Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಷಿಜನ್ ರಾಜ್ಯದ ಬಳಕೆಗೆ ಇರಲಿ: ಸಿದ್ದರಾಮಯ್ಯ ಆಗ್ರಹ

ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಷಿಜನ್ ರಾಜ್ಯದ ಬಳಕೆಗೆ ಇರಲಿ: ಸಿದ್ದರಾಮಯ್ಯ ಆಗ್ರಹ

Spread the love

ಬೆಂಗಳೂರು: ಕರ್ನಾಟಕದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಸಂಸದರು ಸಹ ಕೇಂದ್ರ ಸರ್ಕಾರದ ಮೇಲೆ ಈ ಕುರಿತು ಒತ್ತಡ ಹೇರಬೇಕು ಎಂದು ಅವರು ಹೇಳಿದ್ದಾರೆ.

ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ ಅನುಗುಣವಾಗಿ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ, ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಸೋಂಕಿತರ ಪ್ರಾಣ ರಕ್ಷಣೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರೊಂದಿಗೆ ಇಂದು ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದರು.

ಸರ್ಕಾರದ ಜವಾಬ್ದಾರಿ: ಈ ವಿಚಾರದ ಬಗ್ಗೆ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಿದ್ದೇನೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಅಗತ್ಯಕ್ಕೆ ಅನುಗುಣವಾಗಿ ಆಕ್ಷಿಜನ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ. ನಿನ್ನೆಯಿಂದಲೇ ಈ ಬಗ್ಗೆ ಗಮನ ಹರಿಸಿರುವುದಾಗಿ ಅಧಿಕಾರಿಗಳು ತಮಗೆ ತಿಳಿಸಿದ್ದಾರೆ. ಮುಂದೆ ಕೊರತೆ ಸಂಭವಿಸಿದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದೂ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಹೇಳಿದ್ದೇನೆ ಎಂದರು.

ಚಾಮರಾಜನಗರ ದುರಂತದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಹೇಳಿದ್ದೆ. ಇದೀಗ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಈ ದುರಂತಕ್ಕೆ ಸರ್ಕಾರ, ಮಂತ್ರಿಗಳು ಅಥವಾ ಅಧಿಕಾರಿಗಳಲ್ಲಿ ಯಾರು ಕಾರಣ ಎಂಬ ಸತ್ಯ ಹೊರ ಬರಬೇಕು ಎಂಬುದು ನಮ್ಮ ಉದ್ದೇಶ. ಸತ್ಯ ಹೊರಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳ ಹೇಳಿಕೆಗಳು ವಿಭಿನ್ನವಾಗಿದೆ. ಆ ಕುರಿತಾಗಿಯೂ ತನಿಖೆ ನಡೆಯಬೇಕು. ಬೆಂಗಳೂರು, ಕೋಲಾರ, ಬೆಳಗಾವಿ, ಯಾದಗಿರಿ, ಬೀದರ್, ಕಲಬುರ್ಗಿಯಲ್ಲಿಯೂ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಮೃತರಾಗಿರುವ ವರದಿಗಳು ಬಂದಿವೆ. ಆ ಬಗ್ಗೆಯೂ ನ್ಯಾಯಾಂಗ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಜಿಲ್ಲೆಗಳಲ್ಲಿ ಆಕ್ಸಿಜನ್ ತಯಾರಾಗಲಿ : ತಜ್ಞರ ವರದಿ ಪ್ರಕಾರ ಮೇ ತಿಂಗಳಲ್ಲಿ ಕೊರೊನಾ ಸೋಂಕು ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ಎಲ್ಲ ಜಿಲ್ಲೆಗಳಲ್ಲಿ ಆಕ್ಸಿಜನ್ ತಯಾರಿಸಲು ಅವಕಾಶ ಮಾಡಿಕೊಡಬೇಕು. ಈ ವಿಷಯವನ್ನು ಸರ್ಕಾರ ಆದ್ಯತೆ ಮೇಲೆ ಪರಿಗಣಿಸಬೇಕು. ಕೇರಳದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಉತ್ಪಾದನೆ ಮಾಡಿಕೊಳ್ಳುತ್ತಾರೆ. ಇದು ನಮ್ಮ ರಾಜ್ಯದಲ್ಲಿ ಯಾಕಾಗಬಾರದು. ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಈ ಸರ್ಕಾರದಲ್ಲಿ ಪಾರದರ್ಶಕತೆ ಎಂಬುದೇ ಇಲ್ಲ. ಎಲ್ಲ ವಿಷಯಗಳಲ್ಲಿಯೂ ಸುಳ್ಳೇ ರಾರಾಜಿಸುತ್ತಿದೆ. ಜವಾಬ್ದಾರಿಯುತ ಆರೋಗ್ಯ ಮಂತ್ರಿ ಚಾಮರಾಜನಗರದಲ್ಲಿ ಮೂರು ಮಂದಿ ಮಾತ್ರ ಸತ್ತಿದ್ದಾರೆ ಎಂದು ಸುಳ್ಳು ಹೇಳುತ್ತಾರೆ. ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್, ರೆಮಿಡಿಸಿವರ್ ಇಂಜೆಕ್ಷನ್ ಇಲ್ಲ. ಜೊತೆಗೆ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಅವರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದರು.

ನಮ್ಮ ಶಾಸಕರು, ಕಾರ್ಯಕರ್ತರು ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊರತೆ ಬಗ್ಗೆ ನಿತ್ಯ ದೂರು ಹೇಳುತ್ತಾರೆ. ಕೇಂದ್ರಿಂದ ವೆಂಟಿಲೇಟರ್‍ಗಳು ಬಂದಿವೆ. ಅದನ್ನು ಜಿಲ್ಲಾವಾರು ಪೂರೈಕೆ ಮಾಡುವುದಾಗಿ ಅರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದರು.

ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಂಸದ ನಾಸೀರ್ ಹುಸೇನ್, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ