Breaking News
Home / ರಾಜಕೀಯ / ಸಾಮಾನ್ಯ ಪಾಸ್‌ಪೋರ್ಟ್​ಗೆ ಅನುಮತಿ… ನಾಳೆ ಸಂಜೆ ಅಮೆರಿಕಕ್ಕೆ ರಾಹುಲ್ ಗಾಂಧಿ ಪಯಣ

ಸಾಮಾನ್ಯ ಪಾಸ್‌ಪೋರ್ಟ್​ಗೆ ಅನುಮತಿ… ನಾಳೆ ಸಂಜೆ ಅಮೆರಿಕಕ್ಕೆ ರಾಹುಲ್ ಗಾಂಧಿ ಪಯಣ

Spread the love

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಸಾಮಾನ್ಯ ಪಾಸ್​ಪೋರ್ಟ್​ ಸ್ವೀಕರಿಸಿದ್ದಾರೆ.

ಶುಕ್ರವಾರ ದೆಹಲಿಯ ನ್ಯಾಯಾಲಯವು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿ ಮೂರು ವರ್ಷಗಳ ಅವಧಿಗೆ ಪಾಸ್‌ಪೋರ್ಟ್​ಗೆ ಒಪ್ಪಿಗೆ ನೀಡಿತ್ತು. ರಾಹುಲ್​ ಗಾಂಧಿ ಹತ್ತು ವರ್ಷಗಳ ಅವಧಿಯ ಪಾಸ್​ಪೋರ್ಟ್​ಗೆ ಮನವಿ ಮಾಡಿದ್ದರು. ಆದರೆ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದೀಗ ಮೂರು ವರ್ಷದ ಅವಧಿಗೆ ಪಾಸ್​ಪೋರ್ಟ್ ಲಭ್ಯವಾದ ಹಿನ್ನೆಲೆ ಸೋಮವಾರ ಸಂಜೆ ರಾಹುಲ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯುವ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದು, ಕ್ಯಾಪಿಟೋಲ್‌ನಲ್ಲಿ ವಾಲ್ ಸ್ಟ್ರೀಟ್ ಅಧಿಕಾರಿಗಳು, ಹಿರಿಯ ಬುದ್ದಿಜೀವಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸುವರು. ಜೂನ್ 4ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯ ಸಂವಾದದಲ್ಲಿ ಭಾಗವಹಿಸುವದರೊಂದಿಗೆ ಅಮೆರಿಕಾದ ಪ್ರವಾಸಕ್ಕೆ ಅಂತ್ಯ ಹಾಡಲಿದ್ದಾರೆ.

ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್​ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್​ ಅನ್ನೂ ಒಪ್ಪಿಸಿದ್ದರು. ಹೀಗಾಗಿ ಸಾಮಾನ್ಯ ಪಾಸ್‌ಪೋರ್ಟ್​ಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿ ಆಗಿದ್ದು, ಅಕ್ರಮ ಹಣ ವರ್ಗಾವಣೆ ಹಾಗೂ ಹಣಕಾಸು ದುರ್ಬಳಕೆ ಆರೋಪಗಳು ಅವರ ಮೇಲಿವೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಆಕ್ಷೇಪ ಸಲ್ಲಿಸಿದ್ದರು.

ರಾಹುಲ್​ ಗಾಂಧಿ ಅವರ ಈ ಅರ್ಜಿ ಯಾವುದೇ ಅರ್ಹತೆ ಹೊಂದಿಲ್ಲ. ಒಂದು ವರ್ಷ ಅವಧಿಗೆ ಮಾತ್ರ ಪಾಸ್‌ಪೋರ್ಟ್​ ನೀಡಬೇಕು. ನಂತರ ಪ್ರತಿ ವರ್ಷ ನವೀಕರಿಸಬೇಕು. ಇದೊಂದು ವಿಶೇಷ ಪ್ರಕರಣವಾಗಿದ್ದು, 10 ವರ್ಷಗಳವರೆಗೆ ನೀಡಬಾರದು. ಅಲ್ಲದೇ, ರಾಹುಲ್​ ಗಾಂಧಿಯವರ ಭಾರತೀಯ ಪೌರತ್ವದ ಬಗ್ಗೆಯೂ ಪ್ರಶ್ನಿಸಲಾಗಿದೆ. ಅವರು ಬ್ರಿಟಿಷ್ ಪ್ರಜೆ ಎಂದು ಆರೋಪಿಸಿದ್ದರು.

ಆದರೆ, ನ್ಯಾಯಾಲಯವು ನ್ಯಾಷನಲ್ ಹೆರಾಲ್ಡ್ ಪ್ರಕರಣವು ದೂರುದಾರರ ಕ್ರಾಸ್ ಎಕ್ಸಾಮಿನೇಷನ್ ಹಂತದಲ್ಲಿ ಬಾಕಿ ಉಳಿದಿದೆ. ಅಲ್ಲದೇ, ರಾಹುಲ್​ ಗಾಂಧಿಯವರು ನಿಯಮಿತವಾಗಿ ವೈಯಕ್ತಿಕ ಅಥವಾ ಅವರ ವಕೀಲರ ಮೂಲಕ ಹಾಜರಾಗುತ್ತಿದ್ದಾರೆ. ಆದ್ದರಿಂದ ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಅಥವಾ ವಿಳಂಬ ಆಗಲ್ಲ ಎಂದು ಹೇಳಿತ್ತು. ಅಲ್ಲದೇ, ಸಾಮಾನ್ಯ ಪಾಸ್​ಪೋರ್ಟ್​ಗೆ 10 ವರ್ಷಗಳಲ್ಲ ಬದಲಿಗೆ ಮೂರು ವರ್ಷಕ್ಕೆ ಮಾತ್ರ ಎನ್‌ಒಸಿ ನೀಡಿ ಆದೇಶಿತ್ತು.

ಕೇರಳದ ವಯನಾಡು ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಾಹುಲ್​ ಗಾಂಧಿಯವರು ಮೋದಿ ಉಪನಾಮ ಕುರಿತ ವಿವಾದಿತ ಹೇಳಿಕೆ ಪ್ರಕರಣದಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್​ನ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದರು. ಇದರಿಂದ ಸಂಸತ್ ಸ್ಥಾನದಿಂದ ಅನರ್ಹಗೊಂಡ ನಂತರ ತಮಗೆ ನೀಡಿದ್ದ ಹಳೆಯ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಅವರು ಮರಳಿಸಬೇಕಾಗಿತ್ತು. ಇನ್ನು, ಸೂರತ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್​ನಲ್ಲಿ ರಾಹುಲ್ ಅರ್ಜಿ ಸಲ್ಲಿಸಿದ್ದಾರೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ