Home / Uncategorized / ಉದ್ಯೋಗದಾತರು – ಉದ್ಯೋಗಿಗಳು ರಾಜಿ ಸಂಧಾನದ ನಿರ್ಧಾರಕ್ಕೆ ಬದ್ಧರಾಗಿರಬೇಕು: ಹೈಕೋರ್ಟ್

ಉದ್ಯೋಗದಾತರು – ಉದ್ಯೋಗಿಗಳು ರಾಜಿ ಸಂಧಾನದ ನಿರ್ಧಾರಕ್ಕೆ ಬದ್ಧರಾಗಿರಬೇಕು: ಹೈಕೋರ್ಟ್

Spread the love

ಬೆಂಗಳೂರು: ಉದ್ಯೋಗದಾತರು ಮತ್ತು ಉದ್ಯೋಗಿಗಳು ರಾಜಿ ಸಂಧಾನದ ಮೂಲಕ ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಹೈಕೋರ್ಟ್​ ಆದೇಶ ನೀಡಿದೆ.

ಇಂಡಿಯನ್ ಟೆಲಿಫೋನ್ ಲಿಮಿಟೆಡ್‌ನಲ್ಲಿ (ಐಟಿಐ) ಹಲವು ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ 80 ನೌಕರರ ಮರು ನೇಮಕಾತಿಗೆ ಸಂಬಂಧಿಸಿದಂತೆ ಮತ್ತೊಂದು ಬಾರಿ ರಾಜಿ ಸಂಧಾನ ನಡೆಸಲು ಕೋರ್ಟ್‌ ಸೂಚನೆ ನೀಡಿದೆ.

ಕರ್ನಾಟಕ ಜನರಲ್ ಲೇಬರ್ ಯೂನಿಯನ್‌ನ ಐಟಿಐ ಘಟಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ರಾಜಿ ಅಧಿಕಾರಿ ಚರ್ಚೆ ನಡೆಸಿ ಕೆಲವು ಸಿಬ್ಬಂದಿಯನ್ನು ಉದ್ಯೋಗಕ್ಕೆ ಮರು ನೇಮಕ ಮಾಡಿಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ. ಇದಕ್ಕೆ ಐಟಿಐ ನಿರ್ಧಾರ ಕೈಗೊಂಡಿತ್ತು. ಹೀಗಾಗಿ ರಾಜಿ ಸಂಧಾನ ಸಂದರ್ಭದಲ್ಲಿ ಕೈಗೊಂಡ ನಿರ್ಧಾರಕ್ಕೆ ಬದ್ಧವಾಗಿರಬೇಕು. ಇದರ ಜೊತೆಗೆ, ನಿರ್ಧಾರದಿಂದ ನುಣುಚಿಕೊಳ್ಳಲು ಮುಂದಾಗಬಾರದು ಎಂದು ಪೀಠ ತಿಳಿಸಿದೆ.

ರಾಜಿ ಸಂಧಾನ ಸಂದರ್ಭದಲ್ಲಿ ಹೊರ ಬರುವ ಮಧ್ಯಂತರ ನಿರ್ಧಾರ ಇರಬಹುದು, ಇಲ್ಲದಿರಬಹುದು. ಈ ಪ್ರಕ್ರಿಯೆಯಲ್ಲಿ ಮತ್ತಷ್ಟು ಪ್ರಗತಿ ಕಾಣಲು ಎರಡೂ ಪಕ್ಷಗಾರರು ಬದ್ಧರಾಗಿರಬೇಕು. ಐಟಿಐ ಸಂಸ್ಥೆಯು ಒಪ್ಪಂದವನ್ನು ಪಾಲಿಸಿದ್ದಲ್ಲಿ ಮಧ್ಯಂತರ ಮಾತುಕತೆಯಿಂದಲೇ ಪ್ರಕರಣ ಇತ್ಯರ್ಥಗೊಳ್ಳುತ್ತಿತ್ತು. ಇಲ್ಲವೇ ಅಂತಿಮ ಪರಿಹಾರದೊಂದಿಗೆ ಕೊನೆಗೊಳ್ಳುತ್ತಿತ್ತು. ಅದನ್ನು ಪಾಲಿಸದಿದ್ದರೆ ಈ ರಾಜಿ ಪ್ರಕ್ರಿಯೆ ಕೇವಲ ಔಪಚಾರಿಕವಾಗುತ್ತಿತ್ತು ಎಂದು ಪೀಠ ಹೇಳಿದೆ.

ಅಲ್ಲದೇ, ರಾಜಿ ಸಂಧಾನ ಪ್ರಕ್ರಿಯೆಯಲ್ಲಿ ಕೈಗೊಂಡಿರುವ ನಿರ್ಧಾರದಂತೆ, ಯಾವುದೇ ಪೂರ್ವಾಗ್ರಹಕ್ಕೊಳಗಾಗದೆ ಕಾರ್ಮಿಕರನ್ನು ಕ್ರಮ ಬದ್ದಗೊಳಿಸಬೇಕು. ತಕ್ಷಣ ಆಡಳಿತ ಮಂಡಳಿ ಮುಂದುವರೆದ ರಾಜಿ ಸಂಧಾನ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಬೇಕು. 35 ನೌಕರರನ್ನು ತಕ್ಷಣ ಸೇವೆಗೆ ಪರಿಗಣಿಸಬೇಕು. 45 ನೌಕರರನ್ನು ಹಂತ ಹಂತವಾಗಿ ಪರಿಗಣಿಸಬೇಕು ಎಂಬ ಮಧ್ಯಂತರ ಪರಿಹಾರವನ್ನು ಜಾರಿ ಮಾಡಬೇಕು. ಮುಂದೆ ನಡೆಯುವ ರಾಜಿ ಪ್ರಕ್ರಿಯೆಯಲ್ಲಿ ಪ್ರಕರಣ ಸಂಬಂಧ ಮತ್ತಷ್ಟು ಪರಿಹಾರ ಕಂಡುಕೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಅರ್ಜಿದಾರ ಸಂಘಟನೆ ಸದಸ್ಯರು ಮತ್ತು ಐಟಿಐ ಮತ್ತೊಂದು ಬಾರಿ ರಾಜಿ ಸಂಧಾನಕ್ಕೆ ಶಿಫಾರಸು ಮಾಡಿದ್ದು, ಮಧ್ಯಸ್ಥಿಕೆ ಅಧಿಕಾರಿಯು (ಕಾರ್ಮಿಕ ಆಯುಕ್ತರು) ಇಬ್ಬರೂ ಪಕ್ಷಗಾರರ ನಡುವಿನ ವ್ಯತ್ಯಾಸವನ್ನು ಸರಿಪಡಿಸಲು ಪ್ರಯತ್ನ ಮಾಡಬೇಕು. ಈ ಪ್ರಕ್ರಿಯೆಯನ್ನು ಮುಂದಿನ ಎಂಟು ವಾರಗಳಲ್ಲಿ ಇತ್ಯರ್ಥ ಪಡಿಸಬೇಕು ಎಂದು ಕಾರ್ಮಿಕ ಇಲಾಖೆಗೆ ನಿರ್ದೇಶನ ನೀಡಿದೆ.

ಅರ್ಜಿ ಸಲ್ಲಿಸಿರುವವರು ಸಂಘಟನೆಯ ಸದಸ್ಯರು ಗುತ್ತಿಗೆ ಕಾರ್ಮಿಕರಾಗಿದ್ದು, ಐಟಿಐ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಲವು ಗುತ್ತಿಗೆದಾರರು ಬದಲಾಗಿದ್ದರೂ ಇದೇ ಕಾರ್ಮಿಕರೇ ತಮ್ಮ ಸೇವೆಯನ್ನು ಖಾಯಂ ನೌಕರರಂತೆ ಮುಂದುವರೆಸುತ್ತಿದ್ದರು. ಆದರೆ, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ವೇತನ ಪಾವತಿಸಿರಲಿಲ್ಲ. ಇದರಿಂದ ನೌಕರರು ಕಾರ್ಮಿಕ ಒಕ್ಕೂಟವನ್ನು ರಚನೆ ಮಾಡಿಕೊಂಡಿದ್ದರು. ಅಲ್ಲದೇ, ಖಾಯಂ ನೌಕರರೆಂದೇ ಘೋಷಣೆ ಮಾಡಬೇಕು ಎಂದು ಕನಿಷ್ಠ ವೇತನ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿ ಆಡಳಿತ ಮಂಡಳಿ ಕೆಲವು ನೌಕರರಿಗೆ ಬೆದರಿಕೆ ಹಾಕಿ ಕೆಲವರನ್ನು ಸೇವೆಯಿಂದ ವಜಾಗೊಳಿಸಿತ್ತು. ಈ ನಡುವೆ ರಾಜಿ ಸಂಧಾನದ ಮೂಲಕ ವಜಾಗೊಳಿಸಿದ್ದ ನೌಕರರನ್ನು ಹಿಂಪಡೆಯುವುದಾಗಿ ಐಟಿಐ ಆಡಳಿತ ಮಂಡಳಿ ನಿರ್ಧಾರ ಪ್ರಕಟಿಸಿತ್ತು. ಆದರೂ, ಆಡಳಿತ ಮಂಡಳಿ ನೇಮಕ ಮಾಡಿಕೊಂಡಿರಲಿಲ್ಲ. ಹೀಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.


Spread the love

About Laxminews 24x7

Check Also

ಬತ್ತಿದ ಮಲಪ್ರಭೆ, ಈ ನಾಲ್ಕು ಜಿಲ್ಲೆಗೆ ಜಲಕಂಟಕ

Spread the loveಬೆಳಗಾವಿ, ಮೇ.15: ಬೆಳಗಾವಿ(Belagavi) ಜಿಲ್ಲೆಯ ಕಣಕುಂಬಿ ಗ್ರಾಮದಲ್ಲಿ ಹುಟ್ಟುವ ಮಲಪ್ರಭಾ ನದಿ(Malaprabha River). ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ