Breaking News
Home / ರಾಜಕೀಯ / ಮೈಸೂರು ಅಪಘಾತ ದುರಂತ: ಸಂಗನಕಲ್ಲು ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ

ಮೈಸೂರು ಅಪಘಾತ ದುರಂತ: ಸಂಗನಕಲ್ಲು ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ

Spread the love

ಬಳ್ಳಾರಿ: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ 9 ಜನರ ಮೃತದೇಹಗಳನ್ನು ಗ್ರಾಮದಲ್ಲಿ ಮಂಗಳವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿವಿಧಾನಗಳ ಪ್ರಕಾರ ಒಂದೇ ಸಾಲಿನಲ್ಲಿ ಗುಂಡಿಗಳನ್ನು ಅಗೆದು, ಏಕಕಾಲದಲ್ಲಿ ಮೃತದೇಹಗಳನ್ನು ಮಣ್ಣು ಮಾಡಲಾಯಿತು.

ಭೀಕರ ಅಪಘಾತದಲ್ಲಿ ಸಂದೀಪ್ (24), ಅವರ ತಂದೆ ಕೊಟ್ರೇಶ್ (45), ತಾಯಿ ಸುಜಾತಾ (40) ಒಂದು ಕುಟುಂಬದವರಾಗಿದ್ದರೆ, ಇನ್ನೊಂದು ಕುಟುಂಬದ ಮಂಜುನಾಥ (35), ಪತ್ನಿ ಪೂರ್ಣಿಮಾ (30), ಮಕ್ಕಳಾದ ಕಾರ್ತಿಕ್ (08), ಪವನ್ (10) ಸಾವನ್ನಪ್ಪಿದ್ದರು. ಇನ್ನು ಮತ್ತೊಂದು ಕುಟುಂಬದ ಗಾಯತ್ರಿ (35), ಮಗಳು ಶ್ರಾವ್ಯ (3) ಮೃತಪಟ್ಟವರು. ಮೃತದೇಹಗಳನ್ನು ಮೈಸೂರಿನಿಂದ ನಾಲ್ಕು ಆಂಬ್ಯುಲೆನ್ಸ್​​​ಗಳಲ್ಲಿ ರವಾನಿಸಲಾಯಿತು.

ಕೆಲಹೊತ್ತು ಮನೆಯಂಗಳದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಕೆಲವರು ಹೂ ಮಾಲೆ ಹಾಕಿ ನಮಸ್ಕರಿಸಿ ಅಂತಿಮ ದರ್ಶನ ಪಡೆದರು. ಬಳಿಕ 12 ಗಂಟೆ ಸುಮಾರಿಗೆ ಅದೇ ಆಂಬ್ಯುಲೆನ್ಸ್​​ಗಳಲ್ಲಿ ಮೃತದೇಹಗಳನ್ನು ಸಮೀಪದ ವೀರಶೈವ ರುದ್ರಭೂಮಿಗೆ ತಂದು ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕೊನೆಗೆ ಸಾರ್ವಜನಿಕರು ಮಣ್ಣು ನೀಡಿದ ಬಳಿಕ ಜೆಸಿಬಿ ಯಂತ್ರದಿಂದ ಕುಣಿಗಳನ್ನು ಮುಚ್ಚಲಾಯಿತು.

ಸ್ಥಳಕ್ಕೆ ಮಾಜಿ ಸಚಿವ ಬಿ ಶ್ರೀರಾಮುಲು, ಸಚಿವ ಬಿ ನಾಗೇಂದ್ರ ಅವರ ಸಹೋದರ ಬಿ ವೆಂಕಟೇಶ್ ಪ್ರಸಾದ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಎಡಿಸಿ ಮೊಹಮ್ಮದ್ ಝುಬೇರಾ, ಡಿಹೆಚ್‌ಒ ಹೆಚ್​​ಎಲ್ ಜನಾರ್ದನ ಸೇರಿ ಹಲವರು ಸ್ಥಳದಲ್ಲೇ ಇದ್ದು, ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಟ್ಟರು. ರಾಜ್ಯ ಸರ್ಕಾರ ಮೃತ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದೆ. ಕೇಂದ್ರ ಸರ್ಕಾರವೂ ಕೂಡ ಎರಡು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ಸುದ್ದಿಗಾರರೊಂದಿಗೆ ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ 2 ಲಕ್ಷ ಬದಲಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ 5 ಲಕ್ಷ ಪರಿಹಾರ ನೀಡಲಾಗುತ್ತಿತ್ತು, ಈಗಿನ ರಾಜ್ಯ ಸರ್ಕಾರ ತಲಾ 5 ಲಕ್ಷ ಪರಿಹಾರ ನೀಡುವಂತೆ ಮಾಜಿ ಸಚಿವ ಶ್ರೀರಾಮುಲು ಒತ್ತಾಯಿಸಿದರು.

ಈ ವೇಳೆ, ಡಿಸಿ ಪವನ್​ ಕುಮಾರ್ ಮಾಲಪಾಟಿ ಮಾತನಾಡಿ, ಸರ್ಕಾರ ಘೋಷಿಸಿರು ಪರಿಹಾರ ವಿತರಿಸಲು ಮೃತರ ಸಂಬಂಧ ಪಟ್ಟವರ ಬ್ಯಾಂಕ್ ಅಕೌಂಟ್ ಮಾಹಿತಿ ನೀಡುವಂತೆ ಸಿಎಂ ಕಚೇರಿಯಿಂದ ಹೇಳಿದ್ದಾರೆ. ಎಡಿಸಿ ಬ್ಯಾಂಕ್ ಅಕೌಂಟ್ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಇನ್ನೂ ಎರಡು ದಿನದಲ್ಲಿ ಸಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರ ಹಣ ಜಮಾ ಆಗುತ್ತದೆ. ಘಟನೆಯಲ್ಲಿ ಗಾಯಗೊಂಡು ಮೂವರು ಗಾಯಾಳುಗಳು ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಅವರು ಆಸ್ಪತ್ರೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ