Breaking News
Home / ಜಿಲ್ಲೆ / ಬೆಂಗಳೂರು / ಶಾಸಕರ ಮನವೊಲಿಸುವ ಕಸರತ್ತನ್ನು ಮುಂದುವರೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,

ಶಾಸಕರ ಮನವೊಲಿಸುವ ಕಸರತ್ತನ್ನು ಮುಂದುವರೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,

Spread the love

ಬೆಂಗಳೂರು,-ಶಾಸಕರ ಮನವೊಲಿಸುವ ಕಸರತ್ತನ್ನು ಮುಂದುವರೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, 2ನೇ ದಿನವಾದ ಇಂದು ಶಾಸಕರ ಕುಂದುಕೊರತೆಗಳನ್ನು ಆಲಿಸುವ ಮೂಲಕ ಸಮಾಲೋಚನಾ ಸಭೆ ನಡೆಸಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ಇಂದು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಹಾಸನ, ಮೈಸೂರು , ಚಾಮರಾಜನಗರ ಜಿಲ್ಲೆಗಳು ಸೇರಿದಂತೆ 20ಕ್ಕೂ ಹೆಚ್ಚು ಶಾಸಕರ ಜೊತೆ ಸಿಎಂ ಸಭೆ ನಡೆಸಿದರು.

ಈ ವೇಳೆ ಕೆಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿನ ಅನುದಾನದ ಕೊರತೆ, ಅಭಿವೃದ್ದಿ ಹಿನ್ನಡೆ, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ, ಅಧಿಕಾರಿಗಳ ವರ್ಗಾವಣೆ ವಿಳಂಬ ಸೇರಿದಂತೆ ಹಲವು ವಿಷಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.  ಕೋವಿಡ್‍ನಿಂದಾಗಿ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿವೆ. ನಿರೀಕ್ಷಿತ ಮಟ್ಟದಲ್ಲಿ ಅನುದಾನವೂ ಸಿಗುತ್ತಿಲ್ಲ. ಕೂಡಲೇ ಆರ್ಥಿಕ ನೆರವು ಒದಗಿಸಬೇಕೆಂದು ಶಾಸಕರು ಮನವಿ ಮಾಡಿದರು.

ಶಾಸಕರ ಬೇಡಿಕೆಗಳನ್ನು ಸಹನೆಯಿಂದಲೇ ಆಲಿಸಿದ ಸಿಎಂ, ರಾಜ್ಯದ ಆರ್ಥಿಕ ಪರಿಸ್ಥಿತಿ ನಿಮಗೆ ತಿಳಿದಿದೆ. ಬೊಕ್ಕಸಕ್ಕೆ ವರಮಾನ ತರುತ್ತಿದ್ದ ಇಲಾಖೆಗಳಿಂದಲೇ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. ಸರ್ಕಾರದ ಹಣಕಾಸು ಸ್ಥಿತಿ ನಿಮಗೇ ಗೊತ್ತಿರುವ ವಿಷಯ ಎಂದು ಸಮಾಧಾನ ಮಾಡುವ ಪ್ರಯತ್ನ ಮಾಡಿದರು.  ಸಮಾಲೋಚನಾ ಸಭೆಯಲ್ಲಿ ಇಂದು ಕೂಡ ಕೆಲವು ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ ಎಂದು ಗೊತ್ತಾಗಿದೆ.

ಸಚಿವರ ಜಿಲ್ಲಾ ಪ್ರವಾಸ ನಮಗೆ ಗೊತ್ತಿರುವುದೇ ಇಲ್ಲ, ಯಾವಾಗ ಬರುತ್ತಾರೆ, ಎಲ್ಲಿ ಸಭೆ ನಡೆಸುತ್ತಾರೆ, ಕೆಡಿಪಿ ಸಭೆಗೆ ಆಹ್ವಾನಿಸುವುದಿಲ್ಲ. ಮೊದಲು ಇದನ್ನು ಸರಿಪಡಿಸಬೇಕೆಂದು ಸಿಎಂ ಗಮನಕ್ಕೆ ತಂದರು.  ಸಚಿವರು ಮತ್ತು ಶಾಸಕರ ನಡುವೆ ಸಮನ್ವಯತೆ ಕೊರತೆ ಇದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರವಹಿಸಲಾಗುವುದು. ಈ ಬಾರಿಯ ಬಜೆಟ್‍ನಲ್ಲಿ ನಿಮ್ಮ ಕ್ಷೇತ್ರಗಳಿಗೆ ಆಗಬೇಕಿರುವ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿ. ಬಜೆಟ್‍ನ ಇತಿಮಿತಿಯಲ್ಲಿ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ಬಿಎಸ್‍ವೈ ಭರವಸೆ ನೀಡಿದ್ದಾರೆ.

ಆರ್ಥಿಕ ಪರಿಸ್ಥಿತಿ ಸುಧಾರಣೆಯಾದ ನಂತರ ನಿಮ್ಮ ಕ್ಷೇತ್ರಗಳಿಗೆ ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡಲಾಗುವುದು, ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ಕೊಡುತ್ತೇನೆ. ಎಲ್ಲ ಶಾಸಕರ ಹಿತ ಕಾಯುವ ವಾಗ್ದಾನ ಮಾಡಿದ್ದಾರೆ. ಬಹುತೇಕ ಎಲ್ಲ ಶಾಸಕರು ಬಿಎಸ್‍ವೈ ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದು, ಬಜೆಟ್‍ನಲ್ಲಿ ನಮ್ಮ ನಮ್ಮ ಕ್ಷೇತ್ರಗಳಿಗೆ ಆದ್ಯತೆ ಕೊಡಬೇಕೆಂದು ಮನವಿ ಮಾಡಿದ್ದಾರೆ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ