Home / ರಾಜಕೀಯ / ಬೆಳಗಾವಿಯಲ್ಲಿ ವಾರ್ಡ್ ಸಮಿತಿ ರಚನೆ ವಿಳಂಬ: ನಾಗರಿಕರ ಅಸಮಾಧಾನ

ಬೆಳಗಾವಿಯಲ್ಲಿ ವಾರ್ಡ್ ಸಮಿತಿ ರಚನೆ ವಿಳಂಬ: ನಾಗರಿಕರ ಅಸಮಾಧಾನ

Spread the love

ಬೆಳಗಾವಿ: ಮಹಾನಗರ ಪಾಲಿಕೆಯ ಪ್ರತಿಯೊಂದು ವಾರ್ಡ್‌ಗಳಲ್ಲಿ ರಚನಾತ್ಮಕವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕಾಗಿ ‘ನಾಗರಿಕ ವಾರ್ಡ್ ಸಮಿತಿ’ ರಚಿಸಬೇಕೆಂಬ ಕಾನೂನಿದೆ.

ಆದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಾಲಿಕೆ ಸದಸ್ಯರು ಆಯ್ಕೆಯಾಗಿ 2 ವರ್ಷ ಕಳೆಯುತ್ತಾ ಬಂದರೂ ವಾರ್ಡ್ ಸಮಿತಿ ರಚನೆ ಆಗದೇ ಇರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವದೊಂದಿಗೆ ವಾರ್ಡ್‌ಗಳಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ‘ನಾಗರಿಕ ವಾರ್ಡ್ ಸಮಿತಿ’ ರಚಿಸಬೇಕು ಎಂಬ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯ್ದೆ ಇದೆ. ಈಗಾಗಲೇ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿ ರಾಜ್ಯದ ಇತರ ಮಹಾನಗರ ಪಾಲಿಕೆಗಳಲ್ಲಿ ನೋಟಿಫಿಕೇಶನ್ ಹೊರಡಿಸಲಾಗಿದ್ದು, ವಾರ್ಡ್ ಸಮಿತಿ ರಚಿಸುವ ಪ್ರಕ್ರಿಯೆ ನಡೆದಿವೆ.

ಆದರೆ, ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ವಾರ್ಡ್ ಸಮಿತಿ ರಚನೆ ನೆನೆಗುದಿಗೆ ಬಿದ್ದಿದೆ. ಪಾಲಿಕೆ ಸದಸ್ಯರು ಆಯ್ಕೆಯಾದ ಬಳಿಕ ವಾರ್ಡ್ ಸಮಿತಿ ರಚಿಸುವಂತೆ ಪಾಲಿಕೆ ಆಯುಕ್ತರಿಗೆ ನಾಗರಿಕರು ಮನವಿ ಸಲ್ಲಿಸಿದ್ದರು. ಮೇಯರ್ ಆಯ್ಕೆ ಬಳಿಕ ಸಮಿತಿ ರಚಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಮೇಯರ್ ಆಯ್ಕೆ ಬಳಿಕ ವಿಧಾನಸಭೆ ಚುನಾವಣೆ ನೆಪ ಹೇಳಿ ಮತ್ತೆ ಮುಂದಕ್ಕೆ ಹಾಕಿದ್ದರು. ಈಗ ನೂತನ ಶಾಸಕರು ಆಯ್ಕೆಯಾದರೂ ವಾರ್ಡ್ ಸಮಿತಿ ರಚಿಸುವ ಪ್ರಕ್ರಿಯೆ ಆರಂಭ ಆಗದೇ ಇರುವುದಕ್ಕೆ ನಾಗರಿಕರು ಮತ್ತಷ್ಟು ಅಸಮಾಧಾನ ಹೊರ ಹಾಕಿದ್ದಾರೆ.

ಏನಿದು ನಾಗರಿಕರ ವಾರ್ಡ್ ಸಮಿತಿ? ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಹಾಗೂ ಸಾರ್ವಜನಿಕರ ಹಣ ದುರ್ಬಳಕೆಯಾಗಬಾರದೆಂಬ ಉದ್ದೇಶದಿಂದ ‘ನಾಗರಿಕರ ವಾರ್ಡ್ ಸಮಿತಿ’ ರಚಿಸಲು ಆದೇಶವಿದೆ. ‘ನಾಗರಿಕರ ವಾರ್ಡ್ ಸಮಿತಿ’ಯಲ್ಲಿ 3 ಮಹಿಳೆಯರು, ಪರಿಶಿಷ್ಟ ಜಾತಿ ಓರ್ವ ವ್ಯಕ್ತಿ, ಪರಿಶಿಷ್ಟ ಪಂಗಡದ ಓರ್ವ ವ್ಯಕ್ತಿ ಹಾಗೂ ನೋಂದಾಯಿತ ಸಂಘ – ಸಂಸ್ಥೆಗಳ ಇಬ್ಬರು ಸದಸ್ಯರು ಸೇರಿ 10 ಜನರಿರುತ್ತಾರೆ. ವಾರ್ಡ್ ಪ್ರತಿನಿಧಿಸುವ ಪಾಲಿಕೆ ಸದಸ್ಯ ಸಮಿತಿ ಕಾರ್ಯದರ್ಶಿಯಾಗಿರುತ್ತಾರೆ. ಮಹಾಪೌರರು ಸಮಿತಿ ಅಧ್ಯಕ್ಷರಾಗಿರುತ್ತಾರೆ.

ಸಮಿತಿಗೆ ಮಹಾನಗರ ಪಾಲಿಕೆ ಆಯುಕ್ತರು ನಿರ್ದೇಶನ ನೀಡುತ್ತಾರೆ. ಈ ಸಮಿತಿಯು ಪ್ರತಿ ತಿಂಗಳು ಸಭೆ ನಡೆಸಬೇಕು. ವಾರ್ಡ್‌ಗೆ ಬಿಡುಗಡೆಯಾದ ಅನುದಾನವು ಸಮಿತಿ ಗಮನಕ್ಕೆ ತಂದ ಬಳಿಕವೇ ಬಳಸಬೇಕೆಂಬ ನಿಯಮ ರೂಪಿಸಲಾಗಿದೆ. ವಾರ್ಡ್‌ನಲ್ಲಿ ಏನೇನು ಕುಂದು-ಕೊರತೆಗಳು ಇವೆ. ಯಾವ್ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಭೆ ಸೇರಿ ಚರ್ಚಿಸಿ, ಅನುಮೋದನೆಗೆ ಕಳುಹಿಸಬೇಕು. ಇಷ್ಟೆಲ್ಲ ಮಹತ್ವದ ಪಾತ್ರ ಹೊಂದಿರುವ ವಾರ್ಡ್ ಸಮಿತಿ ರಚಿಸುವುದಕ್ಕೆ ನಿರಾಸಕ್ತಿ ತೋರಿಸಲಾಗುತ್ತಿದೆ ಎಂದು ಕರ್ನಾಟಕ ವಾರ್ಡ್ ಸಮಿತಿ ಬಳಗದ ಸಂಚಾಲಕಿ ಗೌರಿ ಗಜಬರ್ ಆರೋಪಿಸಿದ್ದಾರೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಗೌರಿ ಗಜಬರ್ ಅವರು, ಕಳೆದ ಸೆಪ್ಟೆಂಬರ್ ತಿಂಗಳಿನಿಂದ ನಿರಂತರವಾಗಿ ಹೋರಾಟ ಮಾಡಿದ್ದೇವೆ. ಪ್ರಾದೇಶಿಕ ಆಯುಕ್ತರು, ಪಾಲಿಕೆ ಆಯುಕ್ತರಿಗೂ ಮನವಿ ಸಲ್ಲಿಸಿದ್ದೇವೆ. ಆದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಹೊಸ ಸರ್ಕಾರವಾದ್ರೂ ಈ ಬಗ್ಗೆ ಗಮನಹರಿಸಿ ವಾರ್ಡ್ ಸಮಿತಿ ರಚಿಸಿದರೆ ಬೆಳಗಾವಿ ಅಭಿವೃದ್ಧಿಗೆ ತುಂಬಾ ಅನುಕೂಲ ಆಗುತ್ತದೆ ಎಂದರು.

ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಮೇಯರ್-ಉಪಮೇಯರ್ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ಹಿನ್ನೆಲೆ ವಾರ್ಡ್ ಸಮಿತಿ ರಚನೆ ವಿಳಂಬವಾಗಿತ್ತು. ಜೂನ್ 5ರಂದು ಮೇಯರ್ ಅವರು ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ಶೀಘ್ರವೇ ವಾರ್ಡ್ ಸಮಿತಿ ರಚನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ ವಾರ್ಡ್ ಸಮಿತಿ ರಚನೆಗೆ ನಿಯಮವಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಸಮಿತಿ ರಚನೆಗೆ ಪಾಲಿಕೆ ಮುಂದಾಗುತ್ತಾ ಎಂದು ಕಾದು‌ ನೋಡಬೇಕಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ