Breaking News
Home / Uncategorized / 117 ತಾಲ್ಲೂಕುಗಳಲ್ಲಿ ಮೊದಲ ಹಂತದ ಗ್ರಾಮ ಸಮರ, ಎಲ್ಲೆಡೆ ಭರ್ಜರಿ ಮತದಾನ

117 ತಾಲ್ಲೂಕುಗಳಲ್ಲಿ ಮೊದಲ ಹಂತದ ಗ್ರಾಮ ಸಮರ, ಎಲ್ಲೆಡೆ ಭರ್ಜರಿ ಮತದಾನ

Spread the love

ಬೆಂಗಳೂರು,ಡಿ.22- ಕೋವಿಡ್ ಆತಂಕದ ನಡುವೆ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಗಳ ಮೊದಲ ಹಂತದ ಚುನಾವಣೆಯ ಮತದಾನ ಇಂದು ಬಿರುಸಾಗಿತ್ತು.  ಅಲ್ಲಲ್ಲಿ ಮಾತಿನ ಚಕಮಕಿ, ಅಭ್ಯರ್ಥಿಗಳ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪ, ತಳ್ಳಾಟ-ನೂಕಾಟ, ಮತಪತ್ರಗಳ ದೋಷದಿಂದ ಹಲವೆಡೆ ಮತದಾನ ಸ್ಥಗಿತ, ಗುಂಪು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರದಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ 30 ಜಿಲ್ಲೆಗಳ 117 ತಾಲ್ಲೂಕುಗಳ 3,019 ಗ್ರಾಪಂಚಾಯ್ತಿಗಳಿಗೆ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಗ್ರಾಮಪಂಚಾಯ್ತಿಗಳ 43,238 ಸ್ಥಾನಗಳಿಗೆ ಸ್ಪರ್ಧಿಸಿದ್ದ 1,17,383 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ನಿರ್ಧಾರ ಮಾಡಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು, ಮತಗಟ್ಟೆಗಳ ಬಳಿ ಮತದಾರರು ಸರತಿಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಬಹಳಷ್ಟು ಕಡೆ ಕಂಡುಬಂದಿತು.

ಮೈ ಕೊರೆಯುವ ಚಳಿಯಲ್ಲೂ ಬಿರುಸಿನ ಮತದಾನ ನಡೆದಿದ್ದು, ಕೆಲವೆಡೆ ಮತದಾರರ ಉತ್ಸಾಹವಿಲ್ಲದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕಂಡುಬಂದಿತು.  ದೈನಂದಿನ ಕೃಷಿ ಕೆಲಸಕ್ಕೆ ಹಾಗೂ ಇತರೆ ಉದ್ಯೋಗಗಳಿಗೆ ತೆರಳುವವರು ಬೆಳಗ್ಗೆ ಮತಗಟ್ಟೆಗಳಿಗೆ ಬಂದು ಮತದಾನ ಚಲಾಯಿಸುತ್ತಿದ್ದರು. ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮಠಾಧೀಶರು ಸೇರಿದಂತೆ ಗಣ್ಯರು ಕೂಡ ಇಂದು ಮತ ಚಲಾಯಿಸಿದರು.

ಬೆಂಗಳೂರುನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಉತ್ತರ ವಿಭಾಗದ 55, ಈಶಾನ್ಯ ವಿಭಾಗದ 56 ಸೇರಿದಂತೆ 111 ಮತಗಟ್ಟೆಗಳಲ್ಲಿ ನಡೆದ ಮತದಾನ ಶಾಂತಿಯುತವಾಗಿತ್ತು.
ಬೆಳಗಾವಿಯ ಹಿರೇಬಾಗೇವಾಡಿಯ ಮತಗಟ್ಟೆಯಲ್ಲಿ ಅಭ್ಯರ್ಥಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ

ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಬೆಳಗಾವಿ, ಕಂದರಹಳ್ಳಿ ಮತಗಟ್ಟೆಯಲ್ಲಿ ಎಂಇಎಸ್ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರು ಮತಗಟ್ಟೆ ಬಳಿ ಮತದಾರರಿಗೆ ಆಮಿಷವೊಡ್ಡುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದ ಸಂದರ್ಭದಲ್ಲಿ ಪೆÇಲೀಸರು ಅವರನ್ನು ಮತಗಟ್ಟೆಯಿಂದ ಹೊರ ಕಳಿಸುವ ವೇಳೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹಲವರು ಗುಂಪುಗೂಡಿದ ವೇಳೆ ಲಾಠಿ ಪ್ರಯೋಗಿಸಿ ಗುಂಪು ಚದುರಿಸಿದ್ದಾರೆ. ಇನ್ನುಳಿದಂತೆ ಬಹುತೇಕ ಕಡೆ ಶಾಂತಿಯುತ ಮತದಾನ ನಡೆದಿದೆ.

ತುಮಕೂರು ಜಿಲ್ಲೆಯ ಮೈದಾಳ ಗ್ರಾಪಂ ವ್ಯಾಪ್ತಿಯ ಸಿದ್ದಗಂಗಾ ಮಠದ ಪ್ರೆಸಿಡೆನ್ಸಿ ಪಾಠಶಾಲೆಯ 139ನೇ ಮತಗಟ್ಟೆಯಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಮತ ಚಲಾಯಿಸಿದರು. ಕೊರಟಗೆರೆ ಮತ ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ ಚಲಾಯಿಸಿದರೆ ಯಲಹಂಕ ತಾಲ್ಲೂಕು ಸಿಂಗನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹಕ್ಕು ಚಲಾಯಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಮತ ಚಲಾಯಿಸಿದರು.

ವಿಜಯಪುರ ಜಿಲ್ಲೆಯ ಮಕಣಾಪುರ ಗ್ರಾಪಂ ಚುನಾವಣೆಯಲ್ಲಿ 100 ವರ್ಷದ ಬಾಮುಲು ಹುನ್ನು ಲಮಾಣಿ ಅವರು ಮತ ಚಲಾಯಿಸಿ ಗಮನ ಸೆಳೆದರು.  ಬೆಳಗಾವಿಯ ದೇಸೂರು ಗ್ರಾಮದಲ್ಲಿ ಮತಗಟ್ಟೆಗೆ ನಿಯೋಜನೆಯಾಗಿದ್ದ ಅಧಿಕಾರಿ ಬಳಿ ಪಿಸ್ತೂಲು ಪತ್ತೆಯಾಗಿದೆ. ಚುನಾವಣೆ ವೇಳೆ ಪೊಲೀಸ್ ಠಾಣೆಗೆ ಜಮಾ ಮಾಡಬೇಕಿದ್ದ ಪಿಸ್ತೂಲನ್ನು ಕರ್ತವ್ಯ ಸಂದರ್ಭದಲ್ಲಿ ತಮ್ಮೊಂದಿಗೆ ತರಲು ಕಾರಣವೇನು ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಯಾದಗಿರಿ ಜಿಲ್ಲೆ ಶಹಪುರ ತಾಲ್ಲೂಕಿನ ವನದುರ್ಗ ಗ್ರಾಮದ ಮತಗಟ್ಟೆಕೇಂದ್ರ 20-21ರಲ್ಲಿ ಬ್ಯಾಲೆಟ್ ಪೇಪರ್ ಅದಲುಬದಲಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ.  ಸ್ಥಳಕ್ಕೆ ಸಹಾಯಕ ಆಯುಕ್ತ ಶಂಕರೇಗೌಡ ಸೊಮನಾಳ್ ಭೇಟಿ ಮಾಡಿ ಪರಿಶೀಲನೆ ನಡೆಸಿ ಚುನಾವಣೆ ಮುಂದೂಡುವ ಬಗ್ಗೆ ಸಮಾಲೋಚನೆ ನಡೆಸಿದರು.
ಬಳ್ಳಾರಿ ಜಿಲ್ಲೆ ಶಂಕರಬಂಡೆ ಗ್ರಾಪಂ ವ್ಯಾಪ್ತಿಯ ತೋಲಮಾಮಡಿ ಮತಗಟ್ಟೆಯಲ್ಲಿ ಚಿಹ್ನೆ ಮುದ್ರಣ ದೋಷದ ಹಿನ್ನೆಲೆಯಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.

ತೋಲಮಾಮಡಿ ಮತಗಟ್ಟೆಯ ಅಭ್ಯರ್ಥಿ ಪದ್ಮಾವತಿ ಅವರ ಚಿಹ್ನೆ ಮಡಿಕೆ ಬದಲಿಗೆ ಸಿಲಿಂಡರ್ ಚಿಹ್ನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮತದಾನ ಸ್ಥಗಿತಗೊಳಿಸಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದ್ದು, ಈ ಗ್ರಾಪಂ ವ್ಯಾಪ್ತಿಯ ರಿಟರ್ನಿಂಗ್ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.  2ನೇ ಹಂತದ ಚುನಾವಣೆ ದಿನ ಅಥವಾ ಮತ್ತೊಂದು ದಿನ ಇದೇ ಮತಗಟ್ಟೆಯಲ್ಲಿ ಮತದಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಹಲವು ಗ್ರಾಮಪಂಚಾಯ್ತಿಯ ಮತಗಟ್ಟೆಗಳಲ್ಲಿ ಮಾತಿನ ಚಕಮಕಿ ನಡೆದಿರುವುದು ಕಂಡುಬಂದಿದೆ.  ಇನ್ನುಳಿದಂತೆ ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ, ಮಡಿಕೇರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಬೀದರ್, ಗುಲ್ಬರ್ಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಚುರುಕಿನ ಹಾಗೂ ಶಾಂತಿಯುತ ಮತದಾನ ನಡೆದಿದೆ.

ಮೊದಲ ಹಂತದಲ್ಲಿ 1,64,550 ನಾಮಪತ್ರ ಸಲ್ಲಿಕೆಯಾಗಿದ್ದವು. 40,352 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದರು. 432 ಸ್ಥಾನಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿವೆ. 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಬೀದರ್ ಜಿಲ್ಲೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ಬಳಕೆ ಮಾಡಿದ್ದು, ಉಳಿದೆಡೆ ಮತಪತ್ರಗಳ ಮೂಲಕವೇ ಮತದಾನ ನಡೆಯಿತು.

ರಾಜ್ಯದಲ್ಲಿ 5847 ಚುನಾವಣಾ ಅಧಿಕಾರಿ ಹಾಗೂ 6085 ಸಹಾಯಕ ಚುನಾವಣಾ ಅಧಿಕಾರಿಗಳನ್ನು ರಾಜ್ಯ ಚುನಾವಣಾ ಆಯೋಗ ನಿಯೋಜಿಸಿತ್ತು.  ಇಂದು ನಡೆದ ಮತದಾನದ ಮತ ಎಣಿಕೆ ಡಿ.30ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಅಂದೇ ಫಲಿತಾಂಶವೂ ಹೊರಬೀಳಲಿದೆ.

ಬಂದೋಬಸ್ತ್: ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ಹಂತದ ಚುನಾವಣೆಗೆ 40 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. 111 ಕೆಎಸ್‍ಆರ್‍ಪಿ ಫ್ಲಟೂನ್, ಡಿವೈಎಸ್ಪಿ, ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್, ಎಎಸ್‍ಐ ಸೇರಿದಂತೆ 1746 ಅಧಿಕಾರಿಗಳು, 5369 ಪೊಲೀಸ್ ಕಾನ್‍ಸ್ಟೆಬಲ್‍ಗಳು, 10969 ಹೋಂ ಗಾಡ್ರ್ಸ್‍ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ರಾಜ್ಯಾದ್ಯಂತ ಬಹುತೇಕ ಶಾಂತಿಯುತ ಚುನಾವಣೆ ನಡೆದಿದೆ.


Spread the love

About Laxminews 24x7

Check Also

ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಮ್ಯಾಚ್ ರದ್ದು?

Spread the love ಮಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದರಲ್ಲೂ ಬೆಂಗಳೂರು & ಚೆನ್ನೈ ನಡುವೆ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ