Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಹೊಸಕೋಟೆ ಮತ್ತು ಬೆಳಗಾವಿಯಲ್ಲಿ ವಿದ್ಯುತ್ ಕಂಬ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಇಬ್ಬರು ಲೈನ್‌ಮ್ಯಾನ್‌ಗಳು ಸಾವನ್ನಪ್ಪಿದ್ದಾರೆ.

ಹೊಸಕೋಟೆ ಮತ್ತು ಬೆಳಗಾವಿಯಲ್ಲಿ ವಿದ್ಯುತ್ ಕಂಬ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಇಬ್ಬರು ಲೈನ್‌ಮ್ಯಾನ್‌ಗಳು ಸಾವನ್ನಪ್ಪಿದ್ದಾರೆ.

Spread the love

(ಬೆ. ಗ್ರಾ)/ಬೆಳಗಾವಿ : ಪ್ರತ್ಯೇಕ ಕಡೆಗಳಲ್ಲಿ ವಿದ್ಯುತ್‌ ಕಂಬದ ಮೇಲೆ ಕೆಲಸ ಮಾಡುವಾಗ ಹೈ ವೋಲ್ಟೇಜ್ ವಿದ್ಯುತ್ ಪ್ರವಹಿಸಿ ಇಬ್ಬರು ಲೈನ್‌ಮ್ಯಾನ್​ಗಳು​ ಸಾವನ್ನಪ್ಪಿದ್ದಾರೆ.

ಮೃತರನ್ನು ಕೋಲಾರ ಜಿಲ್ಲೆಯವ ಅನಿಲ್ (35) ಮತ್ತು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಿದ್ದರಾಮ ಕುಪವಾಡೆ (38) ಎಂದು ಗುರುತಿಸಲಾಗಿದೆ.

ಪ್ರಕರಣ -1: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮಾಲೂರು ರಸ್ತೆಯ ವಿಜಯನಗರ ಗೇಟ್ ಬಳಿ ಅನಿಲ್ ಕೆಲಸ ಮಾಡುವಾಗ ಘಟನೆ ನಡೆಯಿತು. ಬೆಸ್ಕಾಂನಲ್ಲಿ ಗುತ್ತಿಗೆ ಆಧಾರದಲ್ಲಿ ಅನಿಲ್​ ಲೈನ್‌ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಕೆಲಸಕ್ಕೆ ಹಾಜರಾಗಿದ್ದು, ಚೆನ್ನೈ ಸೂಪರ್ ಎಕ್ಸ್‌ಪ್ರೆಸ್ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ ಬದಲಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಸಂಪರ್ಕ ಅಫ್ ಮಾಡಿದ ನಂತರ ಕಂಬದ ಮೇಲೆ ಹತ್ತಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಬೆಸ್ಕಾಂನವರು ವಿದ್ಯುತ್ ಸಂಪರ್ಕ ಆನ್ ಮಾಡಿದ್ದಾರೆ. ಅನಿಲ್ ವಿದ್ಯುತ್ ಸ್ಪರ್ಶದಿಂದ ಕಂಬದ ಮೇಲೆಯೇ ಸಾವನ್ನಪ್ಪಿದರು.

ಪ್ರಕರಣ-2: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಿದ್ದರಾಮ ಕುಪವಾಡೆ ಅವರು ಹೊಸಪೇಟೆ ಗಲ್ಲಿ ಹೊರವಲಯದ ಕೃಷಿ ಜಮೀನು ಬಳಿಯ ವಿದ್ಯುತ್ ಕಂಬ ಏರಿ ದುರಸ್ತಿ ಮಾಡುತ್ತಿದ್ದಾಗ ಹೈ ವೋಲ್ಟೇಜ್ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿತು. ದುರಸ್ತಿ ಕಾರ್ಯಕ್ಕೆ ಬಂದಿದ್ದ ಮೂವರ ಪೈಕಿ ಸಿದ್ದರಾಮ ಕಂಬ ಏರಿದ್ದರು. ಸ್ಥಳಕ್ಕೆ ಚಿಕ್ಕೋಡಿ ಹೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತನ ಸಂಬಂಧಿಕರಾದ ಭರತ ಜೊಗಳೆ ಮತ್ತು ಬಾಲಕೃಷ್ಣ ಕುಪವಾಡೆ ಮಾತನಾಡಿ, “ಕಳೆದ ಆರು ತಿಂಗಳಿನಿಂದ ಸಿದ್ದರಾಮ ಹೆಸ್ಕಾಂಗೆ ಸಂಬಂಧಿಸಿದ ಕಾರ್ಯ ಮಾಡುತ್ತಿದ್ದರು. ವಿದ್ಯುತ್ ಕಂಬವನ್ನು ಇಲಾಖೆಯ ಲೈನ್‌ಮ್ಯಾನ್​ ಹತ್ತಬೇಕು. ಆದರೆ ಸಿದ್ದರಾಮನನ್ನು ಕಂಬದ ಮೇಲೆ ಹತ್ತಿಸಿದ್ದಾರೆ. ಚಿಕ್ಕೋಡಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಓರ್ವ ಪ್ರಾಣಪಕ್ಷಿ ಹಾರಿಹೋಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು” ಎಂದು ಒತ್ತಾಯಿಸಿದರು.

ಸೆಕ್ಷನ್ ಆಫೀಸರ್ ರಾಜು ಕುಂಬಾರ್ ಪ್ರತಿಕ್ರಿಯಿಸಿ, “ಕಳೆದ ವಾರದ ಹಿಂದೆ ಗ್ರಾಹಕರು ತಂತಿ ಸಡಿಲಗೊಂಡಿದೆ ಎಂದು ದೂರು ನೀಡಿದ್ದರು. ಇಂದು ಮುಂಜಾನೆ ಲೈನ್‌ಮ್ಯಾನ್​ ಈ ಭಾಗದಲ್ಲಿ ತಂತಿ ರಿಪೇರಿ ಮಾಡಬೇಕೆಂದು ಎಲ್ಸಿಗಾಗಿ (ವಿದ್ಯುತ್ ಕಡಿತ) ಕೇಳಿದರು. ಹೀಗಾಗಿ ನಮ್ಮ ವಿದ್ಯುತ್ ಸರಬರಾಜು ಘಟಕದಿಂದ ಹೋಗುವ ಎಲ್ಲ ವಿದ್ಯುತ್ ಕಡಿತ ಮಾಡಿದ್ದೀವಿ. ಆದರೆ ಘಟನೆ ನಡೆದಿರುವ ಕಂಬದ ಮೇಲೆ ಶಹರಕ್ಕೆ ಹೋಗಿರುವ ವಿದ್ಯುತ್ ಲೈನ್ ನಮ್ಮ ಘಟಕದಿಂದ ಅಲ್ಲ. ನಮ್ಮ ಇಲಾಖೆಯ ನೌಕರರ ನಿರ್ಲಕ್ಷ್ಯದಿಂದ ಖಾಸಗಿ ವ್ಯಕ್ತಿ ಕಂಬ ಏರಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ