Breaking News
Home / ರಾಜ್ಯ / ವಿಜಯಪುರದಲ್ಲೂ ಕೋವಿಡ್ ಎರಡನೇ ಅಲೆ ಸ್ಫೋಟ; ಆತಂಕ

ವಿಜಯಪುರದಲ್ಲೂ ಕೋವಿಡ್ ಎರಡನೇ ಅಲೆ ಸ್ಫೋಟ; ಆತಂಕ

Spread the love

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ -19 ಎರಡನೇ ಅಲೆ ಪ್ರಾರಂಭವಾಗಿರುವ ಲಕ್ಷಣಗಳು ಕಂಡು ಬಂದಿದೆ. ಗುರುವಾರ ಒಂದೇ ದಿನ 46 ಕೋವಿಡ್ ಪಾಸಿಟಿವ್‌ ಪ್ರಕರಣಗಳು ವರದಿಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 14,719 ಜನರಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, 14,403 ಜನ ಗುಣಮುಖವಾಗಿದ್ದಾರೆ. 206 ಜನ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಸದ್ಯ 110 ಸಕ್ರಿಯ ಪ್ರಕರಣಗಳು ಇವೆ. ಕಳೆದ ನಾಲ್ಕೈದು ತಿಂಗಳಿಂದ ಈಚೆಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಾಸಿಟಿವ್‌ ಪ‍್ರಕರಣಗಳು ವರದಿಯಾಗಿರಲಿಲ್ಲ. ಮಾರ್ಚ್‌ ಆರಂಭದಿಂದ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗತೊಡಗಿವೆ.

ದಂಡ:

ಕೋವಿಡ್ ಎರಡನೇ ಅಲೆ ಹರಡದಂತೆ ತಡೆಯಲು ಕಡ್ಡಾಯವಾಗಿ ಮಾಸ್ಕ್‌ ಧರಿಸಲು ಹಾಗೂ ದೈಹಿಕ ಅಂತರವನ್ನು ಕಾಪಾಡಬೇಕು. ಪಟ್ಟಣ ಹಾಗೂ ನಗರ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸದವರಿಗೆ ₹ 250, ಗ್ರಾಮೀಣ ಪ್ರದೇಶದಲ್ಲಿ ₹ 100 ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದ್ದು. ಸರ್ಕಾರ ಸೂಚಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. 45 ರಿಂದ 60 ವರ್ಷದೊಳಗಿನ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ 60 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಸರ್ಕಾರದ ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಪ್ರತಿದಿನ 2 ಸಾವಿರ ಗಂಟಲು ದ್ರವ ಪರೀಕ್ಷೆಗೆ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ಆರ್‌ಟಿಪಿಸಿಆರ್ ಮೂಲಕ 1770, ಆರ್‌ಎಟಿ ಮೂಲಕ 230 ಗುರಿ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜಿಲ್ಲೆಗೆ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಂದ ಸೋಂಕು ತಗುಲುವ ಸಾಧ್ಯತೆಗಳನ್ನು ಪರಿಗಣಿಸಿ ಈಗಾಗಲೇ ಗಡಿಭಾಗದಲ್ಲಿ ಇಂಡಿ ತಾಲ್ಲೂಕಿನ ಧೂಳಖೇಡ ಚೆಕ್‍ ಪೋಸ್ಟ್‌ನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಈ ಚೆಕ್‍ ಪೋಸ್ಟ್‌ನಲ್ಲಿ ಫೆಬ್ರುವರಿ 23 ರಿಂದ ಇಲ್ಲಿಯವರೆಗೆ ಒಟ್ಟು 1724 ಪ್ರಯಾಣಿಕರ ಗಂಟಲು ದ್ರವಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ಒಟ್ಟು 142 ಗಂಟಲುಗಳ ಪರೀಕ್ಷೆ ಮಾಡಲಾಗಿದ್ದು, ಅದರ ಪೈಕಿ 9 ಜನರ ವರದಿಯು ಪಾಸಿಟಿವ್ ಬಂದಿದೆ. ಈ ಪೈಕಿ ಇಬ್ಬರು ಬಾಗಲಕೋಟೆ ಜಿಲ್ಲೆಯವರಾಗಿದ್ದು ನಾಲ್ಕು ಜನ ಮಹಾರಾಷ್ಟ್ರ ರಾಜ್ಯದವರಾಗಿದ್ದಾರೆ. ಅಂತಹ ಪ್ರಕರಣಗಳನ್ನು ಆಯಾ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಉಳಿದ 3 ಪ್ರಕರಣಗಳ ಪೈಕಿ 2 ಪ್ರಕರಣಗಳು ಇಂಡಿ ಹಾಗೂ 1 ಪ್ರಕರಣ ವಿಜಯಪುರ ನಗರಕ್ಕೆ ಸೇರಿರುತ್ತದೆ ಎಂದು ತಿಳಿಸಿದ್ದಾರೆ.

ಶಿರಾಡೋಣ ಚೆಕ್‌ಪೋಸ್ಟ್‌ನಲ್ಲೂ ಇದೇ ರೀತಿ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೆಲವು ಪ್ರಮುಖ ರಸ್ತೆಗಳಲ್ಲಿ ಕೂಡ ಇದೇ ರೀತಿ ಹೆಚ್ಚುವರಿ ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸೈನಿಕ ಶಾಲೆಯಲ್ಲಿ ಹೆಚ್ಚು:

ವಿಜಯಪುರ ಸೈನಿಕ ಶಾಲೆಯಲ್ಲಿ 140 ಗಂಟಲು ದ್ರವಗಳನ್ನು ಸಂಗ್ರಹಿಸಿದ್ದು, ಈ ಪೈಕಿ 8 ವಿದ್ಯಾರ್ಥಿಗಳಲ್ಲಿ ಸೋಂಕು ದೃಢ ಪಟ್ಟಿರುತ್ತದೆ. 8 ಸೋಂಕು ಪ್ರಕರಣಗಳ ಪೈಕಿ ಗುರುವಾರ ಒಂದೇ ದಿನದಲ್ಲಿ 5 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಈ ಪ್ರಕರಣಗಳ ಪೈಕಿ ಇಬ್ಬರನ್ನು ಹೋಂಕ್ವಾರಂಟೈನ್‍ನಲ್ಲಿರಿಸಿದ್ದು, ಇನ್ನುಳಿದ ವಿದ್ಯಾರ್ಥಿಗಳನ್ನು ಸೈನಿಕ ಶಾಲೆಯ ವ್ಯಾಪ್ತಿಯಲ್ಲಿ ಐಸೋಲೇಶನ್ ಕೊಠಡಿಯಲ್ಲಿ ಇರಿಸಲಾಗಿದೆ ಎಂದರು.

ಲಸಿಕೆ ಪಡೆಯಲು ಸೂಚನೆ:

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ 45 ರಿಂದ 60 ವರ್ಷದೊಳಗಿನ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ 60 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡು ಕೋವಿಡ್‍ನಿಂದ ರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಸಾರ್ವಜನಿಕರು ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ, ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್‍ನೊಂದಿಗೆ ತೆರಳಿ ಸ್ಥಳದಲ್ಲಿಯೇ ನೋಂದಾಯಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ ಸರ್ಕಾರ ನಿಗದಿಪಡಿಸಿದ ದರ ₹ 250 ನೀಡಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದರು.

ಕೋವಿಡ್‌ ಲಸಿಕಾ ಕೇಂದ್ರಗಳ ವಿವರ

ವಿಜಯಪುರ ಜಿಲ್ಲಾ ಆಸ್ಪತ್ರೆ, ಎಲ್ಲ ತಾಲ್ಲೂಕು ಆಸ್ಪತ್ರೆಗಳು, ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು, ಎಲ್ಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಖಾಸಗಿ ಆಸ್ಪತ್ರೆಗಳಾದ ಬಿಎಲ್‍ಡಿಇ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ವಿಜಯಪುರದ ಶ್ರೀ ಭಾಗ್ಯವತಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ಆಯುಷ್‌ ಆಸ್ಪತ್ರೆ, ಮುಳವಾಡ ಆಸ್ಪತ್ರೆ, ಮುನೀರ ಭಾಂಗಿ ಆಸ್ಪತ್ರೆ, ವಾಸುದೇವ್ ಆಸ್ಪತ್ರೆ, ಚಿರಾಗ್ ಆಸ್ಪತ್ರೆ, ಮಳಗಿ ಆಸ್ಪತ್ರೆ, ಚೌಧರಿ ಆಸ್ಪತ್ರೆ, ಲೂಕ್‍ಮಾನ್ ಆಸ್ಪತ್ರೆ, ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆ, ಜನನಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ಶ್ರೀ ಈಶ್ವರ ಗೌಡ ಆರ್. ಪಾಟೀಲ್ ಯತ್ನಾಳ್ ಡಯಾಲಿಸಿಸ್ ಸೆಂಟರ್, ಡಾ. ನೇಮಗೌಡ ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿದೆ.

ಕೋವಿಡ್‌ ಎರಡನೇ ಅಲೆ ಜಿಲ್ಲೆಯಲ್ಲಿ ಕಂಡುಬಂದಿರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು

ಪಿ.ಸುನೀಲಕುಮಾರ್, ಜಿಲ್ಲಾಧಿಕಾರಿ, ವಿಜಯಪುರ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ