Breaking News
Home / Madikeri / ರಾಜ್ಯದ ವಿವಿಧೆಡೆ ಉತ್ತಮ ಮಳೆ : ಮಂಗಳೂರು ರಸ್ತೆ ಬದಿ ಕುಸಿತ, ಎರಡು ದಿನ ಎಲ್ಲೋ ಅಲರ್ಟ್‌

ರಾಜ್ಯದ ವಿವಿಧೆಡೆ ಉತ್ತಮ ಮಳೆ : ಮಂಗಳೂರು ರಸ್ತೆ ಬದಿ ಕುಸಿತ, ಎರಡು ದಿನ ಎಲ್ಲೋ ಅಲರ್ಟ್‌

Spread the love

ಮಡಿಕೇರಿ/ಮಣಿಪಾಲ: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಬಿರುಸುಗೊಂಡಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡುಗಳಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಬುಧವಾರ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಾದ್ಯಂತ ಸಿಡಿಲು, ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಮರ, ಬರೆ ಕುಸಿದು ಹಾನಿಯಾದ ಘಟನೆ ನಡೆದಿದೆ.

ಕೊಡಗಿನಲ್ಲಿ ಬುಧವಾರ ಸುಮಾರು ಒಂದು ತಾಸು ಸುರಿದ ಮಳೆಗೆ ಚರಂಡಿ ಮತ್ತು ರಸ್ತೆಗಳಲ್ಲಿ ನೀರು ತುಂಬಿ ಹರಿದಿದೆ. ರಾಜಾಸೀಟು ಉದ್ಯಾವನದ ಆವರಣದಲ್ಲಿ ಮರವೊಂದು ಬಿದ್ದು ಹಾನಿಯಾಗಿದೆ. ಮಂಗಳೂರಿಗೆ ಸಾಗುವ ರಸ್ತೆಯ ಒಂದು ಬದಿಯ ಬರೆ ಕುಸಿದಿದ್ದು, ನಿರಂತರ ಮಳೆಯಾದರೆ ರಸ್ತೆಗೆ ಹಾನಿಯಾಗುವ ಸಾಧ್ಯತೆಗಳಿವೆ. ವಿರಾಜಪೇಟೆ, ಸೋಮವಾರಪೇಟೆ, ನಾಪೋಕ್ಲು, ಸಿದ್ದಾಪುರ, ಸುಂಟಿಕೊಪ್ಪ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಡಿಕೇರಿ ನಗರದ ವಿವಿಧ ಬಡಾವಣೆಗಳ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಕರಾವಳಿಯ ವಿವಿಧೆಡೆ ಉತ್ತಮ ಮಳೆ
ಬುಧವಾರ ಬೆಳಗ್ಗಿನಿಂದ ಆರಂಭಿಸಿ ರಾತ್ರಿಯ ವರೆಗೂ ಕರಾವಳಿಯ ವಿವಿಧ ಪ್ರದೇಶಗಳು ಗುಡುಗು ಸಿಡಿಲು, ಗಾಳಿ ಸಹಿತ ಭಾರೀ ಮಳೆಗೆ ಸಾಕ್ಷಿಯಾದವು. ಪಶ್ಚಿಮ ಘಟ್ಟ ತಪ್ಪಲಿನ ಸುಳ್ಯ, ಸುಬ್ರಹ್ಮಣ್ಯ, ಪಂಜ, ಬೆಳ್ತಂಗಡಿ ಭಾಗದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ಉರುಳಿವೆ. ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದೆ. ಸಂಚಾರಕ್ಕೆ ಕೂಡ ಅಡ್ಡಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಕೆಲವು ದಿನಗಳಿಂದ ಈ ಭಾಗದಲ್ಲಿ ಸತತ ಮಳೆಯಾಗುತ್ತಿದ್ದು, ನೇತ್ರಾವತಿ, ಕುಮಾರಧಾರ ಮತ್ತು ಅದರ ಉಪನದಿಗಳಲ್ಲಿ ನೀರಿನ ಮಟ್ಟ ಏರಿದೆ.

ಸಿಡಿಲು ಬಡಿದು ಇಬ್ಬರ ಸಾವು
ದಕ್ಷಿಣ ಒಳನಾಡಿನ ವಿವಿಧೆಡೆಗಳಲ್ಲಿ ಒಂದೆರಡು ದಿನ ಗಳಿಂದ ಮಳೆಯಾಗುತ್ತಿದ್ದು, ಬುಧವಾರವೂ ಮುಂದು ವರಿದಿದೆ. ಹಾಸನ, ಮಂಡ್ಯ ಜಿಲ್ಲೆಗಳ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಯೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಅತ್ತ ಉತ್ತರ ಒಳನಾಡಿನ ರಾಯಚೂರಿನಲ್ಲಿ ಲ್ಲಿ ಸಿಡಿಲು ಬಡಿದು ಕುರಿಗಾಹಿ ಮತ್ತು 16 ಕುರಿಗಳು ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ.

ಸಿಡಿಲು ಸಹಿತ ಗಾಳಿ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಹಲವೆಡೆಗಳಲ್ಲಿ ಎ. 15 ಮತ್ತು 16ರಂದು ಹಾಗೂ ಉತ್ತರ ಒಳನಾಡಿನಲ್ಲಿ ಎ. 15ರಂದು ಗುಡುಗು- ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಎಲ್ಲೋ ಅಲರ್ಟ್‌ ಘೋಷಿಸಿದೆ. ಈ ಎರಡು ದಿನಗಳಲ್ಲಿ ಸಿಡಿಲಿನ ಆರ್ಭಟ ಹೆಚ್ಚಿರಲಿದೆ. ಕರಾವಳಿ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ರಾಜ್ಯದ ಅಲ್ಲಲ್ಲಿ ಗುಡುಗು-ಸಿಡಿಲು ಸಹಿತ ಮಳೆ ಎ. 19ರ ವರೆಗೂ ಮುಂದುವರಿಯುವ ಸಾಧ್ಯತೆಗಳಿವೆ. ಇದೇ ಅವಧಿಯಲ್ಲಿ ಕೇರಳದ ವಿವಿಧ ಕಡೆಗಳಲ್ಲಿಯೂ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.


Spread the love

About Laxminews 24x7

Check Also

ಉಗ್ರನಿಂದ ಬಾಂಬ್‌ ಸ್ಫೋಟದ ಬೆದರಿಕೆ ಬಂದಿದೆ ಎಂದವನ ವಿರುದ್ಧ ಎಫ್‌ಐಆರ್‌

Spread the loveಬೆಂಗಳೂರು: ಬಸವೇಶ್ವರ ನಗರದ ಖಾಸಗಿ ಶಾಲೆಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದ ಬೆನ್ನಲ್ಲೇ ಪಾಕಿಸ್ತಾನದ ಉಗ್ರನೊಬ್ಬ ಬೆಂಗಳೂರಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ