ಬೆಂಗಳೂರು: ಮಹಾರಾಷ್ಟ್ರ ರಾಜಕಾರಣದ ಬಗ್ಗೆ ನಾವು ಯಾರೂ ಕೂಡ ಊಹೆಯೂ ಮಾಡಿರಲಿಲ್ಲ. ಯಾಕೆಂದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಂತಹ ವ್ಯವಸ್ಥೆ ಹುಟ್ಟುಹಾಕುವ ಸಾಮರ್ಥ್ಯ ಇರುವಾಗ, ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಒಬ್ಬ ಅಜಿತ್ ಪವಾರ್ ಹುಟ್ಟಿಕೊಳ್ಳಲೂಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ಡಿಕೆ, ಮಹಾರಾಷ್ಟ್ರ ರಾಜಕಾರಣದ ಬಗ್ಗೆ ನಾವು ಯಾರೂ ಕೂಡ ಊಹೆಯೂ ಮಾಡಿರಲಿಲ್ಲ. ಅಜಿತ್ ಪವಾರ್ ಅಂತವರೇ ಅವರ ಅಂಕಲ್ಗೆ ಟೋಪಿ ಹಾಕಿ ಹೋಗುತ್ತಾರೆ ಎಂದು ಯಾರಾದ್ರು ಅಂದುಕೊಂಡಿದ್ದರಾ? ಈಗಿನ ರಾಜಕೀಯ ವ್ಯವಸ್ಥೆಯೇ ಹಾಗಿದೆ. ಮುಂದಿನ ಪೀಳಿಗೆಗೆ ರಾಜಕೀಯ ಪಾಠ ಹೇಳಿಕೊಡುವಂತಹ ವಿಷಯವನ್ನು ಇಡಬೇಕು ಎಂದು ಸಭಾಧ್ಯಕ್ಷರು ಹೇಳಿದ್ದಾರೆ. ಆದರೆ ಸದ್ಯದ ವ್ಯವಸ್ಥೆಯಲ್ಲಿ ಯಾವ ರಾಜಕೀಯ ಪಾಠ ಹೇಳುತ್ತಾರೆ ಎಂಬುದೇ ಪ್ರಶ್ನೆಯಾಗಿದೆ. ಯಾಕೆಂದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮಹಾರಾಷ್ಟ್ರದಂತಹ ರಾಜಕೀಯ ವ್ಯವಸ್ಥೆಯನ್ನು ಹುಟ್ಟುಹಾಕುವ ಶಕ್ತಿ ಇರುವಾಗ ಕರ್ನಾಟಕದಲ್ಲೂ ಅಂತಹ ಸಾಧ್ಯತೆಯಿಲ್ಲ ಎಂದು ಯಾರೂ ಹೇಳಲಾಗದು ಎಂದರು.
ನವೆಂಬರ್ನಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂಬ ಈ ಹಿಂದಿನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಬಿಜೆಪಿ ನಾಯಕರೇ ಬಹಳಷ್ಟು ಜನರು ಹೇಳಿದ್ದಾರೆ. ಬದಲಾವಣೆ ಆಗಬಹುದು ಎಂದಿದ್ದಾರೆ. ಯಾರಿಗೆ ಗೊತ್ತು, ಇಲ್ಲೂ ಒಬ್ಬ ಅಜಿತ್ ಪವಾರ್ ಹುಟ್ಟಿಕೊಳ್ಳಲೂಬಹುದು ಕಾದು ನೋಡೋಣ ಎಂದು ಹೇಳಿದರು.
ರಾಜ್ಯಪಾಲರ ಭಾಷಣದ ಬಗ್ಗೆ ಟೀಕೆ: ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿನ ರಾಜ್ಯಪಾಲರ ಭಾಷಣವನ್ನು ಗಮನಿಸಿದರೆ ಈ ಸರ್ಕಾರವು ಆದಷ್ಟು ಬೇಗ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ವೆಂಟಿಲೇಟರ್ (ಐಸಿಯು) ಮೇಲೆ ಮಲಗಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು. ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ಡಿಕೆ, ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದರು.