Breaking News
Home / ರಾಜ್ಯ / ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುತ್ತಮುತ್ತ ಭಾರೀ ಮಳೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುತ್ತಮುತ್ತ ಭಾರೀ ಮಳೆ

Spread the love

ಶಿವಮೊಗ್ಗ/ಮಡಿಕೇರಿ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುತ್ತಮುತ್ತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಜಖಂಗೊಂಡಿರುವ ಘಟನೆ ನಗರ ಹೋಬಳಿಯ ಮಾಸ್ತಿಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂದ್ರಮನೆಯಲ್ಲಿ ನಡೆದಿದೆ.

ಘಟನೆಯಲ್ಲಿ ಮನೆಯಲ್ಲಿದ್ದ ಮಗು ಹಾಗೂ ನಾಲ್ವರು ಅಪಾಯದಿಂದ ಪಾರಾಗಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳು ಮಹಿಳೆಯರಿಗೆ ಮಾಸ್ತಿಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಾಳಿ ಮಳೆಗೆ ಮರ ಮನೆ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದ್ದು, ವಾಸ ಮಾಡಲು ಸಾಧ್ಯವಾಗದಂತೆ ಆಗಿದೆ. ಸುಮಾರು 8 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತ ಉತ್ತಮ ಮಳೆಯ ಕಾರಣ ರಾಜ್ಯದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದೆ. ಜೋಗದ ವೈಭೋಗವನ್ನು ವೀಕ್ಷಿಸಲು ಹೊರ ರಾಜ್ಯಗಳಿಂದ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಇಲ್ಲದಂತಾಗಿದೆ.

ಇನ್ನೂ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಆರಂಭಗೊಂಡಿದ್ದು, ಸಂಜೆಯಿಂದ ಗಾಳಿ ಮಳೆ ಸುರಿಯಲಾರಂಭಿಸಿದೆ. ನಾಳೆ ರಾತ್ರಿಯವರೆಗೂ ಭಾರೀ ಮಳೆಯಾಗುವ ಮುಸ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕಿನಾದ್ಯಂತ ಹೆಚ್ಚಿನ ಮಳೆಯಾಗಿದ್ದು, ಮಂಗಳೂರು ನಗರದಲ್ಲೂ ಬಿರುಸಿನ ಮಳೆಯಾಗಿದೆ. ಆಗಸ್ಟ್ 6 ರಿಂದ 9 ರವರೆಗೂ ಮಳೆ ಮುಂದುವರಿಯಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಸಮುದ್ರ ಹಾಗೂ ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು, ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದೆ.

ಕೊಡಗು ಜಿಲ್ಲೆಯಲ್ಲಿ ಮಳೆರಾಯ ಎರಡು ದಿನಗಳಿಂದ ಅಬ್ಬರಿಸುತ್ತಿದ್ದಾನೆ. ಪರಿಣಾಮ ಜಿಲ್ಲೆಯ ಕಾವೇರಿ, ಲಕ್ಷ್ಮಣ ತೀರ್ಥ ಮತ್ತು ಬೇಟೋಳಿ ಹೊಳೆಗಳು ತುಂಬಿ ಹರಿಯುತ್ತಿವೆ. ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪ ಕಾವೇರಿ ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ದಕ್ಷಿಣ ಕೊಡಗಿನ ನಿಟ್ಟೂರು ಬಾಳೆಲೆಯಲ್ಲಿ ಹರಿಯುವ ಲಕ್ಷಣತೀರ್ಥ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಹಲವೆಡೆ ಮರಗಳು ರಸ್ತೆಗೆ ಉರುಳಿ ಬಿದ್ದಿದೆ. ನಿನ್ನೆಗಿಂತಲೂ ಇಂದು ಮಳೆ ಪ್ರಮಾಣ ತೀವ್ರಗೊಂಡಿದೆ.

ಸುಂಟಿಕೊಪ್ಪ, ಹರದೂರು ನಡುವೆ ಹಲವು ಮರಗಳು ಬಿದ್ದಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ನಡುವೆ ಜಿಲ್ಲಾ ಪಂಚಾಯಿತಿ ಸದಸ್ಯ ಸುಂಟಿಕೊಪ್ಪದ ಲತೀಫ್ ನೇತೃತ್ವದ ತಂಡ ತಕ್ಷಣವೇ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡುತ್ತಿದೆ.


Spread the love

About Laxminews 24x7

Check Also

ಉತ್ತರ ಪತ್ರಿಕೆಗಳಲ್ಲಿ ‘ಜೈ ಶ್ರೀ ರಾಮ್’ ಎಂದು ಬರೆದಿದ್ದ ವಿದ್ಯಾರ್ಥಿಗಳನ್ನು ಪಾಸ್‌ ಮಾಡಿದ ಇಬ್ಬರು ಶಿಕ್ಷಕರ ಅಮಾನತು

Spread the love ನವದೆಹಲಿ: ಪರೀಕ್ಷಾರ್ಥಿಗಳಿಗೆ ಅವರ ಉತ್ತರಗಳ ಗುಣಮಟ್ಟದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಉತ್ತರ ಪ್ರದೇಶದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ