Breaking News
Home / ರಾಜಕೀಯ / ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ಚೆನ್ನಮ್ಮನ ಕಿತ್ತೂರು ಸಂಸ್ಥಾನದ ಇತಿಹಾಸ

ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ಚೆನ್ನಮ್ಮನ ಕಿತ್ತೂರು ಸಂಸ್ಥಾನದ ಇತಿಹಾಸ

Spread the love

ಬೆಳಗಾವಿ: ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ತೋರಿಸಿದ ಕೆಚ್ಚೆದೆಯ ಸಂಸ್ಥಾನ ಇದು.

ಶೌರ್ಯ, ಸಾಹಸ, ಸ್ವಾಭಿಮಾನ, ಸ್ವಾತಂತ್ರ್ಯ, ತ್ಯಾಗ, ಬಲಿದಾನಗಳೇ ಇಲ್ಲಿನ ಸೈನಿಕರ‌ ಜೀವಾಳ. ಪುರುಷಪ್ರಧಾನ ಸಮಾಜದಲ್ಲಿ ಓರ್ವ ಮಹಿಳೆ ಆಡಳಿತದ ಚುಕ್ಕಾಣಿ ಹಿಡಿದ ವೀರವನಿತೆಯ ನೆಲ.

 

ನಮ್ಮ ನಾಡಿನಲ್ಲಿ ಅನೇಕ ಸಂಸ್ಥಾನಗಳು ಆಡಳಿತ ನಡೆಸಿವೆ. ಆದರೆ, ಅವುಗಳ ಸಾಲಿನಲ್ಲಿ ಭಿನ್ನ ಮತ್ತು ಮಾದರಿಯಾಗಿ ನಿಲ್ಲುವುದು ಕಿತ್ತೂರು ಸಂಸ್ಥಾನ. ಅಧಿಕಾರದ ಆಸೆಗಾಗಿ ಬ್ರಿಟಿಷರ ಜೊತೆಗೆ ಕೈ ಜೋಡಿಸಿದ ಅನೇಕರ ಮಧ್ಯ ಸ್ವಾತಂತ್ರ್ಯದ ಕಹಳೆ ಊದಿದ ಅಪರೂಪದ ಪುಟ್ಟ, ದಿಟ್ಟ ಸಂಸ್ಥಾನವಿದು. ತೊಟ್ಟಿಲು ತೂಗುವ ಕೈ ಜಗತ್ತನ್ನೂ ಆಳಬಹುದು ಎಂಬುದನ್ನು ಸಾಧಿಸಿ ತೋರಿಸಿದ ವೀರರಾಣಿ ಚೆನ್ನಮ್ಮ ಆಳ್ವಿಕೆ ನಡೆಸಿದ ಸಾಮ್ರಾಜ್ಯ.

ಸಂಸ್ಥಾನದ ಉಗಮ ಹೇಗಾಯಿತು?: ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕ‌ಮಲ್ಲಶೆಟ್ಟಿ ಎಂಬ ಸಹೋದರರು ಕಿತ್ತೂರು ಸಂಸ್ಥಾನದ ಸ್ಥಾಪಕರು. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ಪ್ರಾಂತ್ಯಕ್ಕೆ ಸೇರಿದವರು ಎಂದು ಕೆಲವರು ವಾದಿಸುತ್ತಾರೆ. ಆದರೆ, ಭೀಮಾ ಮತ್ತು ಕೃಷ್ಣಾ ನದಿ ಮಧ್ಯದಲ್ಲಿ ಬರುವ ಸಗರನಾಡು ಪ್ರಾಂತಕ್ಕೆ ಇವರು ಸೇರಿದವರು. 16ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರ ಗವರ್ನರ್ ಆಗಿದ್ದ ಅಸದಖಾನ್ ಲಾರಿಗೆ ಬೆಳಗಾವಿಯಲ್ಲಿನ ಕೋಟೆ ದುರಸ್ಥಿ ಮಾಡುವಾಗ ಸಾಮಗ್ರಿಗಳನ್ನು ಪೂರೈಸಿ ಸಹಾಯ ಮಾಡಿದ ಕಾರಣಕ್ಕಾಗಿ, ಸಂಪಗಾವ ಪ್ರದೇಶವನ್ನು ಬಳುವಳಿಯಾಗಿ ಆ ಸಹೋದರರಿಗೆ ನೀಡುತ್ತಾರೆ. ಸಂಪಗಾವದಿಂದ 1585ರಿಂದ ಕಿತ್ತೂರು ಸಂಸ್ಥಾನದ ಆಡಳಿತ ಪ್ರಾರಂಭವಾಗುತ್ತದೆ. ಆ ಬಳಿಕ ಸಂಪಗಾವಿಯಿಂದ ಕಿತ್ತೂರಿಗೆ ತಮ್ಮ ಆಡಳಿತ ಕೇಂದ್ರವನ್ನು ಸ್ಥಳಾಂತರಿಸುತ್ತಾರೆ. 1585ರಿಂದ 1824ರ ಅವಧಿವರೆಗೆ 239 ವರ್ಷಗಳ ಕಾಲ 12 ರಾಜರು ಆಡಳಿತ ಮಾಡಿದ್ದಾರೆ.

5ನೇ ದೊರೆ ಅಲ್ಲಪ್ಪಗೌಡ ಕಟ್ಟಿದ ಕೋಟೆ: ಕಿತ್ತೂರು ಕೋಟೆ ಮೂರು ಹಂತದಲ್ಲಿ ನಿರ್ಮಾಣವಾಗಿದೆ. ಇದು ಮೂರು ಅಂತಸ್ಥಿನ, ಮೂರು ಸುತ್ತಿನ ಕೋಟೆ. 1660ರಿಂದ 1692ವರೆಗೆ ಆಳ್ವಿಕೆ ಮಾಡಿದ ಐದನೇ ರಾಜ ಅಲ್ಲಪ್ಪಗೌಡ ದೇಸಾಯಿ ಕಾಲದಲ್ಲಿ ಈ ಕೋಟೆ ನಿರ್ಮಾಣಗೊಂಡಿದೆ. ಅಲ್ಲದೇ ಸಂಸ್ಥಾನಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಕಲ್ಮಠ ಮತ್ತು ಚೌಕಿಮಠಗಳನ್ನೂ ಇದೇ ಅವಧಿಯಲ್ಲಿ ನಿರ್ಮಿಸಲಾಗಿದೆ. ಉಸುಕು, ಬೆಲ್ಲ, ಸುಣ್ಣ ಮಿಶ್ರಣ ಮಾಡಿದ ಗಚ್ಚಿನಿಂದ ಕೋಟೆ ಕಟ್ಟಲಾಗಿದೆ. ಪಶ್ಚಿಮಘಟ್ಟದ ಅಳ್ನಾವರ ಭಾಗದಲ್ಲಿ ಬೆಳೆಯುವ ಶ್ರೇಷ್ಠ ಗುಣಮಟ್ಟದ ಸಾಗವಾನಿ ಮರಗಳ ಕಟ್ಟಿಗೆ ಬಳಸಲಾಗಿದೆ. ಕೌಶಲ್ಯ, ನಾವಿನ್ಯತೆ, ಚಾಕಚಕ್ಯತೆ ಎಷ್ಟಿತ್ತು ಎಂಬುದು ತಿಳಿಯುತ್ತದೆ‌ ಎಂದು ಇತಿಹಾಸಕಾರ ಮಹೇಶ ಚನ್ನಂಗಿ ತಿಳಿಸಿದರು.

ಬ್ರಿಟಿಷರಿಗೆ ಸಿಂಹಸ್ವಪ್ನ ಚೆನ್ನಮ್ಮ: ಪತಿ ಮಲ್ಲಸರ್ಜರ ಅಗಲಿಕೆ, ನಂತರ ಅಧಿಕಾರಕ್ಕೆ ಬಂದ ಅಕ್ಕ ರುದ್ರಮ್ಮನ ಪುತ್ರ ಶಿವಲಿಂಗರುದ್ರಸರ್ಜರ ನಿಧನದ ಬಳಿಕ ಸಂಸ್ಥಾನದ ಜವಾಬ್ದಾರಿ ರಾಣಿ ಚೆನ್ನಮ್ಮ ವಹಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ದಂಡೆತ್ತಿ ಬಂದ ಧಾರವಾಡ ಜಿಲ್ಲಾಧಿಕಾರಿ ಥ್ಯಾಕರೆ ಹತ್ಯೆಯಾಗುತ್ತದೆ. ಇಡೀ ದೇಶದಲ್ಲೇ ಬ್ರಿಟಿಷರಿಗೆ ಮೊದಲ ಸೋಲು ಇದಾಗುತ್ತದೆ. ಅಲ್ಲದೇ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಕಿತ್ತೂರಿನಿಂದಲೇ ಹತ್ತುತ್ತದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ