Breaking News
Home / ರಾಜಕೀಯ / ಹೊಸಪೇಟೆ ಸಮೀಪ ಭೀಕರ ರಸ್ತೆ ಅಪಘಾತ: 7 ಜನ ಸ್ಥಳದಲ್ಲೇ ಸಾವು

ಹೊಸಪೇಟೆ ಸಮೀಪ ಭೀಕರ ರಸ್ತೆ ಅಪಘಾತ: 7 ಜನ ಸ್ಥಳದಲ್ಲೇ ಸಾವು

Spread the love

ವಿಜಯನಗರ: ಎರಡು ಆಟೋ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಏಳು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಇಂದು ನಡೆದಿದೆ.

ಮೃತರಲ್ಲಿ ಖಾಸಿಂ, ಯಾಸ್ಮಿನ್, ಉಮೇಶ್, ಜಹೀರಾ, ಮತ್ತು ಶ್ಯಾಮ, ಸೇರಿದಂತೆ ಒಟ್ಟು ಐವರ ಹೆಸರು ಗುರುತಿಸಲಾಗಿದ್ದು, ಇನ್ನಿಬ್ಬರ ಹೆಸರು ಪತ್ತೆಯಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಸೇರಿದಂತೆ ಸ್ಥಳೀಯರು ಕಂದಕದಲ್ಲಿ ಬಿದ್ದ ಎರಡು ಆಟೋಗಳನ್ನು ಮೇಲೆತ್ತಿ ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

“ಮೇಲ್ನೋಟಕ್ಕೆ ಲಾರಿ ಚಾಲಕನ ತಪ್ಪೆಂದು ಗೊತ್ತಾಗಿದೆ. ಘಟನೆ ಸಂಬಂಧ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಮೃತರು ತುಂಗಭದ್ರಾ ಅಣೆಕಟ್ಟೆ ನೋಡಲೆಂದು ಬಳ್ಳಾರಿಯಿಂದ ಹೊಸಪೇಟೆಗೆ ಆಗಮಿಸಿದ್ದರು. ಈ ವೇಳೆ ಘಟನೆ ನಡೆದಿದೆ” ಎಂದು ಡಿಎಸ್​ಪಿ ವಿಶ್ವನಾಥ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಜೊತೆ ದೂರವಾಣಿ ಮೂಲಕ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ., ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ.

ಗಾಯಗೊಂಡ 12 ಜನರ ಪೈಕಿ ಗಂಭೀರವಾಗಿರೋ ನಾಲ್ವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಮತ್ತು ಇನ್ನೂಳಿದ ಎಂಟು ಜನರಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಶಾಸಕ ಗವಿಯಪ್ಪ ಸೇರಿದಂತೆ ಬಳ್ಳಾರಿ ವಲಯದ ಐಜಿಪಿ ಲೋಕೇಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದ್ದಾರೆ.

ಘಟನೆ ಕುರಿತು ಹೊಸಪೇಟೆ ಕಾಂಗ್ರೆಸ್ ಮುಖಂಡ ಇಮಾಮ್ ನಿಯಾಜಿ ಮಾತನಾಡಿ, “ಇದೊಂದು ದುರಂತ ಘಟನೆ. ನಿನ್ನೆ ಬಕ್ರೀದ್​ ಮುಗಿಸಿಕೊಂಡು ಕುಟುಂಬಸಮೇತ ಎರಡು ಆಟೋಗಳೊಂದಿಗೆ ತುಂಗಭದ್ರಾ ಡ್ಯಾಂ ವೀಕ್ಷಿಸಲು ಇವರು ಪ್ರಯಾಣ ಮಾಡುತ್ತಿದ್ದರು. ಟ್ರಕ್​ಗೆ ಆಟೋ ಡಿಕ್ಕಿಯಾದ ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ. ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಇನ್ನುಳಿದವರಿಗೆ ಗಾಯಗಳಾಗಿವೆ” ಎಂದರು.

ಲಾರಿಗೆ ಸ್ಕೂಟರ್ ಡಿಕ್ಕಿಯಾಗಿ ದಂಪತಿ ಸಾವು: ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಗುರುವಾರ ನಡೆದಿತ್ತು. ರಾಮನಗರ ಜಿಲ್ಲೆ ಬಿಡದಿ ಸಮೀಪದ ಕೆಂಪನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿತ್ತು. ಮೃತರನ್ನು ಸನಾವುಲ್ಲಾ ಬೇಗ್ (65) ಹಾಗೂ ನೂರ್‌ಜಹಾನ್ (60) ಎಂದು ಗುರುತಿಸಲಾಗಿತ್ತು. ಮೃತ ದಂಪತಿ ಬೆಂಗಳೂರಿನ ಬಾಪೂಜಿ ನಗರ ನಿವಾಸಿಗಳಾಗಿದ್ದರು.

ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ರಾಮನಗರಕ್ಕೆ ಬಂದಿದ್ದ ಇಬ್ಬರು ಕಳೆದ ರಾತ್ರಿ ವಾಪಸ್ ಹೋಗುತ್ತಿದ್ದಾಗ ಅಪಘಾತ ನಡೆದಿತ್ತು. ಕೆಟ್ಟು ನಿಂತಿದ್ದ ಲಾರಿಗೆ ರಿಫ್ಲೆಕ್ಟರ್ ಇಲ್ಲದ ಕಾರಣ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ