Breaking News
Home / ರಾಜಕೀಯ / ಕಾಲಗರ್ಭ ಸೇರುತ್ತಿವೆ ಪುರಾತನ ಸ್ಮಾರಕಗಳು: ಕನಕಗಿರಿ ಪುಷ್ಕರಣಿಯ ಕಥೆಯಲ್ಲ, ಇದು ವ್ಯಥೆ

ಕಾಲಗರ್ಭ ಸೇರುತ್ತಿವೆ ಪುರಾತನ ಸ್ಮಾರಕಗಳು: ಕನಕಗಿರಿ ಪುಷ್ಕರಣಿಯ ಕಥೆಯಲ್ಲ, ಇದು ವ್ಯಥೆ

Spread the love

ಗಂಗಾವತಿ: ಐತಿಹಾಸಿಕ ಹಿನ್ನೆಲೆಯುಳ್ಳ ಕನಕಗಿರಿ ಪಟ್ಟಣವು ಧಾರ್ಮಿಕವಾಗಿ ಮಾತ್ರವಲ್ಲದೇ ಪುರಾತನ ಸ್ಮಾರಕಗಳಿಂದ ಸಾಂಸ್ಕೃತಿಕವಾಗಿ ತನ್ನದೇ ಆದ ವೈಶಿಷ್ಟತೆ ಹೊಂದಿವೆ.

ಪುರಾತತ್ವ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿರ್ಲಕ್ಷ್ಯದಿಂದ ಪುರಾತನ ಸ್ಮಾರಕಗಳು, ದೇವಾಲಯಗಳು ಕ್ರಮೇಣ ಕಾಲಗರ್ಭಕ್ಕೆ ಸೇರುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಅತೀವ ಬೇಸರ ಮೂಡಿಸಿದೆ. ಹಾಲಿ ಸಚಿವ ಶಿವರಾಜ ತಂಗಡಗಿ ಮೂರು ಬಾರಿ ಸಚಿವರಾಗಿ, ಬಸವರಾಜ ದಢೇಸ್ಗೂರು ಶಾಸಕರಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾದರೂ ಈ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಯಾವುದೇ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಕನಕಗಿರಿಯ ಹಿನ್ನೆಲೆ: ಕ್ರಿ.ಶ. 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಮಾಂಡಲೀಕ ದೊರೆಗಳಿಂದ ಆಳಲ್ಪಡುತ್ತಿದ್ದ ಸುವರ್ಣಗಿರಿ (ಈಗಿನ ಕನಕಗಿರಿ) ವೈಭವದಿಂದ ಕೂಡಿದ್ದ ಸಮೃದ್ದ ನಾಡು. ಇಲ್ಲಿಯ ಅರಸರು ವಾಸ್ತುಶಿಲ್ಪ ಕಲೆಗೆ ವಿಶೇಷ ಒತ್ತು ನೀಡುತ್ತಿದ್ದರು. ನೂರಾರು ಮಠ, ಮಂದಿರ, ಸ್ಮಾರಕಗಳನ್ನು ಕಟ್ಟಿಸಿರುವುದು ಇದಕ್ಕೆ ನಿದರ್ಶನ. ಲೋಕನಾಥನಾದ ಮಹಾವಿಷ್ಣು ಕನಕಾಚಲ ಲಕ್ಷ್ಮೀನರಸಿಂಹ ನಾಮಾಂಕಿತನಾಗಿ ಸಾಲಿಗ್ರಾಮ ಶಿಲಾರೂಪದಲ್ಲಿ ನೆಲೆಸಿರುವುದು ಈ ಕ್ಷೇತ್ರದ ವಿಶೇಷತೆ. ಕನಕಗಿರಿ ಎಂದ ಕೂಡಲೇ ಜನಪದರ ಬಾಯಲ್ಲಿ ನೆನಪಾಗೋದು, ”ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪೆ ನೋಡಬೇಕು” ಎಂಬ ಮಾತು. ಈ ನಾಣ್ಣುಡಿ ಅಜರಾಮರ.

ವಾಸ್ತುಶಿಲ್ಪದ ವಿಶೇಷತೆ: ಕನಕಾಚಲಪತಿ ದೇವಸ್ಥಾನ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ವಾಸ್ತುಶಿಲ್ಪ ಕಲೆಯಿಂದಲೂ ವೀಶೇಷತೆ ಹೊಂದಿದೆ. 700 ಬಾವಿ, 700 ದೇವಾಲಯ ಹಾಗೂ 700 ಗೊಲ್ಲರ ಮನೆಗಳು ಇಲ್ಲಿದ್ದವು ಎಂಬುದನ್ನು ಇತಿಹಾಸ ಹೇಳುತ್ತದೆ. ಈ ಪಟ್ಟಣ ಪ್ರವಾಸಿತಾಣವಾಗಿಯೂ ಗುರುತಿಸಿಕೊಂಡಿದೆ. ವಿಪರ್ಯಾಸವೆಂದರೆ ಕೆಲವು ಮಂದಿರ- ಸ್ಮಾರಕ, ಕೋಟೆಯ ಗೋಡೆ ಹೀಗೆ ಒಂದೊಂದೇ ನಿರ್ವಹಣೆಯ ಕೊರತೆಯಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿವೆ. ಇನ್ನೂ ಕೆಲವು ಸ್ಮಾರಕಗಳು ಮನುಷ್ಯರ ದುರಾಸೆಯಿಂದ ಒತ್ತುವರಿ, ದನಗಾಹಿಗಳ ನಿಧಿಯಾಸೆಯಿಂದಲೂ ಮರೆಯಾಗುತ್ತಿವೆ.

ಬೆರಳೆಣಿಕೆಯಷ್ಟು ಸ್ಮಾರಕಗಳು ಮಾತ್ರ..: ಮಾನವನ ಹಸ್ತಕ್ಷೇಪದ ಮಧ್ಯೆಯೂ ಬೆರಳೆಣಿಕೆಯಷ್ಟು ಮಂದಿರ, ಸ್ಮಾರಕಗಳು ಮಾತ್ರ ಉಳಿದುಕೊಂಡಿದ್ದು, ಅಂತವುಗಳಲ್ಲಿ ತ್ರಿವೇಣಿ ಸಂಗಮದ ತಟದಲ್ಲಿಯೇ ವಿಶಾಲ, ಸಾವಿರಾರು ಜನ ಏಕಕಾಲಕ್ಕೆ ಪುಣ್ಯಸ್ನಾನ ಮಾಡುವ ದೊಡ್ಡದಾದ ಪುಷ್ಕರಣಿಯೊಂದು ಪಾಳುಬಿದ್ದ ಸ್ಥಿತಿಯಲ್ಲಿದೆ. ಇದೇ ನರಸಿಂಹ ತೀರ್ಥ. ಈ ಹಿಂದೆ ದೇವಸ್ಥಾನದ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮತ್ತು ಲಕ್ಷ್ಮೀ ನರಸಿಂಹ ದೇವರ ತೆಪ್ಪೋತ್ಸವಕ್ಕಾಗಿ ಬಳಸಲಾಗುತ್ತಿತ್ತು. ಕಾಲಾನಂತರದ ಬರಗಾಲ, ಶತ್ರುಗಳ ದಾಳಿ ಮತ್ತು ದತ್ತಿ ಕೊರತೆಯಿಂದ ತೆಪ್ಪೋತ್ಸವ ಸೇವೆ ನಿಂತು ಹೋಗಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

ಇದು ಎರಡನೇ ತಿರುಪತಿ: ಕನಕಾಚಲಪತಿ ದೇವರಲ್ಲಿ ಹರಕೆ ಕಟ್ಟಿಕೊಂಡ ಭಕ್ತರು, ಈ ಪುಷ್ಕರಣಿ ಹತ್ತಿರವೇ ತಲೆ ಮುಡಿ ಕೊಡುವುದು ಇಂದಿಗೂ ಸಹ ರೂಢಿಯಲ್ಲಿದೆ. ಕನಕಾಚಲಪತಿ ದೇವಸ್ಥಾನವು ಎರಡನೇ ತಿರುಪತಿ ಖ್ಯಾತಿಯೂ ಹೊಂದಿದ್ದು ಬಡವರು, ದೂರ ಪ್ರಯಾಣ ಮಾಡಲಾಗದ ಅಶಕ್ತರು ಕನಕಗಿರಿಯ ಕನಕಾಚಲಪತಿ ದೇವರಲ್ಲಿಯೇ ಸೇವೆ ಸಲ್ಲಿಸಿ ಪುನೀತರಾಗುತ್ತಾರೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿಯು ಜಾತ್ರೆಯಲ್ಲಿ ತಲೆಮುಡಿ ಸೇವೆಗೆ ಈ ಪುಷ್ಕರಣಿಯನ್ನು ಬಳಸಿಕೊಂಡು ವಿಶೇಷ ದರ ನಿಗದಿ ಮಾಡಿ ದೇವಸ್ಥಾನಕ್ಕೆ ಆದಾಯ ಕಂಡುಕೊಳ್ಳುತ್ತಾರೆ. ತಲೆಮುಡಿ ಕೊಟ್ಟ ನಂತರ ಪುಣ್ಯಸ್ನಾನ ಮಾಡುವುದು ಇಲ್ಲಿನ ವಾಡಿಕೆ.

ಭಕ್ತರಿಗಿಲ್ಲ ಮೂಲಭೂತ ಸೌಲಭ್ಯ: ದೇವಸ್ಥಾನದ ಆಡಳಿತ ಮಂಡಳಿ ವಿವಿಧ ರೀತಿಯ ವಿಶೇಷ ಸೇವೆಗಳಿಂದ ಲಕ್ಷಗಟ್ಟಲೆ ಆದಾಯ ಗಳಿಸುತ್ತದೆ. ಭಕ್ತರ ಪುಣ್ಯಸ್ನಾನಕ್ಕೆ ನಲ್ಲಿ ನೀರಿನಲ್ಲಿ ಸ್ನಾನ ಮಾಡಲು ಅರೆಕಾಲಿಕ ವ್ಯವಸ್ಥೆ ಮಾಡಿದ್ದು, ಬಯಲಿನಲ್ಲಿಯೇ ಸ್ನಾನ ಮಾಡಿ ಬಟ್ಟೆ ಬದಲಿಸಿಕೊಳ್ಳಬೇಕಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ