Breaking News
Home / Uncategorized / ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

Spread the love

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳ ಹಂಚಿಕೆಯ ಕಥಾನಾಯಕ, ರೂವಾರಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಮಾಡಿದ್ದಾರೆ.

ಹಾಗೆಯೇ ಇದಕ್ಕೆ ಸಂಬಂಧಿಸಿ ತಮಗೂ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಮತ್ತು ಡಿ.ಕೆ. ಶಿವಕುಮಾರ್‌ ಜತೆಗೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ. ಜತೆಗೆ ಪ್ರಜ್ವಲ್‌ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ತಮ್ಮ ನಿವಾಸಕ್ಕೆ ಬಂದಿದ್ದ ವೀಡಿಯೋ ಬಿಡುಗಡೆ ಮಾಡಿ ಪೆನ್‌ಡ್ರೈವ್‌ ಹಂಚಿಕೆಗೂ ತಮಗೂ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

 

ಸೋಮವಾರ ಸಂಜೆ ತುರ್ತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಮೇಗೌಡರ ಫೋನ್‌ನಿಂದ ಕರೆ ಮಾಡಿ ಡಿ.ಕೆ. ಶಿವಕುಮಾರ್‌ ನನ್ನ ಜತೆ ಮಾತ ನಾಡಿದ್ದರು. ತನ್ನ ಬೆಂಬಲಿಗರ ಮೂಲಕ ಲೋಕಸಭಾ ಚುನಾವಣೆ ಬಳಿಕ ನನಗೆ ಕ್ಯಾಬಿನೆಟ್‌ ದರ್ಜೆಯ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ನನ್ನಿಂದಲೇ ವೀಡಿಯೋ ಬಿಡುಗಡೆ ಮಾಡಿಸಲು ಸಂಚು ರೂಪಿಸಿದ್ದರು. ಆದರೆ ಇದಕ್ಕೆ ನಾನು ಒಪ್ಪದ ಹಿನ್ನೆಲೆಯಲ್ಲಿ ನನ್ನನ್ನು ಪ್ರಮುಖ ಆರೋಪಿ ಯನ್ನಾಗಿ ಮಾಡಲು ಷಡ್ಯಂತ್ರ ಹೂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಐಪಿಎಸ್‌ ಅಧಿಕಾರಿ ಒತ್ತಡ
ಪೆನ್‌ಡ್ರೈವ್‌ ಹೇಗೆ ಸಿದ್ಧ ಗೊಂಡಿತು, ಹೊಳೆನರಸೀಪುರಕ್ಕೆ ಹೇಗೆ ಹೋಯಿತು, ಶ್ರೇಯಸ್‌ ಪಟೇಲ್‌ಗೆ ಏನೆಲ್ಲ ನಿರ್ದೇಶನ ಇತ್ತು  ಎಲ್ಲವೂ ನನಗೆ ಗೊತ್ತು. ನಾನು ನನಗೆ ತಿಳಿದಿದ್ದ ಮಾಹಿತಿಯನ್ನು ವಿಶೇಷ ತನಿಖಾ ತಂಡಕ್ಕೆ ನೀಡಿದ್ದೆ. ಆದರೆ ತನಿಖಾ ತಂಡದಲ್ಲಿರುವ ಮಹಿಳಾ ಐಪಿಎಸ್‌ ಅಧಿಕಾರಿಯೊಬ್ಬರು, ಡಿ.ಕೆ. ಶಿವಕುಮಾರ್‌ ಅವರ ವಿರುದ್ಧವಾಗಿ ಎಸ್‌ಐಟಿಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯಿರಿ. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ಶಿವಕುಮಾರ್‌ ವಿರುದ್ಧ ನೀಡಿದ್ದ ಹೇಳಿಕೆಯ ಪ್ಯಾರಾವನ್ನು ಡಿಲೀಟ್‌ ಮಾಡೋಣ ಎಂದು ತಾಕೀತು ಮಾಡಿದ್ದರು ಎಂದು ಮತ್ತೊಂದು ಗಂಭೀರ ಆರೋಪವನ್ನು ದೇವರಾಜೇ ಗೌಡ ಮಾಡಿದ್ದಾರೆ.

ಎಸ್‌ಐಟಿ ತನಿಖೆಗೆ ಅತೃಪ್ತಿ ಸಿಬಿಐಗೆ ಆಗ್ರಹ
ರಾಜ್ಯ ಸರಕಾರ, ಸಿಎಂ, ಡಿಸಿಎಂ ನೇತೃತ್ವದಲ್ಲಿ ಪೊಲೀಸ್‌ ಅಧಿಕಾರಿಗಳ ಗೌಪ್ಯ ಸಭೆ ನಡೆಸಲಾ ಗುತ್ತಿದೆ. ಗೌಪ್ಯ ಸಭೆ ನಡೆಸಿ ಯಾರು ಯಾರನ್ನು ಆರೋಪಿಯನ್ನಾಗಿ ಮಾಡಬೇಕು ಎನ್ನುವ ಸೂಚನೆ ಕೊಟ್ಟಿದ್ದಾರೆ. ನಾನು ಆರಂಭದಲ್ಲಿ ಎಸ್‌ಐಟಿ ತನಿಖೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದೆ. ಆದರೆ 3 ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳಿಂದ ನನ್ನ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ. ರಿಮೋಟ್‌ ಕಂಟ್ರೋಲ್ಡ್‌ ತನಿಖೆ ನಡೆಯತ್ತಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಎಸ್‌ಐಟಿ ಅಧಿಕಾರಿಗಳಿಗೆ ಎಲ್ಲವನ್ನೂ ಕೊಟ್ಟಿದ್ದೇನೆ. ತನಿಖಾಧಿಕಾರಿ ಎಸ್‌ಪಿ ಮುಂದೆ ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಿದ್ದೇನೆ. ಕಾರ್ತಿಕ್‌ ನನ್ನ ಮನೆಗೆ ಯಾವಾಗ ಬಂದಿದ್ದು ಎಂಬ ವೀಡಿಯೋ ನನ್ನ ಬಳಿ ಇದೆ. ಪೆನ್‌ ಡ್ರೈವ್‌ ಹೊಳೆನರಸೀಪುರದಿಂದ ಪರಾಜಿತ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಅವರನ್ನು ತಲುಪಿತ್ತು. ಆತನ ಗುರು ಪುಟ್ಟಿ ಅಲಿಯಾಸ್‌ ಪುಟ್ಟರಾಜು ಅವರು ಅದನ್ನು ಬೆಂಗಳೂರಿಗೆ ತಂದರು. ಅವರು ಯಾರನ್ನು ಭೇಟಿಯಾದರು ಎಂಬ ಬಗ್ಗೆ ದಾಖಲೆ ನನ್ನ ಬಳಿ ಇದೆ ಎಂದು ದೇವರಾಜೇಗೌಡ ಹೇಳಿದರು.

ಪೆನ್‌ ಡ್ರೈವ್‌ ಹಂಚಿಕೆ ಮಾಡಿರುವ ಸಂಬಂಧ ನಾನು ಕೆಲವು ಹೆಸರುಗಳನ್ನು ದೂರವಾಣಿ ನಂಬರ್‌ ಸಹಿತ ನೀಡಿದ್ದೆ. ಆದರೆ ಅವರ ಬಗ್ಗೆ ತನಿಖೆಯೇ ಆಗಿಲ್ಲ. ಅವರೆಲ್ಲ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ, ಇದು ತನಿಖೆ ದಾರಿ ತಪ್ಪಿರುವುದನ್ನು ಸಾಬೀತು ಪಡಿಸುತ್ತದೆ. ಹಾಗೆಯೇ ಕಾರ್ತಿಕ್‌ ಎಲ್ಲಿದ್ದಾನೆ ಎಂಬ ಮಾಹಿತಿ ತಮಗಿರುವುದಾಗಿ ಶಿವರಾಮೇ ಗೌಡರು ನನಗೆ ತಿಳಿಸಿದ್ದಾರೆ ಎಂದರು.


Spread the love

About Laxminews 24x7

Check Also

ಶೂ ವ್ಯಾಪಾರಿ ನಿವಾಸದಲ್ಲಿ ಬರೋಬ್ಬರಿ 40 ಕೋಟಿ ರೂ. ನಗದು ವಶಕ್ಕೆ IT RAID

Spread the love ಉತ್ತರ ಪ್ರದೇಶದ ಆಗ್ರಾದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ಫಲವಾಗಿ 40 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ