀಡಿದರು.


Spread the love

About Laxminews 24x7

Check Also

ಲೈಂಗಿಕ ಕಿರುಕುಳ ; ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು, ದಂಡ ವಿಧಿಸಿದ ಕೋರ್ಟ್.!

Spread the loveಗದಗ : ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕೇಸ್ ಗೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ