Breaking News
Home / ಜಿಲ್ಲೆ / ಶಿವಮೊಗ್ಗ / ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿರೋ ಶರಾವತಿ- ರಸ್ತೆ ಬದಿಯಲ್ಲಿ ಮಣ್ಣು ಕುಸಿತ

ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿರೋ ಶರಾವತಿ- ರಸ್ತೆ ಬದಿಯಲ್ಲಿ ಮಣ್ಣು ಕುಸಿತ

Spread the love

ಶಿವಮೊಗ್ಗ: ಕಳೆದ ಒಂದು ವಾರದಿಂದ ಮಲೆನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಉತ್ತಮ ಮಳೆಯ ಕಾರಣ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದೆ.

ಮಳೆಗಾಲದ ಸಮಯದಲ್ಲಿ ಜೋಗ ಜಲಪಾತವನ್ನು ವೀಕ್ಷಿಸಲು ರಾಜ್ಯ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿ ನಯನ ಮನೋಹರವಾದ ಜಲಪಾದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರ ಪ್ರವಾಸಿ ತಾಣಗಳಿಗೂ ನಿರ್ಬಂಧ ವಿಧಿಸಿದೆ. ಆದ್ದರಿಂದ ರಮಣೀಯವಾದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಇಲ್ಲದೇ ಜೋಗ ಬಣಗುಡುತ್ತಿದೆ.

ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ರಸ್ತೆ ಬದಿಯ ಮಣ್ಣು ಕುಸಿಯುತ್ತಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲೂ ಸಹ ಕಳೆದೊಂದು ವಾರದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಭಾರೀ ಮಳೆಗೆ ಹೊಸನಗರದ ನಾಗೋಡಿ ಸಮೀಪದ ರಾಷ್ಟ್ರೀಯ ಬೈಂದೂರು-ರಾಣಿಬೆನ್ನೂರು ರಸ್ತೆಯ ಕೊಲ್ಲೂರು ಮಾರ್ಗದಲ್ಲಿ ರಸ್ತೆ ಬದಿಯ ಮಣ್ಣು ಕುಸಿಯಲು ಆರಂಭವಾಗಿದ್ದು, ವಾಹನ ಸವಾರರು ಆತಂಕದಿಂದಲೇ ಈ ಭಾಗದಲ್ಲಿ ಸಂಚಾರ ನಡೆಸುವಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾದರೆ ರಸ್ತೆಗೆ ಹಾನಿಯಾಗಿ ಸಂಚಾರಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ಅಲ್ಲದೇ ಕಳೆದ ವರ್ಷ ಸಹ ಈ ಭಾಗದಲ್ಲಿ ರಸ್ತೆಯ ಬದಿಯಲ್ಲಿ ಮಣ್ಣು ಕುಸಿದಿತ್ತು.

ಮಳೆಯಿಂದ ಜನರ ಜೀವನ ಅಸ್ತವ್ಯಸ್ತ:
ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಅನೇಕ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಹಾನಿಯುಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದು, ಆಟೋ ಹಾಗೂ ದ್ವಿಚಕ್ರ ವಾಹನಗಳು ಜಖಂ ಆಗಿವೆ. ಅಂಕೋಲದ ಕೇಣಿಯಲ್ಲೂ ಮರ ಉರುಳಿ ಕಾರೊಂದು ಜಖಂ ಆಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ಅಪಾಯವನ್ನೂ ಲೆಕ್ಕಿಸದ ಜನ ನದಿಯಲ್ಲೇ ಓಡಾಟ ಶುರುಮಾಡಿದ್ದಾರೆ. ವಾರದ ಹಿಂದೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ, ಜಂಬಗಿ ಕೆಡಿ, ಶೂರ್ಪಾಲಿ ಗ್ರಾಮ ಮಳೆಯ ಅಬ್ಬರಕ್ಕೆ ನಲುಗಿವೆ. ಧಾರಾಕಾರ ಮಳೆಯಿಂದಾಗಿ ಶೂರ್ಪಾಲಿ ಗ್ರಾಮದ ತೋಟದ ಮನೆಗಳಿಗೆ ನೀರು ನುಗ್ಗಿದೆ. ಪುನರ್ ವಸತಿ ಕೇಂದ್ರದ ಸಮೀಪದ ಮನೆಗಳಿಗೂ ನೀರು ಬಂದಿದ್ದು, ಮೊಳಕಾಲದವರೆಗೂ ಮನೆ ಸುತ್ತ ಮಳೆ ನೀರು ಆವರಿಸಿಕೊಂಡಿದೆ. ಮನೆಗಳಲ್ಲದೇ ಬೆಳೆಗಳೂ ಸಹ ಜಲಾವೃತವಾಗಿವೆ. ಜೊತೆಗೆ ತುಬಚಿ, ಬಾಡಗಿ ಕ್ರಾಸ್ ರಸ್ತೆ ಮೇಲೆ ನೀರು ಹರಿಯುತ್ತಿರುವ ಕಾರಣ ಜನ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.


Spread the love

About Laxminews 24x7

Check Also

ನಾಳೆಯಿಂದಲೇ ರಾಜ್ಯಾದ್ಯಂತ ಪ್ರವಾಸ: B.S.Y.

Spread the love ಶಿವಮೊಗ್ಗ: ನಾನು ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿದ್ದೇನೆ. ಆದರೆ, ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಬಲಪಡಿಸಿ ಅಧಿಕಾರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ