Breaking News
Home / ಜಿಲ್ಲೆ / ಬೆಂಗಳೂರು / ಅಕ್ರಮ‌ ಚೀಟಿ ವ್ಯವಹಾರ ನಡೆಸಿ ಒಂದೂವರೆ ಕೋಟಿ ರೂ. ಗುಳುಂ ಮಾಡಿದ ಖತರ್ನಾಕ್ ದಂಪತಿ ಅರೆಸ್ಟ್

ಅಕ್ರಮ‌ ಚೀಟಿ ವ್ಯವಹಾರ ನಡೆಸಿ ಒಂದೂವರೆ ಕೋಟಿ ರೂ. ಗುಳುಂ ಮಾಡಿದ ಖತರ್ನಾಕ್ ದಂಪತಿ ಅರೆಸ್ಟ್

Spread the love

ನೆಲಮಂಗಲ(ಮಾ.07): ಬದುಕು ಕಟ್ಟಿಕೊಳ್ಳಲು ದೂರದೂರುಗಳಿಂದ ಬೆಂಗಳೂರಿಗೆ ಬಂದಿದ್ದವರು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿ ತಿಂಗಳಾದ್ರೆ ಮನೆ ಬಾಡಿಗೆ, ರೇಷನ್, ಮಕ್ಕಳ‌ ಸ್ಕೂಲ್​ ಫೀಸ್ ಎಲ್ಲಾ ಖರ್ಚು ಕಳೆದು ಉಳಿತಾಯಕ್ಕಾಗಿ ಚಾಚೂ ತಪ್ಪದೆ ಚೀಟಿ ಕಟ್ಟುತ್ತಿದ್ದರು. ಚೀಟಿ ಹಣ ಸಿಗುತ್ತೆ, ಇನ್ನೇನು ನಮ್ಮ ಬದುಕು ಹಸನಾಗುತ್ತೆ ಅಂತ ನಿಟ್ಟುಸಿರು ಬಿಡುವಷ್ಟರಲ್ಲಿ ಬದುಕು ಬೀದಿಗೆ ಬಂದು ನಿಂತಿದೆ.

ಚೀಟಿಂಗ್ ದಂಪತಿ ಅರೆಸ್ಟ್: ದಿನಪೂರ್ತಿ ಗಾರ್ಮೆಂಟ್ಸ್‌ನಲ್ಲಿ‌ ಕೆಲಸ ಮಾಡುವ ಮಹಿಳೆಯರು ಸಂಜೆಯಾದ್ರೆ ಚೀಟಿ ವ್ಯವಹಾರ ಮಾಡುತ್ತಿದ್ದವರ ಮನೆ ಬಾಗಿಲಿಗೆ ಬಂದು ನಿಲ್ತಿದ್ದಾರೆ. ನಮ್ಮ ಬದುಕು ಬೀದಿಗೆ ಬಿತ್ತಲ್ಲ ಎಂದು ಕೊರಗುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕು ಲಕ್ಷ್ಮೀಪುರ ಸಮೀಪದ ಶ್ರೀಸಾಯಿ ಬಡಾವಣೆಯ ಮಮತ ಹಾಗೂ ಕುಮಾರ್ ಕಳೆದ 18 ವರ್ಷದಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಚೀಟಿ ನಡೆಸುತ್ತಿದ್ದರು. ಚೀಟಿ ದುಡ್ಡು ಕೈಲಿದ್ದ ಕಾರಣ ಹಣದ ಮದ ನೆತ್ತಿಗೇರಿ ಚೀಟಿದಾರರಿಗೆ ಮೋಸ ಮಾಡಲು ಹೋಗಿ ಸದ್ಯ ದಂಪತಿಗಳನ್ನ ಆರ್‌ಎಂ‌ಸಿ ಯಾರ್ಡ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

300 ಗ್ರಾಂ ಚಿನ್ನವಿದ್ದ ಬ್ಯಾಗ್​ನ್ನು ಪೊಲೀಸರಿಗೆ ನೀಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ..!; ಮಾಲೀಕರಿಗೆ ತಲುಪಿಸುವಲ್ಲಿ ಖಾಕಿಪಡೆ ಯಶಸ್ವಿ

ಪರಾರಿಯಾಗುವ ಆತಂಕ:

ಯಾವುದೇ ಸಮಯದಲ್ಲಿ ಇವರು ಕೋರ್ಟ್‌ನಿಂದ ಜಾಮೀನು ತೆಗೆದುಕೊಂಡು ಮನೆಗೆ ಬರಬಹುದು, ನಮ್ಮ‌ ಹಣ ನಮಗೆ ಕೊಡದೆ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಬಹುದು ಎಂದು ಹಗಲು ರಾತ್ರಿ ಮನೆ ಕಾಯುತ್ತಿದ್ದಾರೆ.‌ ಆರೋಪಿತರು 30ಕ್ಕೂ ಹೆಚ್ಚು ಜನರಿಗೆ ಬರೋಬ್ಬರಿ ಒಂದುವರೆ ಕೋಟಿ ಹಣ ನೀಡಬೇಕೆಂದು ತನಿಖೆ ವೇಳೆ ಬಯಲಿಗೆ ಬಂದಿದೆ.

18 ವರ್ಷದಿಂದ ಚೀಟಿ ವ್ಯವಹಾರ:ಆರೋಪಿ ಮಮತಾ ಕಳೆದ 20 ವರ್ಷದಿಂದ ಗೊರಗುಂಟೆಪಾಳ್ಯದ ಖಾಸಗಿ ಗಾರ್ಮೆಂಟ್ಸ್‌ ಒಂದರಲ್ಲಿ ಕೆಲಸ ಮಾಡ್ತಾ ಇದ್ರು, ಕೆಲಸದೊಟ್ಟಿಗೆ ಅಲ್ಲೆ ಚೀಟಿ ವ್ಯವಹಾರ ಪ್ರಾರಂಭ ಮಾಡಿದ್ರು. 18 ವರ್ಷದಿಂದ ಚೀಟಿ ಚೆನ್ನಾಗಿಯೇ ನಡೆಯುತ್ತಿತ್ತು, ಟೈಲರ್ಸ್, ಹೆಲ್ಪರ್ಸ್ ಕಸಗುಡಿಸುವವರು, ಬಾತ್ ರೂಂ ಕ್ಲೀನ್ ಮಾಡೋರು ಸೇರಿದಂತೆ ಎಲ್ಲರೂ ಏನೋ ಜೀವನಕ್ಕೆ ನಾಲ್ಕು ಕಾಸು ಜೊತೆಯಾಗಿ, ಮನೆ ಮಠ ಕಟ್ಟಿಕೊಂಡು ಬೆಂಗಳೂರಿಗೆ ಬಂದು ಬದುಕು ಹಸನ ಮಾಡಿಕೊಳ್ಳೋ ಕನಸು ಕಟ್ಟಿಕೊಳ್ಳುತ್ತಿದ್ದವರು ಚೀಟ ಹಣ ಕಟ್ಟುತ್ತಿದ್ರು.

ಒಂದು ವರ್ಷದಿಂದ ಏರುಪೇರು:

ಇಷ್ಟು ವರ್ಷ ಚೆನ್ನಾಗಿಯೇ ನಡೆಯುತ್ತಿದ್ದ ಚೀಟಿ ವ್ಯವಹಾರ ಕಳೆದ ಒಂದು ವರ್ಷದಿಂದ ಕೈಕೊಟ್ಟಿತ್ತು. ಹತ್ತಾರು ಚೀಟಿ ನಡೆಸುತ್ತಿದ್ದ ದಂಪತಿ, ಇದ್ದಕ್ಕಿದ್ದ ಹಾಗೆ ಚೀಟಿ ಹಣ ಕೊಡೋದು ನಿಲ್ಲಿಸಿದ್ರು, ಯಾರಾದ್ರು ಹಣ ಕೇಳೋಕೆ‌ ಅಂತ ಅವರ ಮನೆ ಹತ್ರ ಹೋದ್ರೆ, ಮನೆ ಮಾರಾಟ ಮಾಡಿ ಕೊಡ್ತೀನಿ ಅಂತ ಸಬೂಬು ಹೇಳೋರಂತೆ. ಇನ್ನೂ ಕೆಲವರು ಹಣಕ್ಕಾಗಿ ಇವರ ಮನೆಯಲ್ಲಿಯೇ ಕೆಲ ದಿನ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ತುಂಬಾ ಸಮಯಾವಕಾಶ ಕೊಟ್ಟು ನೋಡಿದರೂ ಪ್ರಯೋಜನವಾಗದ ಹಿನ್ನೆಲೆ ಆರ್‌ಎಂ‌ಸಿ ಯಾರ್ಡ್‌ ಪೊಲೀಸರಿಗೆ ದೂರು ಕೊಟ್ಟ ನಂತರ ಪೊಲೀಸರು ಆರೋಪಿ ದಂಪತಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಒಟ್ಟಾರೆ ಬದುಕು ಕಟ್ಟಿಕೊಳ್ಳಲು ಚೀಟಿ ಹಾಕಿ ಹಣ ಉಳಿಸಬೇಕೆಂದು ಚೀಟಿ ಹಾಕಿದ್ದವರ ಬದುಕು ಬೀದಿಗೆ ಬಿದ್ದಿದೆ. ಹಣ ದೋಚಿ ಮೋಸಮಾಡಿದ್ದವರು ಜೈಲಿನಲ್ಲಿದ್ದಾರೆ. ನ್ಯಾಯಾಲಯ ಪ್ರಕರಣದ ತನಿಖೆ ನಡೆಸಿ ನೊಂದವರಿಗೆ ನೆರವಾಗಬೇಕಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ