Breaking News
Home / ಜಿಲ್ಲೆ / ಬೆಂಗಳೂರು / ಬಿಎಸ್ವೈ ಬೆನ್ನಿಗೆ ನಿಂತರೇ ಡಿಕೆಶಿ? ಏನಿದು ರಮೇಶ್ ಕುಮಾರ್ ಮಾತಿನ ಮರ್ಮ!

ಬಿಎಸ್ವೈ ಬೆನ್ನಿಗೆ ನಿಂತರೇ ಡಿಕೆಶಿ? ಏನಿದು ರಮೇಶ್ ಕುಮಾರ್ ಮಾತಿನ ಮರ್ಮ!

Spread the love

ಬೆಂಗಳೂರು ಮಾರ್ಚ್ 23: ಸೋಮವಾರ (ಮಾ 22) ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ, ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಬೆಂಕಿಯುಂಡೆಯಂತಹ ಭಾಷಣ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು.

ಇವರ ಅಬ್ಬರದ ಭಾಷಣದ ಮಧ್ಯೆ ಮಾಜಿ ಸ್ಪೀಕರ್, ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಆಡಿದ ಮಾತು ಸದನವನ್ನು ನಗೆಗಡಲಲ್ಲಿ ತೇಲಿಸಿದ್ದು ಒಂದು ಕಡೆಯಾದರೆ, ಅವರ ಮಾತಿನ ಹಿಂದಿನ ಮರ್ಮವೇನು ಎನ್ನುವುದು ಸದ್ಯಕ್ಕೆ ಚರ್ಚೆಯ ವಿಷಯವಾಗಿದೆ.

 

ಸಿಎಂ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ರಾಜಕೀಯೇತರ ಬಾಂಧವ್ಯ ಎಲ್ಲರಿಗೂ ತಿಳಿದಿರುವ ವಿಚಾರ. ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿದ್ದ ವೇಳೆಯೂ ಪೀಠದಲ್ಲಿ ಕೂತು ಈ ವಿಚಾರವನ್ನು ಹಲವು ಬಾರಿ ಪ್ರಸ್ತಾವಿಸಿದ್ದುಂಟು.

 

ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಡಿಕೆಶಿ ಭಾಷಣ ಮಾಡುತ್ತಾ, ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಸಾರ್ವಜನಿಕರು ರಾಜಕೀಯ ಮುಖಂಡರನ್ನು ಎಷ್ಟು ಹೀನಾಯವಾಗಿ ನೋಡುತ್ತಿದ್ದಾರೆ ಎನ್ನುವುದನ್ನು ಡಿಕೆಶಿ ವಿವರಿಸುತ್ತಿದ್ದರು. ಯತ್ನಾಳ್ ವಿಚಾರ, ಸಿಎಂಗೆ ಬ್ಲ್ಯಾಕ್ ಮೇಲ್ ಮುಂತಾದ ವಿಚಾರದ ಬಗ್ಗೆ ಮಾತನಾಡುತ್ತಿದ್ದರು.

ಇನ್ನೂ ನಾಲ್ಕುನೂರು ಸಿಡಿಗಳಿವೆ, ಯತ್ನಾಳ್ ಹೇಳಿಕೆ

“ಇನ್ನೂ ನಾಲ್ಕುನೂರು ಸಿಡಿಗಳಿವೆ, ಬಿಜೆಪಿ ಮತ್ತು ಕಾಂಗ್ರೆಸ್ಸಿನ ಮಹಾನ್ ನಾಯಕರ ಸಿಡಿ ರೆಡಿಯಾಗುತ್ತಿದೆ ಎಂದು ಯತ್ನಾಳ್ ಹೇಳಿದ್ದಾರೆ. ನನ್ನ ಮನೆಯಲ್ಲಿ ಸಿಕ್ಕಿದ್ದು ಬರೀ ನಲವತ್ತು ಲಕ್ಷ. ನನ್ನ ಮೇಲೆ ಇಡಿ, ಸಿಬಿಐ ಕೇಸ್ ಗಳಿವೆ, ನಾನು ಅನುಭವಿಸುತ್ತಿದ್ದೇನೆ. ಮನಿ ಲಾಂಡ್ರಿಂಗ್ ಕೇಸ್ ಬಗ್ಗೆ ಶ್ರೀನಿವಾಸ ಗೌಡ್ರು ಕೂಡಾ ಮಾತಾಡಿದ್ದರು. ಯಾಕೆ ಈ ವಿಚಾರವೆಲ್ಲಾ ತನಿಖೆಯಾಗಿಲ್ಲ”ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತ ಪಡಿಸಿದರು.

ಯಡಿಯೂರಪ್ಪನವರಿಗೆ ಸಿಡಿ ಇದೆ ಎಂದು ತೋರಿಸಿ ಬ್ಲ್ಯಾಕ್ ಮೇಲ್

“ಯಡಿಯೂರಪ್ಪನವರಿಗೆ ಸಿಡಿ ಇದೆ ಎಂದು ತೋರಿಸಿ, ನಾನು, ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಲಕ್ಷ್ಮೀ ಹೆಬ್ಬಾಳ್ಕರ್ ಉತ್ತಮ ಅನುದಾನ ಪಡೆದುಕೊಳ್ಳುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸುತ್ತಾರೆ”. ಎಂದು ಹೇಳುತ್ತಾ ಡಿಕೆಶಿ, “ನನ್ನ ಮುಖ್ಯಮಂತ್ರಿಯನ್ನು ಯಾಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಾ, ನನ್ನ ಸಿಎಂ ಬಗ್ಗೆ ನನಗೆ ಚಿಂತೆಯಾಗಿದೆ, ಸಿಎಂ ಏನು ಕ್ರಮ ತೆಗೆದುಕೊಂಡರು” ಎಂದು ಕಾಂಗ್ರೆಸ್ ಶಾಸಕ ಜಾರ್ಜ್ ಅವರನ್ನು ಡಿಕೆಶಿ ಸದನದಲ್ಲಿ ತರಾಟೆಗೆ ತೆಗೆದುಕೊಂಡರು. ಆಗ, ರಮೇಶ್ ಕುಮಾರ್ ಮಾತನಾಡುತ್ತಾ..

ಇಂತಹ ಮನುಷ್ಯ (ಡಿಕೆಶಿ) ನಿಮ್ಮ ಬೆಂಬಲಕ್ಕೆ ನಿಂತ ಮೇಲೆ ನಿಮಗೆ ಏನೂ ಸಮಸ್ಯೆಯಾಗುವುದಿಲ್ಲ

“ಕ್ರಮ ತೆಗೆದುಕೊಳ್ಳುವ ವಿಚಾರವೆಲ್ಲಾ ಬಿಟ್ಟು ಬಿಡಿ ಸರ್” ಎಂದು ಬಿಎಸ್ವೈಗೆ ಹೇಳಿದ ರಮೇಶ್ ಕುಮಾರ್, “ಇಂತಹ ಮನುಷ್ಯ (ಡಿಕೆಶಿ) ನಿಮ್ಮ ಬೆಂಬಲಕ್ಕೆ ನಿಂತ ಮೇಲೆ ನಿಮಗೆ ಏನೂ ಸಮಸ್ಯೆಯಾಗುವುದಿಲ್ಲ, ನೀವು ನಿರಾತಂಕವಾಗಿರಿ. ಈಗ ಸಿಡಿ ಎಲ್ಲಿ ಬಿದ್ದು ಹೋಯಿತೋ ಗೊತ್ತಿಲ್ಲ. ಯಾರ ಮಾನ ಹೋಯಿತೋ ಗೊತ್ತಿಲ್ಲ, ಯಾರಿಗೆ ಏನಾಯಿತೋ ಗೊತ್ತಿಲ್ಲ, ನೀವಂತೂ ಸೇಫ್ ಆದ್ರಿ”ಎಂದು ರಮೇಶ್ ಕುಮಾರ್ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಹೇಳಿದರು.

ಹಲವು ಚರ್ಚೆಗೆ ನಾಂದಿ ಹಾಡಿದ ರಮೇಶ್ ಕುಮಾರ್ ಹೇಳಿಕೆ

ರಮೇಶ್ ಕುಮಾರ್ ಅವರ ಹೇಳಿಕೆ ಈಗ ಹಲವು ಚರ್ಚೆಗೆ ನಾಂದಿ ಹಾಡಿದೆ. ಜಾರಕಿಹೊಳಿ ಉಲ್ಲೇಖಿಸುತ್ತಿರುವ ಆ ಮಹಾನ್ ನಾಯಕ ಯಾರು ಎನ್ನುವುದು ಗೊತ್ತಿರುವ ವಿಚಾರ. ಜೊತೆಗೆ, ಆ ಸಿಡಿಯಲ್ಲಿ ಸಿಎಂ ಬಿಎಸ್ವೈ ಭ್ರಷ್ಟ ಎನ್ನುವ ಪದವನ್ನೂ ಬಳಸಲಾಗಿತ್ತು. ಹಾಗಾಗಿ, ರಮೇಶ್ ಕುಮಾರ್ ಹೇಳಿದಂತೆ ಡಿಕೆಶಿ ಬೆಂಬಲ, ಸಿಎಂ ಬಿಎಸ್ವೈ ಸೇಫ್ ಎನ್ನುವ ಹೇಳಿಕೆಯ ಹಿಂದೆ ಏನು ರಾಜಕೀಯ ಅಡಗಿದೆಯೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ