Breaking News
Home / ರಾಜಕೀಯ / ಮಗ, ಸೊಸೆಯನ್ನ ನೋಡಲು ಬೆಂಗಳೂರಿಗೆ ಬಂದಿದ್ದ ಮುಗ್ಧ ಅಜ್ಜಿಗೆ ನಿರಾಸೆ; ಇಳಿ ವಯಸ್ಸಲ್ಲೂ ಹಠ, ಹೇಳಿಕೊಳ್ಳದ ನೋವು

ಮಗ, ಸೊಸೆಯನ್ನ ನೋಡಲು ಬೆಂಗಳೂರಿಗೆ ಬಂದಿದ್ದ ಮುಗ್ಧ ಅಜ್ಜಿಗೆ ನಿರಾಸೆ; ಇಳಿ ವಯಸ್ಸಲ್ಲೂ ಹಠ, ಹೇಳಿಕೊಳ್ಳದ ನೋವು

Spread the love

ಮಗ, ಸೊಸೆಯನ್ನ ನೋಡಲು ಬೆಂಗಳೂರಿಗೆ ಬಂದಿದ್ದ ಮುಗ್ಧ ಅಜ್ಜಿಗೆ ನಿರಾಸೆ; ಇಳಿ ವಯಸ್ಸಲ್ಲೂ ಹಠ, ಹೇಳಿಕೊಳ್ಳದ ನೋವು

ಮೆಜೆಸ್ಟಿಕ್ ಲಾಸ್ಟ್ ಸ್ಟಾಪಲ್ಲಿ ಬಸ್ ನಿಲ್ತು. ಕೆಳಗೆ ಇಳಿಯೋವಾಗ ನನ್ನ ಹಿಂದೆ ಒಬ್ರು ಅಜ್ಜಿ ಇದ್ರು. ಕಂಡಕ್ಟರ್ ನನ್ನ ಹತ್ರ “ನೀವು ಯಾವ್ ಕಡೆ ಹೋಗೋದು? ಇವರಿಗೆ ರೈಲ್ವೇ ಸ್ಟೇಷನ್ ತೋರಿಸ್ತೀರಾ” ಅಂತ ಕೇಳಿದ್ರು. ನಾನು ವಿರುದ್ಧ ದಿಕ್ಕಿನಲ್ಲಿ ಹೋಗೋನು, ಬಟ್ ಹಿಂಗ್ ಹಿಂಗ್ ಇದೆ ಸ್ಟೇಷನ್ ರೋಡ್ ಅಂತ ಅಜ್ಜಿಗೆ ಹೇಳೋದ್ರಲ್ಲಿ ಏನಿದೆ ಅಂದ್ಕೊಂಡು ಹುಂ ಅಂದೆ.

ಕೆಳಗೆ ಇಳಿದ ನಾನು ಅಜ್ಜಿ ಬಸ್ ಇಳಿಯೋಕೆ ಕಷ್ಟ ಪಡ್ತಾ ಇದ್ದಿದ್ದನ್ನ ನೋಡಿದೆ. ಹೀಗಾಗಿ ಆಕೆಯ ಕೈಲಿದ್ದ ಚೀಲ ಕೊಡಿ ಅಂತ ತಗೊಂಡೆ. ಈಗಲೋ ಆಗಲೋ ಅನ್ನೋ ಥರ ಚೀಲ ಹೆಣ ಭಾರ. ಎರಡು ಲೀಟರಿನ ಸವೆದು ಸಣಕಲಾಗಿದ್ದ ಪೆಪ್ಸಿ ಬಾಟಲಿಯಲ್ಲಿ ನೀರಿತ್ತು. ಒಂದಿಷ್ಟು ಬಟ್ಟೆಗಳು ಇದ್ದವು. ಆದ್ರೂ ಇಷ್ಟೊಂದು ಭಾರ ಯಾಕೆ ಅಂತ ಅಜ್ಜಿನ ಕೇಳಿದೆ. ಚೀಲದ ಅಡಿಯಲ್ಲಿ ಪೂರಾ ತಾನೇ ಬೆಳೆದ ಶುಂಠಿ ಇದೆ ಎಂದಳು.

ಮಗ ಸೊಸೆ ಬೆಂಗಳೂರಲ್ಲಿ ಇರೋದಂತೆ.. ಅವರಿಗಾಗಿ ಶುಂಠಿ ಸೇರಿ ಅದು ಇದು ಸಣ್ಣ ಪುಟ್ಟ ವಸ್ತು ಹಿಡ್ಕೊಂಡು ಅಲ್ಲಿಂದ ಇಲ್ಲಿಗೆ ಬಂದಿದ್ದಳು ಗಟ್ಟಿ ಅಜ್ಜಿ.. ಮಗನ ಮನೆಯಲ್ಲಿ ಈಕೆ ಬಂದ ವಿಚಾರಕ್ಕೆ ಜಗಳ, ಮನಸ್ತಾಪ ಕಂಡು ಉಟ್ಟ ಬಟ್ಟೆಯಲ್ಲಿ ಮರಳಿ ಮನೆಗೆ ಹೋಗೋಕೆ ಸಿದ್ಧವಾಗಿದ್ದಳು. ಮೆಜೆಸ್ಟಿಕ್ ಇಂದ ರೈಲ್ವೇ ಸ್ಟೇಷನ್ ತನಕ ತಲೆ ಬೇಯಿಸೋ ಬಿಸಿಲಿನಲ್ಲಿ, ಆ ಭಾರದ ಚೀಲ ಹೊತ್ಕೊಂಡು ಈ ಅಜ್ಜಿ ಹೋಗೋದು ಊಹಿಸಿಯೇ ಪಾಪ ಅನಿಸಿಬಿಡ್ತು. 10 ನಿಮಿಷದಲ್ಲಿ ಸೀದಾ ಸ್ಟೇಷನ್ನಿಗೆ ಬಿಟ್ ಬಂದ್ರಾಯ್ತು ಅಂತ ಚೀಲ ಹಿಡ್ಕೊಂಡು ಅಜ್ಜಿ ಜೊತೆ ಸುದ್ದಿ ಹೇಳ್ತ ಹೊರಟೆ.

ಮಗ, ಸೊಸೆಯನ್ನ ನೋಡಲು ಬೆಂಗಳೂರಿಗೆ ಬಂದಿದ್ದ ಮುಗ್ಧ ಅಜ್ಜಿಗೆ ನಿರಾಸೆ; ಇಳಿ ವಯಸ್ಸಲ್ಲೂ ಹಠ, ಹೇಳಿಕೊಳ್ಳದ ನೋವು

ಪ್ಲಾಸ್ಟಿಕ್ ಕವರ್ ಒಳಗೆ ಇದ್ದ ದುಡ್ಡನ್ನ ಎಣಿಸೋಕೆ ಶುರು ಮಾಡಿದಳು

ಗೋಕಾಕ್ ಹತ್ರ ಒಂದು ಊರಂತೆ.. ಫ್ರೀ ಆಗಿ ಆರಾಮಾಗಿ ಬಸ್ಸಲ್ಲಿ ಹೋಗೋದಲ್ವ..? ಬೆಂಗಳೂರು ರೈಲ್ವೇ ಸ್ಟೇಷನ್ ಅಂದ್ರೆ ಸಮುದ್ರ ಇದ್ದಂಗೆ ಅಂತ ಹೇಳ್ತ ಇದ್ದಾಗ ಆಧಾರ್ ಕಾರ್ಡ್ ಕಳ್ಕೊಂಡಿದೀನಪ್ಪ ಅಂದ್ಲು ಪುಣ್ಯಾತ್ಮೆ.. ದುಡ್ಡು ಎಷ್ಟು ಇದೆ ನಿನ್ ಹತ್ರ? ಹೋಗೋಕೆ ಸಾಕಾ ಅಂತ ಕೇಳಿದಾಗ ಮುನ್ನೂರು ರೂಪಾಯಿ ಇದೆ ಅಂತ ಅಲ್ಲಿಯೇ ಒಂದು ಪ್ಲಾಸ್ಟಿಕ್ ಕವರ್ ಒಳಗೆ ಇದ್ದ ದುಡ್ಡನ್ನ ಎಣಿಸೋಕೆ ಶುರು ಮಾಡಿದಳು. ನಾಟಕೀಯ ಅನಿಸದ ಮುಗ್ಧತೆ ನಿಜ ಒಂದು ಮಗು ಥರ ಇತ್ತು.

ಒಂದು ಕೆಲಸ ಮಾಡು, ನಿಮ್ ಊರಿಗೆ ಬಸ್ಸಲ್ಲೇ ಹೋಗು, ನಾನ್ ಟಿಕೆಟ್ ತೆಗಿಸ್ತೀನಿ ಅಂದೆ. ಟ್ರೇನಲ್ಲೇ ಹೋಗೋದು ಅನ್ನೋ ಪಟ್ಟು. ವಯಸ್ಸಾಗಿದೆ. ವೇಗವಾಗಿ ನಡೆಯೋಕೆ ಆಗಲ್ಲ.. ಆದ್ರೆ ದುಡ್ಡಿನ ಸಹಾಯ ಎಲ್ಲ ಬೇಡ ಅಷ್ಟೇ ಅನ್ನೋ ಥರ ಇತ್ತು ಆಕೆಯ ಮಾತು. ಟಿಕೆಟ್ ಕೌಂಟರ್ ಬಂತು. ಸರಿಯಾಗಿ ಎಲ್ಲಿಗೆ ಹೋಗ್ಬೇಕು ಅಂತ ಕೇಳಿದಾಗ ಘಟಪ್ರಭಾ ಅಂದಳು. ಆದ್ರೆ ಯಾವುದೇ ಟ್ರೇನ್ ಆಕೆಯ ಊರಿಗೆ ಇರ್ಲಿಲ್ಲ. ಟಿಕೆಟ್ ಕೌಂಟರಲ್ಲಿದ್ದವ 12.45 ಕ್ಕೆ ಒಂದು ಟ್ರೇನ್ ಇದೆ. ಹುಬ್ಬಳ್ಳಿಗೆ ಹೋಗೋದು. ಅಲ್ಲಿ ತನಕ ಹೋಗಬಹುದು ನೋಡಿ ಎಂದ..

ದರ 175 ರೂಪಾಯಿ ಎಂದಾಗ ನಾನು ಪರ್ಸ್ ತೆಗೆದು 200 ರೂಪಾಯಿ ಕೊಟ್ಟೆ. ಅಜ್ಜಿಯ ಅಸಲಿ ಅಬ್ಬರ ಅಲ್ಲಿ ಶುರು. ಯಾವುದೇ ಕಾರಣಕ್ಕೂ ನೀನು ದುಡ್ಡು ಕೊಡ್ಬೇಡ ಅಂತೇ.. ಧ್ವನಿ ಜೋರು ಮಾಡಿ ಬೈಯೋಕೆ ಶುರು.. ನಿಂಗೆ ನಿನ್ ಹತ್ರ ಇರೋ ಹಣ ಹುಬ್ಬಳ್ಳಿಯಿಂದ ನಿನ್ ಮನೆಗೆ ಹೋಗೋಕೆ ಬೇಕಾಗುತ್ತೆ. ಏನು ತೊಂದ್ರೆ ಇಲ್ಲ..ಬಾ ಪ್ಲಾಟ್ ಫಾರ್ಮಿಗೆ ಬಿಟ್ಟು ರೈಲು ತೋರಿಸಿ ಬರ್ತೀನಿ ಅಂತ ಮಗುಗೆ ಸಮಾಧಾನ ಮಾಡಿದ ಹಾಗೇ ಮಾಡಿ ಕರ್ಕೊಂಡು ಹೋದೆ.

ಏನೂ ಮಾತಾಡದೆ ನನ್ನ ಹಿಂದೆ ಬರ್ತಾ ಇದ್ದ ಅಜ್ಜಿಯನ್ನ ತಿರುಗಿ ನೋಡಿದೆ. ಎರಡೂ ಕಣ್ಣಲ್ಲಿ ಕಸ ಏಕ ಕಾಲಕ್ಕೆ ಬಿದ್ದಿರಬೇಕು.. ಉಟ್ಟಿದ್ದ ಹಳೆ ಸೀರೆಯ ಸೆರಗು ಸುಕ್ಕುಗಟ್ಟಿದ ಕಣ್ಣುಗಳ ಒರೆಸೋ ಕೆಲಸ ಮಾಡ್ತಾ ಇತ್ತು. ಚಾನಾದ್ರೂ ಕುಡಿಯಪ್ಪ.. ನನಗೆ ಭಾಳ ಖುಷಿ ಆಗುತ್ತೆ ಅಂತ ಅಜ್ಜಿ.. ಅಯ್ಯೋ ನಿನ್ನ, ಈ ಬಿಸಿಲಲ್ಲಿ ಚಾ ಕುಡೀತಾರೆನ್ ಅಂತ ನಾನು..

ಹೋಗುವಾಗ ಕೆನ್ನೆ ಹಿಂಡಿದಳು, ತಲೆ ಸವರಿದಳು

9 ನೇ ಪ್ಲಾಟ್ ಫಾರ್ಮಲ್ಲಿ ರೈಲು ಸಿದ್ದವಾಗಿ ನಿಂತಿತ್ತು. ಬಹುತೇಕ ಎಲ್ಲವೂ ಜನರಲ್ ಬೋಗಿ ಆಗಿದ್ರಿಂದ ಸೀಟ್ ಸಿಗೋದು ಕಷ್ಟ ಆಗಲಿಲ್ಲ. ಹುಷಾರಾಗಿ ಹೋಗು ಅಜ್ಜಿ ಅಂತ ತಿರುಗಿದ್ರೆ ನನ್ನ ಕೈಯನ್ನ ಬಿಗಿಯಾಗಿ ಹಿಡಿದಿದ್ದಳು . ಏನು ಅಂತ ಕೇಳಿದೆ.. ದುಡ್ಡು ತಗೋಬೇಕು ನೀನು ಎಂದಳು.. ನೀನು ಎಷ್ಟೇ ಒತ್ತಾಯ ಮಾಡಿದ್ರೂ ನಾನ್ ತಗೋಳ್ಳೋಲ್ಲ ಅನ್ನೋ ಥರ ಬಾಯ್ತುಂಬಾ ನಕ್ಕೆ.. ತಲೆಯ ಸವರಿದಳು.. ಕೆನ್ನೆ ಹಿಂಡಿದಳು.. ಪ್ಯಾಂಟ್ ಜೇಬಲ್ಲಿ 40 ರೂಪಾಯಿ ಇಟ್ಟಳು..

ಇನ್ನೂ ಬೇಡ ಅಂದ್ರೆ ಬೇಜಾರ್ ಆಗುತ್ತೆ ಅಂತ ಸರಿ.. ನಾನು ಚಾ ಕುಡೀತೀನಿ.. ನೀನ್ ಕೊಡ್ಸಿರ ಚಾ ಅಂತಲೇ ಕುಡಿಯೋದು.. ಆದ್ರೆ 40 ರೂಪಾಯಿ ಚಾ ಅಲ್ಲ.. 20 ಸಾಕು ಅಂತ 20 ವಾಪಾಸ್ ಕೊಟ್ಟೆ. ಊರಿಗೆ ಹೋದ್ಮೇಲೆ ನಿಂಗೆ ನಾನು ಫೋನ್ ಮಾಡ್ತೀನಿ ಅಂದಳು.. ಮೊಬೈಲ್ ಬೇರೆ ಇಟ್ಟಿದ್ಯಾ ಅಂತ ಕೇಳಿದೆ. ಮೊಬೈಲ್ ಇಲ್ಲ ನಿನ್ ನಂಬರ್ ಬರೆದುಕೊಡು ಅಂದಳು.. ಸುತ್ತ ಇದ್ದ ಜನರೆಲ್ಲಾ ಅಜ್ಜಿಯನ್ನ ಆಕೆಯ ನಿಷ್ಕಲ್ಮಶ ಮಾತನ್ನ ಕೇಳ್ತಾ ಇದ್ದ ಪರಿಯೇ ಚೆಂದ ಇತ್ತು.

ಬಸ್ ಟಿಕೆಟ್ ಹಿಂದೆ ನನ್ನ ನಂಬರ್ ಬರೆದು ಕೊಟ್ಟೆ. ಹುಷಾರಾಗಿ ಹೋಗು ಅಂತ ಹೇಳಿ ಆಫೀಸ್ ಕಡೆ ಹೊರಟೆ. ವಯಸ್ಸು ದೇಹಕ್ಕೆ, ಸ್ವಾಭಿಮಾನಕ್ಕಲ್ಲ ಅಂತಲೇ ಬದುಕ್ತಿರೋ ಅಜ್ಜಿ ನಿಜಕ್ಕೂ ಅಸಾಮಾನ್ಯ… ಅಜ್ಜಿ ಕೊಟ್ಟ 20 ರ ನೋಟನ್ನ ಪರ್ಸಿನ ಒಳ ಕೋಣೆಯಲ್ಲಿ ಇಡಲಾಗಿದೆ. (ಕೃಪೆ: ಅಜಿತ್ ಬೊಪ್ಪನಳ್ಳಿ ಫೇಸ್‌ಬುಕ್ ಬರಹ)


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ