Breaking News
Home / ಜಿಲ್ಲೆ / ಬೆಂಗಳೂರು / ಕೊರೊನಾ ಹೆಸರಿನಲ್ಲಿ 420 ಕೆಲಸ ಮಾಡಿದ ಅಪೋಲೊ ಆಸ್ಪತ್ರೆ ವಿರುದ್ಧ ಎಫ್‌ಐಆರ್ !

ಕೊರೊನಾ ಹೆಸರಿನಲ್ಲಿ 420 ಕೆಲಸ ಮಾಡಿದ ಅಪೋಲೊ ಆಸ್ಪತ್ರೆ ವಿರುದ್ಧ ಎಫ್‌ಐಆರ್ !

Spread the love

ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಕೊರೋನಾ ಸೋಂಕಿಗಿಂತಲೂ ಅದರ ಭಯ ಜನರಲ್ಲಿ ಆವರಿಸಿದೆ. ಇದನ್ನೇ ಲಾಭ ಮಾಡಿಕೊಂಡಿರುವ ಕೆಲವು ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ಲಕ್ಷ ಲಕ್ಷ ಸುಲಿಗೆ ಮಾಡಲು ಆರಂಭಿಸಿವೆ. ಕೋವಿಡ್ 19 ಚಿಕಿತ್ಸೆ ಪಡೆದು ಮನೆಗೆ ತೆರಳಿದ ರೋಗಿಗಳ ಬಗ್ಗೆ ಸುಳ್ಳು ಮಾಹಿತಿ ಉಲ್ಲೇಖಿಸಿ ಸರ್ಕಾರಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದಾಖಲಾಗಿದ್ದರು. ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಅಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ನಟ ಸುದೀಪ್ ಕೂಡ ಇದೇ ಆಸ್ಪತ್ರೆಯಲ್ಲಿಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ಇತ್ತೀಚೆಗೆ ಮಹಾ ಎಡವಟ್ಟು ಮಾಡಿರುವ ಅಪೋಲೋ ಆಸ್ಪತ್ರೆ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ. ಬಿ.ಬಿ.ಎಂಪಿ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ನೀಡಿರುವ ದೂರಿನ ಮೇರೆಗೆ ಅಪೋಲೊ ಆಸ್ಪತ್ರೆಯ ಸಿಇಓ ಸೇರಿದಂತೆ ಆರು ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

 

ಏನಿದು ವಂಚನೆ: ಬಿಬಿಎಂಪಿ ಬೊಮ್ಮನಹಳ್ಳಿ ವಲಯಕ್ಕೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆ ಬರುತ್ತದೆ. ಬಿಬಿಎಂಪಿ ಕೋಟಾದಡಿಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಸೂರ್ಯನಾರಾಯಣಶೆಟ್ಟಿ ಎಂಬುವರು ಅಪೋಲೊ ಆಸ್ಪತ್ರೆಗೆ ಏ. 14 ರಂದು ದಾಖಲಾಗಿದ್ದರು. ಏ. 20 ರಂದು ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದರು. ಆದರೆ, ಸೂರ್ಯ ನಾರಾಯಣಶೆಟ್ಟಿ ಅವರು ಏ. 24 ರ ವರೆಗೂ ಒಳರೋಗಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಬಿಎಂಪಿಯ ಪೋರ್ಟಲ್‌ನಲ್ಲಿ ಅಪೋಲೊ ಆಸ್ಪತ್ರೆ ಸಿಬ್ಬಂದಿ ಉಲ್ಲೇಖಿಸಿದ್ದರು. ಈ ಮೂಲಕ ಬಿಬಿಎಂಪಿ ಕೋಟಾದಡಿ ಮೀಸಲಿಟ್ಟಿದ್ದ ಕೋವಿಡ್ ಬೆಡ್‌ಗಳನ್ನು ಖಾಸಗಿಯವರಿಗೆ ನೀಡಿ ಅಕ್ರಮ ಲಾಭ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮಾತ್ರವಲ್ಲ, ರಾಜಾರಾಂ ಎಂಬ ಕೋವಿಡ್ ಸೋಂಕಿತ ವ್ಯಕ್ತಿ ಏ. 16 ರಂದು ಅಸ್ಪತ್ರೆಗೆ ದಾಖಲಾಗಿದ್ದು ಏ. 20 ರಂದು ಸಾವನ್ನಪ್ಪಿದ್ದಾರೆ. ರಾಜಾರಾಂ ಅವರ ಸಂಬಂಧಿಕರಿಂದ ಅಕ್ರಮವಾಗಿ 2.49 ಲಕ್ಷ ರೂ. ಹಣವನ್ನು ಅಕ್ರಮವಾಗಿ ಸುಲಿಗೆ ಮಾಡುವ ಜತೆಗೆ ಏ. 25 ರ ವರೆಗೂ ರಾಜಾರಾಂ ಆಸ್ಪತ್ರೆಯಲ್ಲಿಯೇ ಇರುವುದಾಗಿ ಸುಳ್ಳು ಲೆಕ್ಕ ತೋರಿಸಿ ಬಿಬಿಎಂಪಿಗೂ ವಂಚನೆ ಮಾಡಿದ್ದಾರೆ.

ಇದೇ ರೀತಿ ಕಾಶಿನಾಥ್ ಎಂಬ ಕೋವಿಡ್ ಸೋಂಕಿತ ರೋಗಿ ಏ. 17 ರಂದು ದಾಖಲಾಗಿ ಏ. 22 ರಂದೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ, ಬಿಬಿಎಂಪಿ ಪೋರ್ಟಲ್‌ನಲ್ಲಿ ಏ. 25 ರ ವರೆಗೂ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ಈ ಮೂಲಕ ಸುಳ್ಳು ಲೆಕ್ಕ ತೋರಿಸಿ ಖಾಲಿಯಿರುವ ಬಿಬಿಎಂಪಿ ಕೋಟಾದ ಹಾಸಿಗೆಗಳನ್ನು ಖಾಸಗಿಯವರಿಗೆ ನೀಡಿ ಹೆಚ್ಚಿನ ಹಣ ಸಂಪಾದನೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಕುರಿತ ಸಮಗ್ರ ದಾಖಲೆಗಳನ್ನು ಕಲೆ ಹಾಕಿರುವ ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆಸ್ಪತ್ರೆಯ ಆರು ಮಂದಿ ವಿರುದ್ಧ ದೂರು ನೀಡಿದ್ದಾರೆ.

ಅದರಂತೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯ ಸಿಇಓ ಡೆವಿಡ್ಸನ್, ಅಪೋಲೋ ಆಸ್ಪತ್ರೆ ನಿರ್ವಾಹಣಾ ಮುಖ್ಯಸ್ಥೆ ಕಲ್ಪನಾ, ಮೆಡಿಕಲ್ ಸೂಪರಿಡೆಂಟ್‌ಗಳಾದ ಶಾಂತಾ, ಸಹನಾ, ಆರೋಗ್ಯ ಮಿತ್ರ ವಿಭಾಗದ ಚಂದನಾ ಆರ್‌. ಮತ್ತು ಮಂಜುಳಾ ಹಾಗೂ ಇತರರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 ಅಡಿ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಕೆಲ ದಿನಗಳ ಹಿಂದೆ ಫೋರ್ಟೀಸ್ ಆಸ್ಪತ್ರೆಯ ವಿರುದ್ಧ ಕೇಸು ದಾಖಲಾಗಿತ್ತು. ಸರ್ಕಾರಿ ಕೋಟಾದಡಿ ದಾಖಲಾಗುವ ರೋಗಿಗಳನ್ನು ಮೂರೇ ದಿನಕ್ಕೆ ಹೊರಗೆ ಕಳುಹಿಸಿ ಸರ್ಕಾರದ ಕೋಟಾದಡಿಯ ಹಾಸಿಗೆಗಳನ್ನು ಬೇರೆಯವರಿಗೆ ಮಾರಾಟ ಮಾಡಿಕೊಂಡು ಹಣ ಮಾಡುವ ದಂಧೆಯಲ್ಲಿ ಆಸ್ಪತ್ರೆಗಳು ತೊಡಗಿರುವುದು ಸರ್ಕಾರದ ನಿದ್ಧೆ ಗೆಡಿಸಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ