Breaking News
Home / ಜಿಲ್ಲೆ / ಬೆಳಗಾವಿ / ರಾಜ್ಯದ 8 ಕಡೆ ಸಣ್ಣ ಕೈಗಾರಿಕೆ ಹಬ್ ಸ್ಥಾಪಿಸಲು ಚಿಂತನೆ: ಸಚಿವ ಶರಣ ಬಸಪ್ಪ ದರ್ಶನಾಪೂರ್

ರಾಜ್ಯದ 8 ಕಡೆ ಸಣ್ಣ ಕೈಗಾರಿಕೆ ಹಬ್ ಸ್ಥಾಪಿಸಲು ಚಿಂತನೆ: ಸಚಿವ ಶರಣ ಬಸಪ್ಪ ದರ್ಶನಾಪೂರ್

Spread the love

ಬೆಳಗಾವಿ, ಚಾಮರಾಜನಗರ, ಚಿತ್ರದುರ್ಗ, ಹುಬ್ಬಳ್ಳಿ, ಬೀದರ್ ಹಾಗು ವಿಜಯಪುರದಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸುವ ಉದ್ದೇಶವಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣ ಬಸಪ್ಪ ದರ್ಶನಾಪೂರ್ ಹೇಳಿದ್ದಾರೆ.

ಬೆಂಗಳೂರು: ರಾಜ್ಯದ ಎಂಟು ಕಡೆಗಳಲ್ಲಿ ಸಣ್ಣ ಕೈಗಾರಿಕಾ ಹಬ್ ಮಾಡಲು ಉದ್ದೇಶಿಸಲಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪೂರ್ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಈ ತಿಂಗಳ 17ರಂದು ಸಣ್ಣ ಕೈಗಾರಿಕೆ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ 700 ಕೋಟಿ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿವೆ. ಬೆಳಗಾವಿ, ಚಾಮರಾಜನಗರ, ಚಿತ್ರದುರ್ಗ, ಹುಬ್ಬಳ್ಳಿ, ಬೀದರ್, ವಿಜಯಪುರ ಸೇರಿದಂತೆ 7-8 ಕಡೆಗಳಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸುವ ಉದ್ದೇಶವಿದೆ. ಪ್ರತಿ ಕೈಗಾರಿಕಾ ವಸಾಹತುವಿಗೆ ಕನಿಷ್ಠ 50 ಎಕರೆ ಜಮೀನು ಬೇಕು. ಹುಬ್ಬಳ್ಳಿ ಹೊರತುಪಡಿಸಿ ಉಳಿದೆಡೆ ನಮ್ಮ ಇಲಾಖೆಯ 15- 20 ಎಕರೆ ಜಮೀನು ಇದೆ. ಅದನ್ನು 50 ರಿಂದ 100 ಎಕರೆ ಜಮೀನು ನೀಡುವಂತೆ ಕೋರಿದ್ದೇವೆ ಎಂದು ಸಚಿವರು ತಿಳಿಸಿದರು.

ಬಳ್ಳಾರಿಯಲ್ಲಿ 100 ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆ ವಸಾಹತುವನ್ನು ಸುಸಜ್ಜಿತವಾಗಿ ಸ್ಥಾಪಿಸಿದ್ದೇವೆ. ಅಲ್ಲಿ ನೀರು ಸಂಸ್ಕರಣಾ ಘಟಕ ಇರುವ ಕಾರಣದಿಂದ ಕೈಗಾರಿಕೆ ಸ್ಥಾಪನೆಗೆ ನಿರೀಕ್ಷಿಸಿದಷ್ಟು ಉದ್ಯಮಿಗಳು ಬರುತ್ತಿಲ್ಲ. ಒಂದು ಸಾವಿರ ಎಕರೆಯಲ್ಲಿ ಕೈಗಾರಿಕಾ ವಸಾಹತು ಇದೆ. ಈಗ ಸದ್ಯ 500 ಮಂದಿ ಸಣ್ಣ ಉದ್ಯಮ ಸ್ಥಾಪಿಸಲು ಮುಂದೆ ಬಂದಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವನ್ನು ನೀಡುತ್ತೇವೆ ಎಂದು ಮಾಹಿತಿ ನೀಡಿದರು.

ಬಳ್ಳಾರಿಯಲ್ಲಿ ಸೋಲಾರ್ ಬ್ರಾಂಡ್ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಸಾರ್ವಜನಿಕ ಉದ್ದಿಮೆ ಹಣಕಾಸು ಇಲಾಖೆಯಲ್ಲಿರುವುದರಿಂದ ಸ್ಪಷ್ಟನೆ ಕೋರಿ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಸಣ್ಣ ಕೈಗಾರಿಕೆಗಳ ಸಮಸ್ಯೆ ಸಂಬಂಧ ಸದ್ಯದಲ್ಲೇ ಸಣ್ಣ ಕೈಗಾರಿಕೋದ್ಯಮಿಗಳ ಸಭೆ ನಡೆಸುತ್ತೇನೆ. ವಿದ್ಯುತ್ ದರ ಏರಿಕೆಯಿಂದ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಗುಲ್ಬರ್ಗಾ ಜಿಲ್ಲೆಯ ಸಣ್ಣ ಕೈಗಾರಿಕೆ ಉದ್ಯಮಿಗಳು ಮನವಿ ಸಲ್ಲಿಸಿದ್ದಾರೆ. ಎಲ್ಲ ವಿಚಾರಗಳ ಬಗ್ಗೆಯೂ ಸಣ್ಣ ಕೈಗಾರಿಕೋದ್ಯಮಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ವಿವರಣೆ ನೀಡಿದರು.

ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ ಮುಂದೂಡಿಕೆ: ರಾಜ್ಯ ಸರ್ಕಾರದ ಬಹುನಿರೀಕ್ಷಿತ ಗೃಹಜ್ಯೋತಿ ಯೋಜನೆಗೆ ಜೂನ್ 15ರ ಬದಲು ಜೂನ್ 18 ರಿಂದ ಅರ್ಜಿ ಸ್ವೀಕರಿಸಲು ಸರ್ಕಾರ ನಿರ್ಧರಿಸಿದೆ. ಈ ಮೊದಲು ಜೂನ್​ 15ರಿಂದ ಜುಲೈ 15ರ ವರೆಗೆ ಅರ್ಜಿ ಸ್ವೀಕರಿಸುವ ಹಾಗೂ ಆಗಸ್ಟ್ 15ರ ವರೆಗೂ ಪರಿಶೀಲನೆ ನಡೆಸಿ ಬಳಿಕ ಸ್ವಾತಂತ್ರ್ಯ ದಿನಾಚರಣೆ ದಿನ ಯೋಜನೆ ಅನುಷ್ಠಾನ ಘೋಷಿಸುವ ಬಗ್ಗೆ ಸರ್ಕಾರ ನಿರ್ಧಾರ ಮಾಡಿದೆ.

ಸೇವಾ ಸಿಂಧು ಪೋರ್ಟಲ್ ಮೂಲಕ ಸರ್ಕಾರಿ ಸಂಸ್ಥೆಗಳ ಬಿಲ್ ಪಾವತಿ ಕೇಂದ್ರಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಿಕೆಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಇದಕ್ಕಾಗಿ ಸಿದ್ಧಪಡಿಸಿದ್ದ ಸಾಫ್ಟ್​ವೇರ್​ನಲ್ಲಿ ಕೆಲ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾಗಾಗಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಎರಡು ದಿನ ಮುಂದೂಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ