Breaking News
Home / ರಾಜ್ಯ / ಕಾಂಗ್ರೆಸ್‌ ಸೇರಿ ಗಳಿಸಿದ್ದೆಲ್ಲ ಕಳೆದುಕೊಂಡಿದ್ದೆ: ಜಗ್ಗೇಶ್‌

ಕಾಂಗ್ರೆಸ್‌ ಸೇರಿ ಗಳಿಸಿದ್ದೆಲ್ಲ ಕಳೆದುಕೊಂಡಿದ್ದೆ: ಜಗ್ಗೇಶ್‌

Spread the love

ಚಿತ್ರದುರ್ಗ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಹಿಂದೆ ಮಂಕುಬೂದಿ ಎರಚಿದ ಕಾಂಗ್ರೆಸ್‌ನ ಎಂ.ಡಿ. ಲಕ್ಷ್ಮಿನಾರಾಯಣ್ ನನಗೂ ಬೆಂಕಿ ಇಟ್ಟ. ಭವಿಷ್ಯಕ್ಕೆ ಕಲ್ಲು ಹಾಕಿದ’ ಎಂದು ಬಿಜೆಪಿ ರಾಜ್ಯ ವಕ್ತಾರ ಜಗ್ಗೇಶ್‌ ದೂರಿದರು.

ಇಲ್ಲಿ ಭಾನುವಾರ ಬಿಜೆಪಿಯಿಂದ ನಡೆದ ‘ಮಾಧ್ಯಮ ಮಂಥನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎರಡು ದಶಕಗಳ ಕೆಳಗೆ ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿ ಕಾರ್ಯದರ್ಶಿಯಾಗಿ ಮಾಡಿದರು. ವೇದಿಕೆಗಳಲ್ಲಿ ಕೂರಿಸುವುದನ್ನು ನೋಡಿ ಭಾರಿ ದೊಡ್ಡ ಹುದ್ದೆ ಅಂದುಕೊಂಡೆ. ಆದರೆ, ತುರುವೆಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಯಾಗಿ ಕಣಕ್ಕಿಳಿದಾಗಲೇ ರಾಜಕೀಯದೊಳಗಿನ ನೈಜ ಸಂಗತಿ ಅರಿವಾಗಿದ್ದು’ ಎಂದರು.

‘ಆಗಿನ ಕಾಲದಲ್ಲೇ ಬೆಳಿಗ್ಗೆ ನಡೆದ ಕಾಂಗ್ರೆಸ್‌ ನಾಯಕರ ಪ್ರಚಾರಕ್ಕಾಗಿ ₹ 50 ಲಕ್ಷ ಖರ್ಚು ಮಾಡಿದ್ದೆ. ಅಲ್ಲಿನ ಮಾಜಿ ಶಾಸಕರೊಬ್ಬರು ಇದು ಕೇವಲ ಟ್ರೈಲರ್ ಅಷ್ಟೇ. ಮಧ್ಯಾಹ್ನ ಮತ್ತು ಸಂಜೆಯ ಖರ್ಚು ಬೇರೆ ಇದೆ ಎಂದಾಗ ದಿಕ್ಕೇ ತೋಚದಂತಾಗಿದ್ದೆ. ಮೋಟಮ್ಮನ ಮೆರವಣಿಗೆಗೆ ₹ 8 ಲಕ್ಷ ಖರ್ಚು ಮಾಡಿದ್ದೆ’ ಎಂದು ಸಿನಿಮಾ ಶೈಲಿಯಲ್ಲಿ ಹಾಸ್ಯಭರಿತವಾಗಿ ರಾಜಕೀಯ ಜೀವನದಲ್ಲಾದ ಬೆಳವಣಿಗೆ ಕುರಿತು ಅನುಭವ ಹಂಚಿಕೊಂಡರು.

‘ಸಿನಿಮಾದಲ್ಲಿ ಕಷ್ಟಪಟ್ಟು ಗಳಿಸಿದ್ದ ನಾಲ್ಕು ನಿವೇಶನಗಳನ್ನು ಅಂದಿನ ಚುನಾವಣೆಗಾಗಿ ಮಾರಾಟ ಮಾಡಿದರೂ ಗೆಲ್ಲಲಿಲ್ಲ. 7 ಸಾವಿರ ದಾಟದ ಕಡೆ 26 ಸಾವಿರ ಮತ ಪಡೆದೆ ಎಂದು ಕಾಂಗ್ರೆಸ್‌ ನಾಯಕರು ಶಹಬ್ಬಾಸ್‌ ಗಿರಿ ನೀಡಿದರು. ಕಾಫಿ ಪುಡಿ ತರಲು ಜೋಬಿನಲ್ಲಿ ಬಿಡಿಗಾಸು ಇರಲಿಲ್ಲ. ನನ್ನ ಸಹಾಯಕ್ಕೆ ಯಾರೂ ಧಾವಿಸಲಿಲ್ಲ’ ಎಂದು ನೊಂದು ನುಡಿದರು.

‘ಕಾಂಗ್ರೆಸ್‌ ಸೇರಿ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡಿದ್ದೆ. ಅನೇಕ ನೋವು, ಅಪಮಾನ ಅನುಭವಿಸಿದೆ. ಅಂತಹ ವೇಳೆ ನನ್ನ ನೆರವಿಗೆ ನಿಂತಿದ್ದು ತೇಜಸ್ವಿನಿ ಗೌಡ. ಮುಂದಿನ ಚುನಾವಣೆಯಲ್ಲೂ ನನ್ನ ವಿರುದ್ಧ ಸಂಚು ರೂಪಿಸಿ ಕೆಲವರು ಪಕ್ಷದ ಟಿಕೆಟ್‌ ತಪ್ಪಿಸಿದರು. ಸ್ಪರ್ಧಿಸಲು ನನ್ನ ಬಳಿ ಹಣವೂ ಇರಲಿಲ್ಲ. ಅಭಿಮಾನಿಗಳೇ ಪಕ್ಷೇತರನಾಗಿ ಕಣಕ್ಕಿಳಿಸಿ, ಖರ್ಚು ಮಾಡಿ ಗೆಲ್ಲಿಸಿದರು. ಆ ಋಣ ತೀರಿಸಲು ಸಾಧ್ಯವಿಲ್ಲ’ ಎಂದರು.

‘ತುಂಬಾ ದೊಡ್ಡ ರಾಕ್ಷಸರ ಮುಂದೆ ನಿಂತು ಗೆದ್ದು ಬಂದಿದ್ದೇನೆ. ಈಗ ರಾಜ್ಯದಲ್ಲಿ ದೊಡ್ಡ ದೊಡ್ಡ ನಾಯಕರ ಹಣೆಬರಹ ಬದಲಿಸಲು ಪ್ರಯತ್ನ ನಡೆಯುತ್ತಿದೆ. ಉಪ್ಪು ತಿಂದವರು ನೀರು ಕುಡಿಯುವುದು ನಿಶ್ಚಿತ. ಅದರಲ್ಲಿ ಅನುಮಾನವಿಲ್ಲ’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಪ್ರತಿಕ್ರಿಯಿಸಿದರು.

‘ಸಿನಿಮಾ ಹೆಚ್ಚು ನೋಡಬೇಡಿ’

‘ಇಂದು ಯಾರ‍್ಯಾರೋ ಹೀರೊಗಳಾಗುತ್ತಿದ್ದಾರೆ. ಸಾಮಾಜಿಕ ಕಾಳಜಿಯುಳ್ಳ ಚಿತ್ರಗಳನ್ನಷ್ಟೇ ನೋಡಿ. ಹೆಚ್ಚಾಗಿ ಸಿನಿಮಾ ನೋಡಬೇಡಿ’ ಎಂದು ಜಗ್ಗೇಶ್‌ ಯುವಸಮೂಹಕ್ಕೆ ಸಲಹೆ ನೀಡಿದರು.

‘ನಿಮ್ಮ ಭವಿಷ್ಯವನ್ನು ಯಾವ ನಟರೂ ರೂಪಿಸುವುದಿಲ್ಲ. ನಿಮ್ಮ ಬಡಾವಣೆಗಳಿಗೆ ರಸ್ತೆ, ಚರಂಡಿ, ನೀರು ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವುದಿಲ್ಲ. ಎರಡ್ಮೂರು ಗಂಟೆ ನಿಮ್ಮನ್ನು ರಂಜಿಸುತ್ತೇವೆ ಅಷ್ಟೇ ಹೊರತು ನಟ-ನಟಿಯರು ಎಂದಿಗೂ ನಿಮ್ಮ ಭಾಗದ ದೇವರಲ್ಲ. ನಾನೂ ಸೇರಿ ಸಿನಿಮಾ ಕ್ಷೇತ್ರದ ಹಲವರು ಸ್ವಾರ್ಥಿಗಳೇ’ ಎಂದು ಅವರು ಮನವರಿಕೆ ಮಾಡಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ