Breaking News
Home / Uncategorized / ಎಪಿಎಂಸಿಗಳ ವರಮಾನಕ್ಕೆ ಹೊಡೆತ ಶುರು!

ಎಪಿಎಂಸಿಗಳ ವರಮಾನಕ್ಕೆ ಹೊಡೆತ ಶುರು!

Spread the love

ಬೆಳಗಾವಿ: ಸರ್ಕಾರವು, ಕೃಷಿ ಉತ್ಪನ್ನಗಳ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಶುರುವಾಗಿದೆ. ಆ ಸಮಿತಿಗಳ ‘ಸೆಸ್‌’ ಸಂಗ್ರಹ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿರುವ ವಿದ್ಯಮಾನ ಕಂಡುಬರುತ್ತಿದೆ. ಎಪಿಎಂಸಿಗಳ ಮೇಲಿನ ಅವಲಂಬನೆಯಿಂದ ರೈತರು ಕ್ರಮೇಣ ‘ದೂರ’ ಸರಿಯುತ್ತಿದ್ದಾರೆಯೇ ಎನ್ನುವ ಅನುಮಾನವೂ ಕಾಡತೊಡಗಿದೆ.

ಈರುಳ್ಳಿ, ಆಲೂಗಡ್ಡೆ, ಸಿಹಿಗೆಣಸು ಹಾಗೂ ತಾಜಾ ತರಕಾರಿಗಳಿಗೆ ಇಲ್ಲಿನ ಮಾರುಕಟ್ಟೆ ಬಹಳ ಪ್ರಸಿದ್ಧಿಯಾಗಿದೆ. ಜಿಲ್ಲೆ, ನೆರೆಯ ವಿಜಯಪುರ, ಬಾಗಲಕೋಟೆ ಜಿಲ್ಲೆಗಳೊಂದಿಗೆ ಪಕ್ಕದ ಮಹಾರಾಷ್ಟ್ರದಿಂದಲೂ ಇಲ್ಲಿನ ಸಗಟು ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ತರಲಾಗುತ್ತದೆ. ವಾರದಲ್ಲಿ ಎರಡು ದಿನಗಳು ಅಂದರೆ ಬುಧವಾರ ಹಾಗೂ ಶನಿವಾರ ಹರಾಜು ನಡೆಯುತ್ತದೆ. ಹರಾಜು ಮುಗಿದ ನಂತರದ ಎರಡು ದಿನಗಳಲ್ಲೂ ಇಲ್ಲಿನ ಉತ್ಪನ್ನಗಳನ್ನು ಹೊರಗಡೆಗೆ ಸಾಗಿಸುವ ಕೆಲಸಗಳು ನಡೆಯುತ್ತವೆ. ಗೋವಾ, ಉತ್ತರ ಭಾರತದ ಹಲವು ರಾಜ್ಯಗಳಿಗೆ ಇಲ್ಲಿಂದ ಉತ್ಪನ್ನಗಳನ್ನು ಕಳುಹಿಸಲಾಗುತ್ತದೆ. ಅಂದರೆ, ಬಹುತೇಕ ವಾರವಿಡೀ ಚಟುವಟಿಕೆಯಿಂದ ಕೂಡಿರುವ ದೊಡ್ಡ ಮಾರುಕಟ್ಟೆ ಇದು ಎನಿಸಿಕೊಂಡಿದೆ.

ಹೆಚ್ಚಿನ ಪ್ರಮಾಣದಲ್ಲಿ: ಮಾರುಕಟ್ಟೆ ಮತ್ತು ಬಳಕೆದಾರರ ಶುಲ್ಕ ಪ್ರತಿ ಎಂಪಿಎಂಸಿಗಳ ‘ಬಲ’. ಆದರೆ, ಇಲ್ಲಿನ ಎಪಿಎಂಸಿಯಲ್ಲಿ ಕಳೆದ ಆರು ತಿಂಗಳಿಂದ ಇವರೆಡೂ ಶುಲ್ಕಗಳ ಸಂಗ್ರಹ ಚಿಂತಾಜನಕ ಸ್ಥಿತಿಯಲ್ಲಿದೆ. 2019-20ರ ಆಗಸ್ಟ್‌ನಿಂದ ಜನವರಿ ಅಂತ್ಯದವರೆಗೆ ₹ 1.86 ಕೋಟಿ ಮಾರುಕಟ್ಟೆ ಹಾಗೂ ₹ 2.12 ಕೋಟಿ ಬಳಕೆದಾರರ ಶುಲ್ಕ ಸೇರಿ ಒಟ್ಟು ₹ 3.98 ಕೋಟಿ ವರಮಾನ ಸಂಗ್ರಹವಾಗಿತ್ತು. ಆದರೆ, 2020-21ರ ಇದೇ ಅವಧಿಯಲ್ಲಿ ಸಂಗ್ರಹ ಆಗಿರುವುದು ₹ 85.49 ಲಕ್ಷ ಮಾತ್ರ! ಇದರಲ್ಲಿ ಮಾರುಕಟ್ಟೆ ಶುಲ್ಕ ₹ 35.16 ಲಕ್ಷ ಹಾಗೂ ಬಳಕೆದಾರರ ಶುಲ್ಕ ₹ 50.32 ಲಕ್ಷ ಸೇರಿದೆ.

ಈ ಆರು ತಿಂಗಳ ಅವಧಿಯಲ್ಲಿ ಶುಲ್ಕಗಳಿಂದ ಸರಾಸರಿ ₹ 4 ಕೋಟಿ ನಿರೀಕ್ಷಿಸಲಾಗಿತ್ತು. ಆದರೆ, ಒಂದು ಕೋಟಿ ರೂಪಾಯಿಗಿಂತಲೂ ಕಡಿಮೆ ಬಂದಿರುವುದು ಹಲವು ಚರ್ಚೆ ಮತ್ತು ಸಂಶಯಗಳನ್ನು ಹುಟ್ಟುಹಾಕಿದೆ.

ಪ್ರಸ್ತುತ, ಎಪಿಎಂಸಿಗಳ ನಿರ್ವಹಣೆಯು ‘ದುಸ್ತರ’ವಾಗಿದೆ. ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗಿ ಪರಿಣಮಿಸಿದೆ ಎನ್ನುತ್ತಾರೆ ಅಧಿಕಾರಿಗಳು.

ತಾತ್ಸಾರದೊಂದಿಗೆ…: ಎಪಿಎಂಸಿಗಳ ಬಲವರ್ಧನೆಯ ಬಗ್ಗೆ ಮೊದಲೇ ತಾತ್ಸಾರ ತೋರುತ್ತಿದ್ದ ಸರ್ಕಾರಗಳು, ವರಮಾನ ಕುಸಿತದ ನೆಪವೊಡ್ಡಿ ಮುಂದೊಂದು ದಿನ ಮುಚ್ಚುವ ತೀರ್ಮಾನಕ್ಕೆ ಬಂದರೂ ಅಚ್ಚರಿ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಆರು ತಿಂಗಳಲ್ಲಿ, ಈ ಶುಲ್ಕಗಳ ಪ್ರಮಾಣ ಪ್ರತಿ ತಿಂಗಳೂ ಕಡಿಮೆಯಾಗುತ್ತಿದೆ. 2019-20ರ ಡಿಸೆಂಬರ್‌ನಲ್ಲಿ ₹ 1.05 ಕೋಟಿ ಇತ್ತು. ಇದು, ಕಳೆದ ಡಿಸೆಂಬರ್‌ನಲ್ಲಿ ಕೇವಲ ₹ 11.01 ಲಕ್ಷಕ್ಕೆ ಇಳಿದಿದೆ. 2019-20ರ ಜನವರಿಯಲ್ಲಿ ₹ 1.19 ಕೋಟಿ ಇತ್ತು. ಈ ಜನವರಿಯಲ್ಲಿ ₹ 14.82 ಲಕ್ಷಕ್ಕೆ ಕುಸಿದಿದೆ.

‘ಎಪಿಎಂಸಿಗಳಲ್ಲಿ ಮಾರುಕಟ್ಟೆ ಮತ್ತು ಬಳಕೆದಾರರ ಶುಲ್ಕ ಗಣನೀಯವಾಗಿ (ಸರಾಸರಿ ಶೇ 40ರಷ್ಟು) ಕುಸಿದಿರುವುದು ನಿಜ. ಆದರೆ, ಇದಕ್ಕೆ ಕೃಷಿ ಉತ್ಪನ್ನಗಳ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿರುವುದೊಂದೇ ಕಾರಣ ಎನ್ನುವುದಕ್ಕೆ ಸದ್ಯಕ್ಕೆ ಆಗುವುದಿಲ್ಲ. ಅದು ಶೇ 10ರಷ್ಟು ಕಾರಣವಿರಬಹುದು. ಮಾರುಕಟ್ಟೆ ಶುಲ್ಕವನ್ನು ಕಡಿಮೆ ಮಾಡಿರುವುದರ ಕೊಡುಗೆಯೇ ಇದರಲ್ಲಿ ಜಾಸ್ತಿ ಇದೆ. ಅದು ವರಮಾನದ ಮೇಲೆ ಹೆಚ್ಚಿನ ಹೊಡೆತ ಕೊಟ್ಟಿದೆ. ₹ 1.50 ಪೈಸೆ ಇದ್ದ ಶುಲ್ಕವನ್ನು 35 ಪೈಸೆಗೆ ಇಳಿಸಲಾಗಿತ್ತು. ಇತ್ತೀಚೆಗೆ 60 ಪೈಸೆಗೆ ಹೆಚ್ಚಿಸಲಾಗಿದೆ. ಪರಿಣಾಮ ಸೆಸ್ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ.

ಬೆಳಗಾವಿಯ ಎಪಿಎಂಸಿಯಲ್ಲಿ ಈರುಳ್ಳಿ ಮಾರುಕಟ್ಟೆಯ ನೋಟ

ಪರವಾನಗಿ ಇಲ್ಲದಿದ್ದರೂ: ‘ಕೃಷಿ ಉತ್ಪನ್ನಗಳನ್ನು ಹೊರಗಡೆ ಖರೀದಿಸಲು ಹಿಂದೆಯೂ ಅವಕಾಶವಿತ್ತು. ಆದರೆ, ಅದಕ್ಕೆ ಪರವಾನಗಿ ಬೇಕಿತ್ತು. ಆದರೆ, ಈಗ ಪರವಾನಗಿ ಇರಲಿ ಬಿಡಲಿ, ಎಲ್ಲಿಯಾದರೂ ಮಾರಬಹುದು ಮತ್ತು ಖರೀದಿಸಬಹುದು. ಅದಕ್ಕೆ ಅವಕಾಶ ಕೊಡಲಾಗಿದೆ’ ಎಂದು ತಿಳಿಸಿದರು.

‘ಬೆಳಗಾವಿಯಲ್ಲಿ ಆಲೂಗಡ್ಡೆ, ಈರುಳ್ಳಿ ಹಾಗೂ ಸಿಹಿಗೆಣಸಿಗೆ ಟೆಂಡರ್‌ ವ್ಯವಸ್ಥೆ ಇದೆ. ಹೀಗಾಗಿ, ಮಾರುವವರು ಇಲ್ಲಿಗೇ ಬರುತ್ತಾರೆ. ಅವುಗಳು ಹೊರಗಡೆ ವ್ಯಾಪಾರ ಆಗುವ ಪ್ರಮಾಣ ಕಡಿಮೆ ಇದೆ’ ಎಂದು ಹೇಳಿದರು.

‘ಸೆಸ್ ಸಂಗ್ರಹ ಪ್ರಮಾಣ ಕುಸಿದಿರುವುದರಿಂದ ನಿರ್ವಹಣೆಗೆ ಬಹಳ ತೊಂದರೆಯಾಗುತ್ತಿದೆ. ಸ್ವಚ್ಛತೆ, ಬೀದಿದೀಪಗಳ ನಿರ್ವಹಣೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಹಣಕಾಸಿನ ಕೊರತೆ ಎದುರಾಗಿದೆ. ಹೀಗಾಗಿ, ಮಹಾನಗರಪಾಲಿಕೆಯಿಂದ ಸ್ವಚ್ಛತೆ ಮಾಡಿಸುವಂತೆ ಹಾಗೂ ಅಗತ್ಯ ಅನುದಾನ ಒದಗಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹಿಂದಿದ್ದ ನಿರ್ಬಂಧ ತೆರವಾಗಿರುವುದರಿಂದ, ದಲ್ಲಾಳಿಗಳು ಜಮೀನುಗಳಿಗೇ ಹೋಗಿ ಕೃಷಿ ಉತ್ಪನ್ನಗಳನ್ನು ಖರೀದಿಸುವುದು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಇದರಿಂದ ಕೆಲವರಿಗೆ ಉಪಯೋಗ ಆಗಬಹುದು. ಖರೀದಿದಾರರು ಅಧಿಕೃತವಾಗಿ ರಸೀದಿ ಕೊಡದೆ ಇರುವುದರಿಂದ, ಬಹುತೇಕರಿಗೆ ಅನ್ಯಾಯ ಆಗುವ ಸಾಧ್ಯತೆ ಇದೆ. ರೈತರು ವಂಚನೆಗೆ ಒಳಗಾಗುತ್ತಾರೆ. ಮುಂದೊಂದು ದಿನ ಎಪಿಎಂಸಿಗಳನ್ನೆ ಮುಚ್ಚುವ ಹುನ್ನಾರವೂ ಇದರಲ್ಲಿ ಅಡಗಿದೆ. ಹೀಗಾಗಿಯೇ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೇವೆ’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ.


Spread the love

About Laxminews 24x7

Check Also

ಗೃಹ ಸಚಿವರ ತವರು ಕ್ಷೇತ್ರದಲ್ಲಿ 10 ಗುಡಿಸಲುಗಳಿಗೆ ಬೆಂಕಿ

Spread the love ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ಎಲ್ಲರ ಚಿತ್ತ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನದತ್ತ ನೆಟ್ಟಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ