Breaking News
Home / Uncategorized / ನಾಲ್ವರ ಹತ್ಯೆ: ಮಗನಿಂದ ಸುಪಾರಿ

ನಾಲ್ವರ ಹತ್ಯೆ: ಮಗನಿಂದ ಸುಪಾರಿ

Spread the love

ಗದಗ: ಇಲ್ಲಿನ ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಮನೆಯಲ್ಲೇ ಅವರ ಪುತ್ರ ಸೇರಿ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಸ್ತಿ ಮಾರಲು ವಿರೋಧ ವ್ಯಕ್ತಪಡಿಸಿದ್ದಕ್ಕೆ ಸಿಟ್ಟಿಗೆದ್ದು ಸ್ವಂತ ಮಗನೇ ತಂದೆ, ಮಲತಾಯಿ ಮತ್ತು ಮಲತಮ್ಮನ ಹತ್ಯೆಗೆ ಸುಪಾರಿ ನೀಡಿದ್ದ ಎಂಬ ಅಂಶ ಬಹಿರಂಗಗೊಂಡಿದೆ.

ಏಪ್ರಿಲ್ 19ರಂದು ಮಧ್ಯರಾತ್ರಿ ನಗರದ ದಾಸರಓಣಿಯಲ್ಲಿ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್‌ (28), ಪರುಶುರಾಮ (58), ಲಕ್ಷ್ಮಿಬಾಯಿ (50) ಮತ್ತು ಆಕಾಂಕ್ಷಾ (17) ಎಂಬುವರ ಕೊಲೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಯಕ ಬಾಕಳೆ (31), ಫೈರೋಜ್‌ (29), ಜಿಶಾನ್‌ (24), ಮಹಾರಾಷ್ಟ್ರದ ಸುಪಾರಿ ಕೊಲೆಗಡುಕರಾದ ಸಾಹಿಲ್‌ ಖಾಜಿ (19), ಸೊಹೇಲ್‌ (19), ಸುಲ್ತಾನ್‌ ಶೇಖ್‌ (23), ಮಹೇಶ್‌ ಸಾಳೋಂಕೆ (21) ಮತ್ತು ವಾಹಿದ್‌ ಬೇಪಾರಿ (21) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

‘ಪ್ರಕಾಶ್‌ ಬಾಕಳೆ ಮೊದಲನೇ ಪತ್ನಿ ದಿವಂಗತ ರುಕ್ಮುಣಿ ಅವರ ಪುತ್ರ ವಿನಾಯಕ ಬಾಕಳೆ ತನ್ನ ತಂದೆ, ಮಲತಾಯಿ ಸುನಂದಾ ಬಾಕಳೆ ಹಾಗೂ ಅವರ ಮಗ ಕಾರ್ತಿಕ್‌ ಬಾಕಳೆ ಹತ್ಯೆಗೆ ಸಂಚು ರೂಪಿಸಿ ‘ಫೈರೋಜ್‌ ಆಯಂಡ್‌ ಗ್ಯಾಂಗ್‌’ಗೆ ₹65 ಲಕ್ಷಕ್ಕೆ ಸುಪಾರಿ ನೀಡಿದ್ದ. ಆದರೆ, ಕೊಲೆಯಾದ ದಿನ ಪ್ರಕಾಶ್‌ ಬಾಕಳೆ ಮನೆಯಲ್ಲಿ ಉಳಿದಿದ್ದ ಬಾಕಳೆ ಸಂಬಂಧಿಕರಾದ ಕೊಪ್ಪಳದ ಪರುಶುರಾಮ, ಲಕ್ಷ್ಮಿಬಾಯಿ ಮತ್ತು ಆಕಾಂಕ್ಷಾ ಕೂಡ ಹತರಾದರು’ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಶ್‌ ಕುಮಾರ್‌ ವಿಕಾಶ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಕಾಶ್‌ ಬಾಕಳೆ ಅವರು ವಿನಾಯಕ ಬಾಕಳೆ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದರು. 5 ತಿಂಗಳ ಹಿಂದೆ ವಿನಾಯಕ ಬಾಕಳೆ ತಂದೆಯ ಗಮನಕ್ಕೆ ತಾರದೇ ಮೂರು ಆಸ್ತಿಗಳನ್ನು ಮಾರಿದ್ದ. ಇದನ್ನು ಆಕ್ಷೇಪಿಸಿ ಪ್ರಕಾಶ್ ಬಾಕಳೆ, ತಮ್ಮ ಗಮನಕ್ಕೆ ತಾರದೇ ಯಾವುದೇ ಆಸ್ತಿಯನ್ನು ಮಾರುವುದು ಬೇಡ ಎಂದಿದ್ದರು. ಇದರಿಂದ ತಂದೆ ಮತ್ತು ಮಗನ ನಡುವೆ ವೈಮನಸ್ಸು ಬೆಳೆದು, ಇಷ್ಟೆಲ್ಲ ಕೃತ್ಯಕ್ಕೆ ಕಾರಣವಾಯಿತು’ ಎಂದು ಅವರು ವಿವರಿಸಿದರು.

₹65 ಲಕ್ಷಕ್ಕೆ ಸುಪಾರಿ: ‘ಮೂವರ ಹತ್ಯೆಗೆ ವಿನಾಯಕ ಬಾಕಳೆ ಗದುಗಿನ ರಾಜೀವ್‌ ಗಾಂಧಿ ನಗರ ನಿವಾಸಿ, ಬಳಕೆಯಾದ ಕಾರುಗಳ ಮಾರಾಟದ ಏಜೆಂಟ್ ಫೈರೋಜ್‌ ಸಂಪರ್ಕಿಸಿದ್ದ. ಅದರಂತೆ ಫೈರೋಜ್‌ಗೆ ₹ 65 ಲಕ್ಷ ಕೊಡುವುದಾಗಿ ಹೇಳಿ, ಮೀರಜ್‌ನ ಐವರು ಸುಪಾರಿ ಹಂತಕರನ್ನು ಕೃತ್ಯಕ್ಕೆ ಒಪ್ಪಿಸಿದ್ದ. ಅವರಿಗೆ ಮುಂಗಡವಾಗಿ ₹10 ಲಕ್ಷ ಕೊಡಬೇಕಿತ್ತು. ವಿನಾಯಕ ಬಾಕಳೆ ಫೈರೋಜ್‌ಗೆ ₹2 ಲಕ್ಷ ಮುಂಗಡ ನೀಡಿದ್ದ. ಹತ್ಯೆಯ ಬಳಿಕ ಇದು ದರೋಡೆ ಎಂದು ಬಿಂಬಿಸಲು ಮನೆಯಲ್ಲಿನ ಎಲ್ಲಾ ಚಿನ್ನಾಭರಣ, ಹಣ ಒಯ್ಯಲು ಸೂಚಿಸಲಾಗಿತ್ತು. ಆದರೆ, ಪೊಲೀಸರು ಬರುವರು ಎಂಬ ಭೀತಿಯಿಂದ ಹಂತಕರು ಬೇಗನೇ ಅಲ್ಲಿಂದ ಪರಾರಿಯಾದರು’ ಎಂದರು.

-ವಿಕಾಶ್‌ ಕುಮಾರ್‌ ವಿಕಾಶ್‌ ಐಜಿಪಿ ಬೆಳಗಾವಿ ಉತ್ತರ ವಲಯಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ನೇತೃತ್ವದ ತಂಡ ಕೊಲೆ ನಡೆದ 72 ಗಂಟೆಗಳಲ್ಲಿ ಪ್ರಕರಣ ಭೇದಿಸಿದ್ದು ಚುರುಕಿನ ಕಾರ್ಯಾಚರಣೆ ಮೆಚ್ಚಿ ಡಿಜಿ ಮತ್ತು ಐಜಿಪಿ ₹5 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

ರೈಲು ತಪ್ಪಿದ್ದೇ ಜೀವಕ್ಕೆ ಮುಳುವಾಯಿತು

ಏಪ್ರಿಲ್ 18ರ ರಾತ್ರಿ ಪ್ರಕಾಶ್‌ ಬಾಕಳೆ ಅವರ ಮನೆಯಲ್ಲೇ ಜನ್ಮದಿನ ಆಚರಿಸಿಕೊಂಡಿದ್ದ ಕೊಪ್ಪಳದ ಲಕ್ಷ್ಮಿಬಾಯಿ ಅವರು ಪತಿ ಪರುಶುರಾಮ ಮತ್ತು ಪುತ್ರಿ ಆಕಾಂಕ್ಷಾಳಿಂದ ಉಡುಗೊರೆ ಸ್ವೀಕರಿಸಿದ್ದರು. ಕೊಪ್ಪಳಕ್ಕೆ ಹೋಗಲು ರೈಲು ತಪ್ಪಿದ್ದರಿಂದ ನಿಲ್ದಾಣದಿಂದ ವಾಪಸಾಗಿ ಮೂವರು ಪ್ರಕಾಶ್ ಬಾಕಳೆ ಮನೆಯಲ್ಲಿ ಉಳಿದಿದ್ದರು. ಆದರೆ ಸುಪಾರಿ ಹಂತಕರಿಂದ ಮೂವರು ಕೊಲೆಗೀಡಾದರು. ಅಂದೇ ಕೊಪ್ಪಳಕ್ಕೆ ಹೋಗಿದ್ದರೆ ಮೂವರ ಜೀವ ಉಳಿಯುತಿತ್ತು. ಕೃತ್ಯ ನಡೆದ ದಿನ ಆರೋಪಿ ವಿನಾಯಕ ಮನೆಗೆ ಬಂದು ಕಣ್ಣೀರು ಹಾಕಿದ್ದ. ತಂದೆ ಹಾಗೂ ಮಲತಾಯಿಗೆ ಸಮಾಧಾನ ಪಡಿಸಿದ್ದ.


Spread the love

About Laxminews 24x7

Check Also

ಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

Spread the loveಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬೆಂಗಳೂರು, ಮೇ. 03 : ಬೆಂಗಳೂರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ