Breaking News
Home / ರಾಜಕೀಯ / ಬೆಂಗಳೂರು: ಹೊರವಲಯದಲ್ಲಿ ಸಾಮೂಹಿಕ ಶವಸಂಸ್ಕಾರ ಮುಂದುವರಿಕೆ

ಬೆಂಗಳೂರು: ಹೊರವಲಯದಲ್ಲಿ ಸಾಮೂಹಿಕ ಶವಸಂಸ್ಕಾರ ಮುಂದುವರಿಕೆ

Spread the love

ಬೆಂಗಳೂರು: ಕೋವಿಡ್‌ನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಚಿತಾಗಾರಗಳ ಮುಂದೆ ಶವಗಳ ಸಾಲು ಉದ್ದವಾಗುತ್ತಲೇ ಇದೆ. ಮೃತರ ಸಂಬಂಧಿಕರು ದಿನವಿಡೀ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಗರದ ಹೊರವಲಯದ ತಾವರೆಕೆರೆ ಮತ್ತು ಇಲ್ಲಿಂದ 2 ಕಿ.ಮೀ. ದೂರದಲ್ಲಿರುವ ಗಿಡ್ಡೇನಹಳ್ಳಿ, ಚಾಮರಾಜಪೇಟೆ ಸ್ಮಶಾನದಲ್ಲಿ ಸಾಮೂಹಿಕ ಶವಸಂಸ್ಕಾರಕ್ಕೆ ಸರ್ಕಾರ ವ್ಯವಸ್ಥೆ ಮಾಡಿದ್ದು, ಇಲ್ಲಿಯೂ ಕೂಡ ಆಂಬುಲೆನ್ಸ್‌ಗಳು ಸಾಲುಗಟ್ಟಿ ನಿಂತಿವೆ.

ಏಕಕಾಲಕ್ಕೆ 26 ಶವಗಳನ್ನು ದಹನ ಮಾಡಲಾಗುತ್ತಿದೆ. ಎರಡು ಪಾಳಿಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ 9 ಗಂಟೆಯಾದರೂ ಶವಸಂಸ್ಕಾರ ಕಾರ್ಯ ಮುಕ್ತಾಯವಾಗಿರಲಿಲ್ಲ. ಯಲಹಂಕ ಹೊರವಲಯದಲ್ಲಿಯೂ ಭಾನುವಾರದಿಂದ ಸಾಮೂಹಿಕ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸಂಬಂಧಿಕರೇ ಇರಲಿಲ್ಲ: ಎಷ್ಟೋ ಶವಗಳ ಸಂಸ್ಕಾರದ ವೇಳೆ ಸಂಬಂಧಿಕರೇ ಇರಲಿಲ್ಲ. ಈ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಚಿತಾಗಾರದ ಸಿಬ್ಬಂದಿಗೆ ಇಂತಹ ಶವಗಳಿಗೆ ಅಗ್ನಿಸ್ಪರ್ಶ ಮಾಡಬೇಕಾಯಿತು.

ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರೆ ತಮಗೂ ಸೋಂಕು ಹರಡಬಹುದು ಎಂದು ಹಲವರು ಹಿಂದೇಟು ಹಾಕಿದರೆ, ಎಷ್ಟೋ ಜನರಿಗೆ ಪಿಪಿಇ ಕಿಟ್‌್ ಖರೀದಿಸಲು ಮತ್ತು ಧರಿಸಲು ಸಾಧ್ಯವಾಗದೆ ಈ ಕಾರ್ಯದಿಂದ ದೂರ ಉಳಿದರು.

ನಿರ್ಲಕ್ಷ್ಯ ಬೇಡ: ‘ನನ್ನ ತಾಯಿಯವರ ಆಮ್ಲಜನಕ ಮಟ್ಟ 80ಕ್ಕೆ ಕುಸಿದಿತ್ತು. ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿ ನಾಲ್ಕು ತಾಸು ಕಳೆಯುವುದರೊಳಗೆ ಅವರ ಆಮ್ಲಜನಕ ಮಟ್ಟ 20ಕ್ಕೆ ಕುಸಿದಿದೆ ಎಂದು ಕರೆ ಮಾಡಿದರು. ಅದಾಗಿ ಒಂದೆರಡು ತಾಸುಗಳಲ್ಲಿಯೇ ಅಮ್ಮ ಅಸುನೀಗಿದರು. ತಂದೆಯೂ ಕೋವಿಡ್‌ನಿಂದ ಮೃತಪಟ್ಟಿದ್ದಾರೆ’ ಎಂದು ತಾವರೆಕೆರೆ ಬಳಿ ಅಂತ್ಯಸಂಸ್ಕಾರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಹೇಳಿದರು.

‘ವೈದ್ಯಕೀಯ ಆಮ್ಲಜನಕ ಸೌಲಭ್ಯ ಹೊಂದಿದ್ದ ಹಾಸಿಗೆಗಾಗಿ ಅಲೆದಾಡಬೇಕಾಯಿತು. ನಂತರ, ನಗರದೊಳಗಿನ ಚಿತಾಗಾರದ ಎದುರೂ ಸಾಲು ನಿಲ್ಲಬೇಕಾಯಿತು. ಸರ್ಕಾರ ಸಾಮೂಹಿಕ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡುವುದಕ್ಕೂ ಮುನ್ನ ಆಕ್ಸಿಜನ್‌, ವೆಂಟಿಲೇಟರ್‌ ಸಹಿತ ಹಾಸಿಗೆ ಒದಗಿಸಲು ಆದ್ಯತೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಪರಿಸ್ಥಿತಿ ಬಹಳ ಗಂಭೀರವಾಗಿದೆ. ನಮಗೇನೂ ಆಗುವುದಿಲ್ಲ ಎಂಬ ಭಂಡ ಧೈರ್ಯ ಬಿಡಬೇಕು. ಮನೆಯಲ್ಲಿಯೇ ಇರಬೇಕು. ಸರ್ಕಾರಕ್ಕೆ ಸಹಕಾರ ನೀಡಬೇಕು’ ಎಂದು ಮತ್ತೊಬ್ಬರು ಸಲಹೆ ನೀಡಿದರು.

ಪಿಪಿಇ ಕಿಟ್‌ಗೆ ಗುಂಡಿ: ದಿನಕ್ಕೆ 40ರಿಂದ 50 ಶವಗಳ ಅಂತ್ಯಸಂಸ್ಕಾರವನ್ನು ಚಿತಾಗಾರದ ಸಿಬ್ಬಂದಿ ಮಾಡುತ್ತಿದ್ದಾರೆ. ಇವರು ಬಳಸಿ ಬಿಸಾಡುವ ಪಿಪಿಇ ಕಿಟ್‌ಗಳನ್ನು ಹೂಳು ಈ ಪ್ರದೇಶಗಳಲ್ಲಿ ಪ್ರತ್ಯೇಕ ಗುಂಡಿಗಳನ್ನು ತೋಡಲಾಗಿದೆ. ಶವಗಳನ್ನು ಸುಡಲು ಬೇಕಾದ ಸೌದೆಗಳನ್ನು ರಾಶಿ ಹಾಕಲಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ