Breaking News
Home / ರಾಜಕೀಯ / ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತು..?

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತು..?

Spread the love

ಬೆಂಗಳೂರು: ಬಳ್ಳಾರಿ ಜಿಲ್ಲೆ ತೋರಣಗಲ್‌ನಲ್ಲಿ ಜಿಂದಾಲ್‌ ಕಂಪನಿಗೆ 3,677 ಎಕರೆ ಭೂಮಿ ಪರಭಾರೆ ಮಾಡಿರುವುದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಈ ಸಂಬಂಧ ಚರ್ಚೆ ನಡೆಸಲು ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಶಾಸಕರು ಒತ್ತಡ ಹೇರಲು ಆರಂಭಿಸಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ವಿಷಯದಲ್ಲಿ ಕೂಡ ಶಾಸಕರು ಒಗ್ಗೂಡುತ್ತಿರುವುದು ಪಕ್ಷದಲ್ಲಿನ ಹೊಸ ಬೆಳವಣಿಗೆಯಾಗಿದೆ. ಪಕ್ಷ ಮತ್ತು ಸರ್ಕಾರದಲ್ಲಿನ ಈ ವಿದ್ಯಮಾನ ಮುಖ್ಯಮಂತ್ರಿ ಬದಲಾವಣೆಯ ವಿಚಾರವನ್ನು ಮುನ್ನೆಲೆಗೆ ತಂದಿದೆ.

ಲಾಕ್‌ಡೌನ್‌ ಮುಗಿದ ಬಳಿಕ, ಅಂದರೆ ಜೂನ್‌ 7 ರ ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ಬಿಜೆಪಿ ರಾಷ್ಟ್ರೀಯ ಮುಖಂಡರೊಬ್ಬರ ಜತೆಗೆ ನಂಟು ಹೊಂದಿರುವ ಕೆಲವು ಸಚಿವರು ಸದ್ಯವೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ. ಈ ಮೂಲಕ ನಿಮ್ಮ ಎಲ್ಲ ನಿರ್ಧಾರಗಳು ಸರಿಯಿಲ್ಲ, ಅದಕ್ಕೆ ಪಕ್ಷದ ಬೆಂಬಲ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಯಡಿಯೂರಪ್ಪ ಅವರಿಗೆ ನೀಡಲು ವರಿಷ್ಠರು ಬಯಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಶಾಸಕರ ಆಕ್ಷೇಪ: ಸಚಿವ ಸಂಪುಟದ ನಿರ್ಧಾರವನ್ನು ಪ್ರಶ್ನಿಸಿ ಕೆಲವು ಶಾಸಕರು ಮುಖ್ಯಮಂತ್ರಿಯವರಿಗೆ ಈಗಾಗಲೇ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ಹಿಂದೆ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುವುದನ್ನು ವಿರೋಧಿಸಿ ಹೋರಾಟ ನಡೆಸಲಾಗಿತ್ತು. ಈಗ ಹೇಗೆ ಅದಕ್ಕೆ ಒಪ್ಪಿಗೆ ನೀಡಿದ್ದೀರಿ’ ಎಂದು ಪತ್ರದಲ್ಲಿ ಪ್ರಶ್ನಿಸಿದ್ದರು.

‘ಶಾಸಕಾಂಗ ಪಕ್ಷದ ಸಭೆ ಕರೆದು ನಮಗೆ ಪರಭಾರೆ ಮಾಡಲು ಕಾರಣಗಳನ್ನು ಮನವರಿಕೆ ಮಾಡಿಕೊಡಬೇಕೆಂದು ಪಟ್ಟು ಹಿಡಿಯುತ್ತೇವೆ. ಇದು ನಮ್ಮ ಮುಖ್ಯ ಅಜೆಂಡಾ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಬಿಜೆಪಿ ಶಾಸಕರೊಬ್ಬರುತಿಳಿಸಿದರು.

‘ಸರ್ಕಾರದ ಈ ನಿರ್ಧಾರದಿಂದ ಶಾಸಕರು ಎಲ್ಲೂ ತಲೆ ಎತ್ತಿಕೊಂಡು ಓಡಾಡದ ಹಾಗೆ ಆಗಿದೆ. ನೈತಿಕವಾಗಿ ಒಂದು ವಿಚಾರದ ಬಗ್ಗೆ ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿ, ನಮ್ಮದೇ ಸರ್ಕಾರ ಬಂದಾಗ ಪರಭಾರೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ನಮ್ಮ ಬೇಡಿಕೆ ಒಂದೇ, ಸಂಪುಟದ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು. ಪರಭಾರೆ ಆದೇಶವನ್ನು ರದ್ದುಪಡಿಸಬೇಕು ಅಷ್ಟೇ’ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಚರ್ಚೆ: ‘ಜೂನ್‌ ಕೊನೆಯೊಳಗೆ ಹೊಸ ಮುಖ್ಯಮಂತ್ರಿ ಆಯ್ಕೆ ನೂರಕ್ಕೆ ನೂರು ಖಚಿತ’ ಎಂದು ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಪ್ರತಿಪಾದಿಸುತ್ತಿದ್ದಾರೆ.

‘ಇದು ಬರೀ ಊಹಾಪೋಹ. ಕೋವಿಡ್‌ ಸಂಕಷ್ಟದಲ್ಲಿ ಅಂತಹ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಗಳಿಲ್ಲ’ ಎಂದು ಯಡಿಯೂರಪ್ಪ ಬಣದ ಶಾಸಕರೊಬ್ಬರು ಹೇಳಿದರು.

ದೆಹಲಿಯತ್ತ ಬಿಜೆಪಿ ಶಾಸಕರು?
ನವದೆಹಲಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಶುರುವಾದ ಬೆನ್ನಲ್ಲೇ, ರಾಷ್ಟ್ರ ರಾಜಧಾನಿಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

ಸೋಮವಾರ ಸಂಜೆ ದೆಹಲಿಗೆ ಬಂದಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಕರ್ನಾಟಕ ಭವನಕ್ಕೆ ಬಾರದೇ ಹೋಟೆಲ್‌ನಲ್ಲಿ ತಂಗಿದ್ದಾರೆ. ವೈಯಕ್ತಿಕ ಕೆಲಸಕ್ಕೆ ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಆದರೆ, ಪಕ್ಷದ ವರಿಷ್ಠರನ್ನು ಭೇಟಿ ಮಾಡಿರುವ ಅವರು, ರಾಜ್ಯದ ರಾಜಕೀಯ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಮಂಗಳವಾರ ಸಂಜೆಯ ವೇಳೆಗೆ 20 ಜನ ಶಾಸಕರು ದೆಹಲಿಗೆ ದೌಡಾಯಿಸಿದ್ದು, ಇನ್ನಷ್ಟು ಶಾಸಕರು ಬುಧವಾರ ಬರಲಿದ್ದಾರೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ