Home / ಜಿಲ್ಲೆ / ಬೆಂಗಳೂರು / ಖಾಸಗಿ ಕಂಪೆನಿಗಳೊಂದಿಗೆ ಸಾರಿಗೆ ಅಧಿಕಾರಿಗಳ ದೋಸ್ತಿ, ಬೈಕ್‍ಟ್ಯಾಕ್ಸಿ ಚಾಲಕರ ಜತೆ ಕುಸ್ತಿ

ಖಾಸಗಿ ಕಂಪೆನಿಗಳೊಂದಿಗೆ ಸಾರಿಗೆ ಅಧಿಕಾರಿಗಳ ದೋಸ್ತಿ, ಬೈಕ್‍ಟ್ಯಾಕ್ಸಿ ಚಾಲಕರ ಜತೆ ಕುಸ್ತಿ

Spread the love

ಬೆಂಗಳೂರು,ಏ.22- ಖಾಸಗಿ ಕಂಪೆನಿ ಗಳ ಲಾಭದಾಸೆ, ಅಧಿಕಾರಿಗಳ ಬೇಜವಾಬ್ದಾರಿತನ ದಿಂದಾಗಿ ಬೈಕ್ ಟ್ಯಾಕ್ಸಿ ಸೇವೆಯಲ್ಲಿ ಭಾರೀ ಗೊಂದಲಗಳು ಉಂಟಾಗಿದ್ದು, ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ರ್ಯಾಪಿಡೋ, ಓಲಾ, ಊಬರ್ ಸೇರಿದಂತೆ ಹಲವಾರು ಕಂಪೆನಿಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತಿವೆ.

ಇದು ಸಂಪೂರ್ಣ ಅಕ್ರಮ ಅನಕೃತ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಔಪಚಾರಿಕವಾಗಿ ಹೇಳುತ್ತಿದ್ದಾರೆ. ಆದರೆ, ರ್ಯಾಪಿಡೊ ಸೇರಿದಂತೆ ಬಹಳಷ್ಟು ಖಾಸಗಿ ಕಂಪೆನಿಗಳು ರಾಜಾರೋಷವಾಗಿ ದೃಶ್ಯ ಮಾಧ್ಯಮಗಳಲ್ಲಿ ಜಾಹಿರಾತು ನೀಡಿ ಗ್ರಾಹಕ ರನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ.
ಅನಧಿಕೃತವಾಗಿ ವ್ಯವಹಾರ ಇಷ್ಟು ರಾಜಾರೋಷವಾಗಿ ನಡೆಯುತ್ತಿದ್ದರೂ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ.

ಈ ಬಗ್ಗೆ ಸಾರಿಗೆ ಅಧಿಕಾರಿಗಳು ಪ್ರಶ್ನಿಸಿದಾಗ ಬೆಂಗಳೂರಿನಲ್ಲಿ ಒಂದೆರಡು ಕಂಪೆನಿಗೆ ಕಾರ್‍ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲಾಗಿದೆ. ಅದರ ಹೊರತಾಗಿ ಬೈಕ್ ಟ್ಯಾಕ್ಸಿಗೆ ಯಾವುದೇ ಅನುಮತಿ ಇಲ್ಲ. ಅದು ಸಂಪೂರ್ಣ ಅನಧಿಕೃತ ಎಂದು ಸ್ಪಷ್ಟಪಡಿಸಿದ್ದಾರೆ. ಯಾರೇ ಈ ಸೇವೆ ಒದಗಿಸುತ್ತಿದ್ದರೂ ಅವರ ವಿರುದ್ಧ ಮೋಟಾರು ವಾಹನ ಕಾಯ್ದೆ ಅನುಸಾರ ಕ್ರಮ ಜರುಗಿಸುವುದಾಗಿ ಸಾರಿಗೆ ಇಲಾಖೆಯ ಉನ್ನಾತಾಧಿಕಾರಿಗಳು ತಿಳಿಸಿದ್ದಾರೆ.

ಬೈಕ್ ಟ್ಯಾಕ್ಸಿ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ದ್ವಿಚಕ್ರ ವಾಹನ ಸವಾರರ ಮೇಲೆ ದೌರ್ಜನ್ಯಗಳಾಗುತ್ತಿವೆ. ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು ತಮಗೆ ಬೇಸರವಾದಾಗಲೆಲ್ಲಾ ರಸ್ತೆಗಿಳಿದು ಬೈಕ್ ಟ್ಯಾಕ್ಸಿಯಲ್ಲಿ ತೊಡಗಿರುವ ದ್ವಿಚಕ್ರ ಸವಾರರನ್ನು ತಡೆದು ಜಪ್ತಿ ಮಾಡುತ್ತಿದ್ದಾರೆ. ಅವರ ಲೈಸೆನ್ಸ್ , ಬೈಕ್‍ನ ದಾಖಲಾತಿಗಳನ್ನು ಕಿತ್ತುಕೊಳ್ಳುವುದು, ಸಾವಿರಾರು ರೂ. ದಂಡ ವಿಸುವುದನ್ನು ಮಾಡುತ್ತಿದ್ದಾರೆ.

ಹೊಟ್ಟೆಪಾಡಿಗಾಗಿ ಬೈಕ್‍ಟ್ಯಾಕ್ಸಿ ಸೇವೆಗೆ ಬರುವ ದ್ವಿಚಕ್ರ ವಾಹನ ಸಾವರರ ಮೇಲೆ ಪೌರುಷ ತೋರಿಸುವ ಬದಲಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ನೇರವಾಗಿ ಸೇವೆ ಒದಗಿಸುವ ಕಂಪೆನಿಗಳ ವಿರುದ್ಧವೇ ಕ್ರಮ ಕೈಗೊಳ್ಳಲು ಅವಕಾಶವಿದ್ದರೂ ಅದನ್ನು ಮಾಡುತ್ತಿಲ್ಲ.

ಬೈಕ್ ಟ್ಯಾಕ್ಸಿ ಸೇವೆಯ ಅಪ್ಲಿಕೇಶನನ್ನು ಸ್ಥಗಿತಗೊಳಿಸುವಂತೆ ಕಂಪೆನಿಗೆ ಮೂರು ತಿಂಗಳ ಹಿಂದೆ ಪತ್ರ ಬರೆದಿರುವುದಾಗಿ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಪತ್ರ ಬರೆದು ಕೈ ಕಟ್ಟಿ ಕೂರುವುದಷ್ಟೇ ಇಲಾಖೆಯ ಜವಾಬ್ದಾರಿಯೆ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಬರುತ್ತಿಲ್ಲ. ಹಾದಿಬೀದಿಯಲ್ಲಿ ದ್ವಿಚಕ್ರ ವಾಹನ ಸವಾರರನ್ನು ತಡೆದು ದೌರ್ಜನ್ಯ ನಡೆಸಲು ಸಾಮಥ್ರ್ಯವಿರುವ ಅಧಿಕಾರಿಗಳು ಅಷ್ಟೇ ಗಡಸುತನದಿಂದ ಖಾಸಗಿ ಕಂಪೆನಿಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.

ಒಂದೆಡೆ ಪೊಲೀಸರು, ಸಾರಿಗೆ ಇಲಾಖೆಯ ಅಧಿಕಾರಿಗಳ ಕಿರುಕುಳವಾದರೆ, ಮತ್ತೊಂದೆಡೆ ಟ್ಯಾಕ್ಸಿ ಚಾಲಕರು ಅದರ ಸಂಘಟನೆಗಳು, ಮುಖಂಡರು ಎಲ್ಲೆಂದರಲ್ಲಿ ದಾಳಿ ಮಾಡಿ ಮಾರಲ್‍ ಪೊಲೀಸಿಂಗ್ ಮಾಡುತ್ತಿದ್ದಾರೆ. ವೈಟ್ ಬೋರ್ಡ್ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಅಪರಾಧ. ಅಪಘಾತವಾದರೆ ಪ್ರಯಾಣಿಕರಿಗೆ ಯಾವುದೇ ವಿಮೆ ಸಿಗುವುದಿಲ್ಲ ಎಂಬ ಆತಂಕ ಹಾಗೂ ವೈಟ್ ಬೋರ್ಡ್‍ನ ವಾಹನಗಳೇ ಪ್ರಯಾಣಿಕರನ್ನು ಕರೆದೊಯ್ಯುವುದಾದರೆ ತೆರಿಗೆ ಕಟ್ಟಿ ಯಲ್ಲೋಬೋರ್ಡ್ ಕಾರು ಹಾಗೂ ಇತರೆ ವಾಹನಗಳನ್ನು ಓಡಿಸುತ್ತಿರುವ ಚಾಲಕರು ಹಾಗೂ ಮಾಲೀಕರ ಆದಾಯದ ಗತಿ ಏನು ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಟ್ಯಾಕ್ಸಿ ಚಾಲಕರು ಕೇಳುತ್ತಿರುವ ಈ ಪ್ರಶ್ನೆಯೂ ಸಮಂಜಸವಾಗಿದೆ.

ಖಾಸಗಿ ಕಂಪೆನಿಯವರು ವಿವಿಧ ಆಮಿಷ ಗಳನ್ನು ಒಡ್ಡಿ ದ್ವಿಚಕ್ರವಾಹನ ಸವಾರರನ್ನು ತಮ್ಮ ಸೇವೆಗೆ ಬಳಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಹಲವಾರು ಭತ್ಯೆಗಳನ್ನು ನೀಡಿ ದುಡಿಮೆಯ ಆಸೆ ತೊರಿಸಲಾಗುತ್ತಿದೆ. ಬಹಳಷ್ಟು ಮಂದಿ ಕಂಪೆನಿಯ ಆಮಿಷಗಳಿಗೆ ಬಲಿಯಾಗಿ ಇರುವ ಕೆಲಸ ಬಿಟ್ಟು ಓಲಾ, ಊಬರ್ , ರ್ಯಾಪಿಡೋ ಬೈಕ್‍ಟ್ಯಾಕ್ಸಿಗೆ, ಜುಮೋಟೋ ಹಾಗೂ ಇತರ ಆಹಾರ ಸರಬರಾಜು ಕಂಪೆನಿಗಳ ಡೆಲಿವರಿ ಬಾಯ್‍ಗಳಾಗಿ ವೃತ್ತಿ ಆರಂಭಿಸಿದ್ದಾರೆ.

ಈಗ ಎಲ್ಲೆಂದರಲ್ಲಿ ಚಾಲಕರು ಅಡ್ಡಗಟ್ಟಿ ಗಲಾಟೆ ಮಾಡುತ್ತಿರುವುದು ಹಾಗೂ ಆಗಾಗ್ಗೆ ಅಧಿಕಾರಿಗಳು ಕೂಡ ಕಿರುಕುಳ ನೀಡುತ್ತಿರುವುದರಿಂದ ಲಕ್ಷಾಂತರ ಮಂದಿಯ ಭವಿಷ್ಯ ಡೋಲಾಯಮಾಯವಾಗಿದೆ. ಯಾರದೋ ಬೈಕ್, ಯಾರದೋ ಪೆಟ್ರೋಲ್, ಹಣ ಇನ್ಯಾವುದೋ ಗ್ರಾಹಕ ನೀಡುತ್ತಾನೆ. ಆದರೆ, ಇದ್ಯಾವುದಕ್ಕೂ ಬಂಡವಾಳ ಹಾಕದೆ ಒಂದು ವೆಬ್‍ಸೈಟ್ ಹಾಗೂ ಅಪ್ಲಿಕೇಶನ್ ಸ್ಥಾಪಿಸಿ ಎಸಿ ಕಚೇರಿಯಲ್ಲಿ ಕುಳಿತಿರುವ ಖಾಸಗಿ ಕಂಪೆನಿಯವರು ಕೋಟ್ಯಂತರ ರೂ. ಲಾಭ ಪಡೆಯುತ್ತಿದ್ದಾರೆ.

ಪ್ರತಿಯೊಂದು ಟ್ರಿಪ್‍ಗೂ ಆರಂಭದಲ್ಲಿ ಶೇ.20ರಷ್ಟು, ನಂತರ ಶೇ.5ರಷ್ಟು ಸೇವೆ ಶುಲ್ಕವನ್ನು ಗ್ರಾಹಕರು ಹಾಗೂ ಮಾಲೀಕರಿಂದ ವಸೂಲಿ ಮಾಡುತ್ತಿದ್ದಾರೆ. ಇತ್ತೀಚೆಗೆ ಕಿರುಕುಳ ಹೆಚ್ಚಾಗಿ ಬಹಳಷ್ಟು ಮಂದಿ ಬೈಕ್‍ಟ್ಯಾಕ್ಸಿಯಿಂದ ಹಿಂದೆ ಸರಿಯು ತ್ತಿರುವುದರಿಂದ ಎಚ್ಚೆತ್ತುಕೊಂಡ ಖಾಸಗಿ ಕಂಪೆನಿಗಳು ಎಮರ್ಜನ್ಸಿ ರೆಸ್ಪಾನ್ಸ್ ಟೀಮ್ (ಇಆರ್‍ಟಿ) ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡುತ್ತಿವೆ.

ಚಾಲಕರ ಮಾರಲ್ ಪೊಲೀಸಿಂಗ್ ಹಾಗೂ ಅಧಿಕಾರಿಗಳ ಕಿರುಕುಳದಿಂದ ಗಲಿಬಿಲಿ ಗೊಳಗಾದ ಬೈಕ್ ಟ್ಯಾಕ್ಸಿ ಚಾಲಕರು ಇಆರ್‍ಟಿ ಬಟನ್ ಒತ್ತಿ ನೆರವು ಕೇಳುವಷ್ಟರಲ್ಲೇ ಅವರ ಗಂಟಲ ಪಸೆ ಹಾರಿ ಹೋಗಿರುತ್ತದೆ.

ಒಂದು ಕಡೆ ಬೈಕ್‍ಟ್ಯಾಕ್ಸಿ ಚಾಲಕರನ್ನು ಇಕ್ಕಟ್ಟಿಗೆ ಸಿಲುಕಿಸಿ ಮಾಜಾ ತೆಗೆದು ಕೊಳ್ಳುತ್ತಿರುವ ಸಾರಿಗೆ ಇಲಾಖೆ ಅಧಿಕಾರಿ ಗಳು, ಮತ್ತೊಂದು ಕಡೆ ಖಾಸಗಿ ಕಂಪೆನಿ ಗಳಿಗೆ ನೋಟಿಸ್ ಹೆಸರಿನಲ್ಲಿ ಪ್ರೇಮ ಪತ್ರ ಬರೆದು ಕೊಂಡು ಕಾಲಹರಣ ಮಾಡುತ್ತಿದ್ದಾರೆ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ