Breaking News
Home / ಜಿಲ್ಲೆ / ಬೆಳಗಾವಿ / ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಮಷಿನ್ ಅಳವಡಿಸಲು ಚಿಂತನೆ: ಸಚಿವ ಶಿವಾನಂದ ಪಾಟೀಲ್

ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಮಷಿನ್ ಅಳವಡಿಸಲು ಚಿಂತನೆ: ಸಚಿವ ಶಿವಾನಂದ ಪಾಟೀಲ್

Spread the love

ಬೆಳಗಾವಿ: ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಆರೋಪವಿರುವ ಹಿನ್ನೆಲೆಯಲ್ಲಿ ನಾವೇ ಇಲಾಖೆಯಿಂದ ತೂಕದ ಮಷಿನ್ ಹಾಕುವ ಬಗ್ಗೆ ಚಿಂತನೆ ಇದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು. ಬೆಳಗಾವಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೀಘ್ರವೇ ಸಕ್ಕರೆ ಕಾರ್ಖಾನೆಗಳ ಸಭೆ ಕರೆಯುತ್ತೇವೆ. ರಾತ್ರೋರಾತ್ರಿ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ಪರಿಸ್ಥಿತಿ ಅನಿವಾರ್ಯವಾದರೆ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಯಂತ್ರ ಹಾಕಲೇಬೇಕಾಗುತ್ತೆ ಎಂದರು.

ಕಾರ್ಖಾನೆಯವರು ಸಾಕಷ್ಟು ಲಾಭ ಮಾಡಿಕೊಳ್ಳುತ್ತಾರೆ. ಆದರೆ ಕಾರ್ಖಾನೆಗಳು ಸರ್ಕಾರಕ್ಕೆ ಮತ್ತು ಸಂಸ್ಥೆಗೆ ಏನೂ ಸಹಾಯ ಮಾಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ.‌ ಒಂದು ಟನ್‌ಗೆ ಒಂದು ರೂಪಾಯಿ ಕೊಡುವುದನ್ನೂ ಕೆಲವು ಮಹಾಶಯರು ಮಾಡ್ತಿಲ್ಲ. ಅವರಿಗೆ ಇಂದು ಸಣ್ಣ ಸ್ಟೇ ತರಲು ಅಧಿಕಾರಿಗಳು ಬಿಟ್ಟಿದ್ದಾರೆ. ಅವರು ತಂದಿದ್ದಾರೆ ಅದಕ್ಕೆ ಮುಂದೆ ಹೋಗ್ತಿದ್ದಾರೆ.‌ ನಾನೂ ಸಹ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಕರೆದು ನಮ್ರತೆಯಿಂದ ವಿನಂತಿಸುತ್ತೇನೆ. ಇದೇ ರೀತಿ ಮುಂದುವರಿದರೆ ನಮಗೂ ನೋಡಿಕೊಳ್ಳಲು ಅವಕಾಶ ಇದೆ ಎಂದು ಎಚ್ಚರಿಕೆ ಕೊಟ್ಟರು.

ಹಲವು ಪ್ರಭಾವಿ ಶಾಸಕರು, ಸಚಿವರದ್ದು ಕಾರ್ಖಾನೆ ಇದೆಯಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ನೂರಕ್ಕೆ ನೂರು ನಿಜ. ಶಾಸಕರು, ಸಚಿವರದ್ದು, ಸಾರ್ವಜನಿಕರದ್ದು ಸೇರಿದಂತೆ ಸರ್ಕಾರದ ಕಾರ್ಖಾನೆಗಳಿವೆ. ಸರ್ಕಾರಿ ಸ್ವಾಮ್ಯದ ಹತ್ತು ಕಾರ್ಖಾನೆ ನಾವೇ ಲೀಸ್ ಮೇಲೆ ಕೊಟ್ಟಿದ್ದೀವಿ. ಲೀಸ್ ಪಡೆದು ಲಾಭ ಮಾಡಿಕೊಂಡಿದ್ದಾರೆಯೇ ಹೊರತು ಸರ್ಕಾರಕ್ಕೆ ಲಾಭ ಮಾಡಿಕೊಟ್ಟಿಲ್ಲ. ಆ ಸಂಗತಿಯೂ ನನ್ನ ಗಮನಕ್ಕೆ ಇದೆ ಎಂದು ಹೇಳಿದರು.

ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಸಂಸ್ಥೆಗೆ ಪ್ರತಿ ಟನ್‌ಗೆ 30 ರೂ. ಕೊಡ್ತಾರೆ. ನಾವು ಒಂದು ರೂಪಾಯಿ ಕೇಳುತ್ತಿದ್ದೀವಿ, ಎರಡು ರೂ. ಇದ್ದಿದ್ದನ್ನು ಒಂದು ರೂ. ಮಾಡಿದ್ದೇವೆ. ಒಂದು ಟನ್ ಕಬ್ಬಿನಿಂದ ಕಾರ್ಖಾನೆಯವರು 600 ರಿಂದ 800 ರೂ. ಉಳಿಸಿಕೊಳ್ಳುತ್ತಾರೆ. ಆ ಗೊಂದಲಕ್ಕೆ ನಾವು ಹೋಗೋದು ಬೇಡ, ಅವರು ಲಾಭ ಮಾಡಿಕೊಂಡು ಬದುಕಲಿ. ಕಾರ್ಖಾನೆ ಬದುಕಿದರೆ ರೈತರು ಬದುಕುತ್ತಾರೆ, ರೈತ ಬದುಕಿದರೆ ಕಾರ್ಖಾನೆಯವರು ಬದುಕುತ್ತಾರೆ ಎಂದು ವಿವರಿಸಿದರು.

ಈ ಸರ್ಕಾರ ರೈತನಿಗೆ ಪುಕ್ಸಟ್ಟೆ ನೀರು, ವಿದ್ಯುತ್ ಕೊಡುತ್ತೆ. ಅದಕ್ಕಾಗಿ ಕಾರ್ಖಾನೆಗೆ ಕಬ್ಬು ಪೂರೈಕೆ ಆಗುತ್ತೆ. ಏನ್ ಲಾಭ ಅಂತಾ ಕೇಳಿದರಲ್ಲ ಕಾರ್ಖಾನೆಗಳಿಗೆ, ಇದು ಲಾಭ. ಇಡೀ ದೇಶದಲ್ಲಿ ರೈತನಿಗೆ ನೀರಿನ ಬರ ಆಗದ ರೀತಿ ನೀರು‌ ಕೊಡುವ ಸರ್ಕಾರ ಅಂದ್ರೆ ಅದು ಕರ್ನಾಟಕ ಸರ್ಕಾರ. ಪಂಪ್‌ಸೆಟ್‌ಗಳಿಗೆ ಹತ್ತು ಪೈಸೆ ಬಿಲ್ ಪಡೆಯಲ್ಲ. ವರ್ಷಕ್ಕೆ ಸಾವಿರಾರು ಕೋಟಿ ಬಿಲ್ ಸರ್ಕಾರವೇ ಕಟ್ಟುತ್ತೆ. ಇದರ ಉದ್ದೇಶ ಉದ್ಯೋಗ ಸೃಷ್ಟಿಯಾಗಲಿ, ರೈತ 12 ತಿಂಗಳು ಹೊಲದಲ್ಲಿ ಕೆಲಸ ಮಾಡಿ, ಲಾಭ ಮಾಡಿಕೊಳ್ಳಲಿ ಎಂಬುದು ನಮ್ಮ ಉದ್ದೇಶ ಎಂದರು.

ಶುಗರ್ ಇಂಡಸ್ಟ್ರೀಸ್ ಸಿಕ್ಕಾಪಟ್ಟೆ ಬರ್ತಿವೆ, ಹೊಸ ಹೊಸ ಆವಿಷ್ಕಾರ ಆಗುತ್ತಿವೆ. ಇಥೆನಾಲ್ ಸಲುವಾಗಿ ನಮ್ಮ ದೇಶದಲ್ಲಿ ಹೊಸ ಪಾಲಿಸಿ ಬಂದಿದೆ. ಬರೀ ಸಕ್ಕರೆ ಬಗ್ಗೆ ಹೇಳುತ್ತಾ ಕುಳಿತರೆ ಸರಿ ಆಗಲ್ಲ. ಇಥೆನಾಲ್‌ಗೂ ನಾವು ಹೋಗಲೇ ಬೇಕು. ಆ ಮುಂದಾಲೋಚನೆ ಇಟ್ಟುಕೊಂಡು ಸಕ್ಕರೆ ಸಂಸ್ಥೆ ಬೆಳೆಸಬೇಕಿದೆ. ಸರ್ಕಾರದ ಮುಂದೆ ಯಾವ ಪ್ರಸ್ತಾವನೆ ತೆಗೆದುಕೊಂಡು ಹೋಗಬೇಕು. ಯಾವ ರೀತಿ ಈ ಸಂಸ್ಥೆ ಬೆಳೆಸಬೇಕು. ಇನ್ನು ಹೆಚ್ಚಿನ ಲಾಭ ರೈತರಿಗೆ, ಸಮಾಜಕ್ಕೆ ದೇಶಕ್ಕೆ ಆಗಬೇಕು. ಆ ಉದ್ದೇಶ ಇಟ್ಟುಕೊಂಡು ಈ ಸಂಸ್ಥೆ ಬೆಳೆಸುವ ಪ್ರಯತ್ನ ಮಾಡುತ್ತೇವೆ.

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರೀತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಯಾರನ್ನು ಕೇಳಬೇಕು ಅವರನ್ನ ಕೇಳಿ ನಾನು ಹೇಗೆ ಉತ್ತರ ಕೊಡಬೇಕು. ಹೈಕಮಾಂಡ್ ಉತ್ತರ ಕೊಡೋದನ್ನ ನನಗೆ ಕೇಳಿದ್ರೆ ಹೇಗೆ ಎಂದು ಮರು ಪ್ರಶ್ನಿಸಿದರು.

ಕೆಲವು ಸಚಿವರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೀತಾರೆ ಅಂತಿದ್ದಾರೆ ಎಂಬ ವಿಚಾರಕ್ಕೆ, ನಿಮ್ಮ ಸಹೋದ್ಯೋಗಿಗಳ ಮೂಲಕ ಅವರನ್ನೇ ಕೇಳಿ. ಮೈಸೂರು, ವಿಜಯಪುರದಲ್ಲಿ ಕೇಳಿ ಅಂತಾ ಹೇಳಿ. ಅದರ ಬಗ್ಗೆ ಉತ್ತರ ಕೊಡುವ ಶಕ್ತಿಯ ಮನುಷ್ಯ ನಾನಲ್ಲ. ಮುಖ್ಯಮಂತ್ರಿ ಇದ್ದಾರೆ ಎಂದರೆ ಐದು ವರ್ಷ ಇದ್ದೇ ಇರುತ್ತಾರಲ್ಲ ಎಂದರು.

ಕೇಂದ್ರ ಸರ್ಕಾರದಿಂದ ಸರ್ವರ್‌ ಹ್ಯಾಕ್ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದನ್ನು ನಿನ್ನೆಯೇ ಹೇಳಿದ್ದಾರಲ್ಲ, ನೀವು ಕೇಳಿದೀರಿ, ಅವರು ಹೇಳಿದ್ದಾರೆ. ಹ್ಯಾಕ್ ಬಗ್ಗೆ ನಾನು ಹೇಳುವುದರಲ್ಲಿ ಅರ್ಥ ಇಲ್ಲ, 50 ವರ್ಷಗಳಲ್ಲಿ ಇಲ್ಲದ ಯೋಜನೆಗಳನ್ನು ಸರ್ಕಾರ ಮೊದಲ ಬಾರಿ ಘೋಷಣೆ ಮಾಡಿದೆ. ಸರ್ಕಾರ ಏನೇನೂ ಘೋಷಣೆ ಮಾಡಿದೆ ನಿರಂತರ ಪ್ರಯತ್ನ ಮಾಡಿ ಜಾರಿ ಮಾಡುತ್ತೆ. ಅದರಲ್ಲಿ ಹಂತ- ಹಂತವಾಗಿ ಕೆಲವೊಂದು ಈಡೇರುತ್ತಿವೆ, ಕೆಲವು ಸಮಸ್ಯೆ ಇದ್ದಿದ್ದು ತಮಗೆ ಗೊತ್ತಿದೆ. ಶೀಘ್ರ ಜಾರಿಗೆ ನಾವು ನಿರೀಕ್ಷೆ ಮಾಡೋಣ. ಶೀಘ್ರ ಜಾರಿ ವ್ಯವಸ್ಥೆಯ ಸಮೀಪ ಹೋಗುವ ಪ್ರಯತ್ನ ಮಾಡೋಣ ಎಂದು ಹೇಳಿದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ