Breaking News
Home / ರಾಜಕೀಯ / ಪೆಟ್ರೋಲ್ ಗರಿಷ್ಠ ದರ; 2ನೇ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ!

ಪೆಟ್ರೋಲ್ ಗರಿಷ್ಠ ದರ; 2ನೇ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ!

Spread the love

ಕಾರವಾರ, ಜೂನ್ 06; ದೇಶದಲ್ಲಿ ತೈಲ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗಾಗಲೇ ಹಲವು ಕಡೆ ಪೆಟ್ರೋಲ್ ದರ ಸಾರ್ವಕಾಲಿಕ ಏರಿಕೆಯಾಗಿ 100 ರೂ. ಗಡಿ ದಾಟಿದೆ. ಕರ್ನಾಟಕದಲ್ಲಿ ಕೂಡ ಹಲವು ಜಿಲ್ಲೆಗಳಲ್ಲಿ ದರ ಸೆಂಚುರಿ ಬಾರಿಸುವ ಹೊಸ್ತಿಲಲ್ಲಿದ್ದು, ಚಿಕ್ಕಮಗಳೂರಿನಲ್ಲಿ ಈಗಾಗಲೇ ಲೀಟರ್‌ಗೆ 100.06 ರೂ.ನಂತೆ ಬೆಲೆ ಇದೆ. ಇದರ ನಂತರದ ಸ್ಥಾನದಲ್ಲಿ ಉತ್ತರ ಕನ್ನಡವಿದ್ದು, ಕಾರವಾರದಲ್ಲಿ 99.57 ರೂ.ಗೆ ಬಂದುಮುಟ್ಟಿದೆ.

ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ ಗಡಿ ತಾಲೂಕಾದ ಕಾರವಾರದಲ್ಲಿಯೇ ಪೆಟ್ರೋಲ್ ಬೆಲೆ ಹೆಚ್ಚಿದೆ. ಪೆಟ್ರೋಲ್ ಜೊತೆಗೆ ಡೀಸೆಲ್ ಬೆಲೆ ಸಹ ಏರಿಕೆಯಾಗಿದ್ದು, ಶನಿವಾರ ಪ್ರತಿ ಲೀಟರ್ ಡಿಸೇಲ್‌ಗೆ 91 ರೂಪಾಯಿ ತಲುಪಿದೆ. ಸದ್ಯ, ಲಾಕ್‌ಡೌನ್ ಇರುವ ಹಿನ್ನಲೆಯಲ್ಲಿ ವಾಹನಗಳ ಓಡಾಟ ಕಡಿಮೆಯಿದ್ದು, ಲಾಕ್‌ಡೌನ್ ತೆರವಾಗಿ ವಾಹನ ಓಡಾಟಕ್ಕೆ ಅವಕಾಶ ಕೊಟ್ಟ ನಂತರ ಜನರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿ ತಾಗಲಿದೆ.

 

ದುಡಿದ ದುಡಿಮೆ ಪೆಟ್ರೋಲ್ ಬಂಕ್‌ಗೆ: ಪೆಟ್ರೋಲ್ ಹಾಗೂ ಡೀಸೆಲ್ ಅಗತ್ಯ ವಸ್ತುಗಳಾಗಿದ್ದು, ಇವುಗಳಲ್ಲಿ ಕೊಂಚ ಬೆಲೆ ಏರಿಕೆಯಾದರೂ ದಿನಬಳಕೆಯ ಎಲ್ಲಾ ವಸ್ತು, ವಲಯಗಳ ಮೇಲೂ ಪರಿಣಾಮ ಬೀರಲಿದೆ. ಬಹುತೇಕ ವಸ್ತುಗಳ ಬೆಲೆ ಏರಿಕೆಗೆ ತೈಲ ಬೆಲೆ ಏರಿಕೆ ಕಾರಣವಾಗಿರುತ್ತದೆ.

ಆದರೆ ದೇಶದಲ್ಲಿ ಇವುಗಳ ಬೆಲೆ ಒಂದೇ ಸಮನೆ ಏರುತ್ತಿದ್ದು, ನಿಯಂತ್ರಣವೇ ಇಲ್ಲದಂತಾಗಿದೆ. ಒಂದು ಕಡೆ ‘ರಾಷ್ಟ್ರಕ್ಕಾಗಿ 200 ರೂ. ಆದರೂ ಪೆಟ್ರೋಲ್ ಹಾಕಿಸಿಕೊಳ್ಳುತ್ತೇವೆ…ಸೈಕಲ್ ಹೊಡೆದುಕೊಂಡೇ ತಿರುಗಾಡುತ್ತೇವೆ’ ಎನ್ನುವವರ ನಡುವೆ ಜನಸಾಮಾನ್ಯನ ಬದುಕು ಕಂಗೆಟ್ಟಿದೆ. ಬಿಡಿಗಾಸು ದುಡಿದರೆ ಅದರ ಬಹುಪಾಲು ಪೆಟ್ರೋಲ್ ತುಂಬಿಸಲಿಕ್ಕೆ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ.

 

ಚುನಾವಣೆ ವೇಳೆ ಇಳಿಕೆ: ವರ್ಷದೊಳಗೆ ಒಂದು ಲೀಟರ್ ಪೆಟ್ರೋಲ್ ಮೇಲೆ ಸುಮಾರು 27 ರೂಪಾಯಿ ಬೆಲೆ ಏರಿಕೆಯಾಗಿದೆ. ಬಂಕ್‌ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬರುವವರು ಏರಿಕೆಯಾದ ಬೆಲೆ ಕಂಡು ಸರ್ಕಾರಗಳ ವಿರುದ್ಧ ಹಿಡಿಶಾಪ ಹಾಕುತ್ತಾ ತೆರಳುವ ದೃಶ್ಯಗಳು ಕಂಡುಬರುತ್ತಿದೆ.

2020ರಲ್ಲಿ ಜೂನ್ 1ರಂದು ರಾಜ್ಯದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆ 73.55 ರೂ. ಇತ್ತು. ತದನಂತರ ನಿರಂತರವಾಗಿ ಬೆಲೆ ಏರಿಕೆಯಾಗಿದ್ದು, ಈ ವರ್ಷದ ಜನವರಿಯಿಂದ ಜೂನ್ ನಡುವೆ ಸುಮಾರು 14 ರೂಪಾಯಿ ಬೆಲೆ ಏರಿಕೆಯಾಗಿದೆ. ಜನವರಿಯಲ್ಲಿ ಲೀಟರ್ ಪೆಟ್ರೋಲ್‌ಗೆ 86 ರೂ. ಇದ್ದು, ಫೆಬ್ರುವರಿಯಲ್ಲಿ ಅದು 94ಕ್ಕೆ ಏರಿಯಾಗಿತ್ತು. ಮಾರ್ಚ್ ತಿಂಗಳಲ್ಲಿ ಸಹ 94 ರೂಪಾಯಿ ಇದ್ದು, ‘ಪಂಚರಾಜ್ಯ’ಗಳ ಚುನಾವಣೆ ಇದ್ದ ಏಪ್ರಿಲ್‌ನಲ್ಲಿ 93ಕ್ಕೆ ಇಳಿದಿತ್ತು. ಮೇ ತಿಂಗಳಿನಲ್ಲಿ 97 ರೂಪಾಯಿಗೆ ಮತ್ತೆ ಏರಿಕೆಯಾಗಿ, ಬೆಲೆ ಜೂನ್‌ಗೆ ನೂರರ ಆಸುಪಾಸು ಬಂದಿದೆ.

 

ಕೊರೋನಾ ಸಂಕಷ್ಟದಲ್ಲಿ ಯಾರಿಗೂ ಸರಿಯಾದ ವ್ಯಾಪಾರ- ವ್ಯವಹಾರ ಇಲ್ಲದೇ ಜನರು ಪರದಾಡುವಂತಾಗಿದೆ. ಜೀವನ ನಡೆಸುವುದೇ ಕಷ್ಟ ಎನ್ನುವುದರ ನಡುವೆ ಇದೀಗ ಪೆಟ್ರೋಲ್ ಬೆಲೆ ಸಹ ಏರಿಕೆ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ; ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಬೆಲೆ ಏರಿಕೆಗೆ ಸರ್ಕಾರವೇ ನೇರ ಕಾರಣವೆಂದು ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವುದು ಅಗತ್ಯವಿತ್ತಾ? ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಯಿತೇ? ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪೆಟ್ರೋಲ್ ಬೆಲೆಯ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಸಹ ಏರುತ್ತಿರುವುದರ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ. ಈ ಹಿಂದೆ ಇದ್ದ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಯಿತೆಂದೇ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಇವರ ಸರ್ಕಾರ ಕೂಡ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದೆ ಎನ್ನುವ ಆಕ್ರೋಶ ಸಾರ್ವಜನಿಕರದ್ದು. ಇನ್ನೊಂದೆಡೆ ಕೆಲವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಕಾರ್ಯದಲ್ಲೂ ನಿರತರಾಗಿದ್ದಾರೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ