Breaking News
Home / ರಾಜಕೀಯ / ಮೂರು ದಿನಗಳ ಕಾಲ ವಿಧಾನಸಭೆಯ ವಿಶೇಷ ಅಧಿವೇಶನ.. 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಮೂರು ದಿನಗಳ ಕಾಲ ವಿಧಾನಸಭೆಯ ವಿಶೇಷ ಅಧಿವೇಶನ.. 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

Spread the love

ಬೆಂಗಳೂರು: ಸೋಮವಾರದಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯುವ ಹಿನ್ನೆಲೆ ಮೇ 22 ರಿಂದ 24ರ ವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ವಿಧಾನಸೌಧದ ಸುತ್ತಮುತ್ತ 2 ಕಿ ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಸಿ ಎಚ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

 

ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೆರವಣಿಗೆ, ಪ್ರತಿಭಟನೆ, ಧರಣಿ ಸತ್ಯಾಗ್ರಹ, ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳುವ ಸಾಧ್ಯತೆ ಇರುವುದರಿಂದ ಅಧಿವೇಶನದ ಕಾರ್ಯ-ಕಲಾಪಗಳಿಗೆ ಅಡಚಣೆಯಾಗಿ ಸಾರ್ವಜನಿಕ ನೆಮ್ಮದಿಗೆ ಭಂಗ ಹಾಗೂ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಆದೇಶ ಪ್ರಕಟಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮೇ 22 ರಿಂದ 24ರ ವರೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ವರೆಗೆ ವಿಧಾನಸೌಧದ ಸುತ್ತಲ 2 ಕಿ.ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಈ ಆದೇಶದ ಅನ್ವಯ ಈ ನಿಷೇಧ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ. ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ.

ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು ಮೊದಲಾದ ಮಾರಕಾಸ್ತ್ರ ಒಯ್ಯುವಂತಿಲ್ಲ. ಯಾವುದೋ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಉಪಕರಣ ಸಾಗಣೆ, ಶೇಖರಣೆ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಗಳ ಶವ ಪ್ರತಿಕೃತಿ ಪ್ರದರ್ಶನ, ಬಹಿರಂಗ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಆದೇಶದಲ್ಲಿ ತಿಳಿಸಿದ್ದಾರೆ.

ನಾಳಿನ ಅಧಿವೇಶನದಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕಾರ.. ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎಲ್ಲ ಪಕ್ಷಗಳ ನೂತನ ಶಾಸಕರ ಪ್ರಮಾಣವಚನಕ್ಕೆ ವಿಧಾನಸಭೆ ಸಚಿವಾಲಯ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಅವರ ಸಮ್ಮುಖದಲ್ಲಿ ಎಲ್ಲ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ನಂತರ ನೂತನ ಸದಸ್ಯರಿಗೆ ಸಂವಿಧಾನ, ವಿಧಾನಸಭೆಯ ನಿಯಮಾವಳಿಗಳ ಪುಸ್ತಕ ಇರುವ ಬ್ಯಾಗ್​ಗಳನ್ನು ನೀಡಲಾಗುತ್ತದೆ.

ವಿಧಾನಸಭೆ ನಡೆಯುವ ಮೊಗಸಾಲೆ, ಲಾಂಚ್ ಸುತ್ತ ಮುತ್ತಲೂ ಸ್ವಚ್ಛಗೊಳಿಸಿರುವ ಸಿಬ್ಬಂದಿ ಸೋಮವಾರ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿದೆ. ಮೂರು ದಿನಗಳ ವಿಧಾನಸಭೆ ಅಧಿವೇಶನ ಕರೆಯುವ ಕುರಿತು ಅಧಿಕೃತ ಆದೇಶ ಈಗಾಗಲೇ ಹೊರಡಿಸಲಾಗಿದೆ. ಮೇ 24 ರಂದು ವಿಧಾನಸಭೆಯ ನೂತನ ಸ್ಪೀಕರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಎರಡು ದಿನ ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಕಲಾಪ ನಡೆಯಲಿದೆ. ಶಾಸಕರ ಪ್ರಮಾಣವಚನ ಕಲಾಪದ ಬಗ್ಗೆ 16ನೇ ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲ ಸದಸ್ಯರಿಗೂ ಮಾಹಿತಿ ನೀಡಲಾಗಿದೆ.

ಕಾಂಗ್ರೆಸ್​ನ ಹಿರಿಯ ಸದಸ್ಯ ಆರ್. ವಿ. ದೇಶಪಾಂಡೆ ಅವರು ಹಂಗಾಮಿ ಸ್ಪೀಕರ್​ರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಹೆಚ್.ಕೆ. ಪಾಟೀಲ್, ಕೆ. ಎನ್. ರಾಜಣ್ಣ, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ ಅವರ ಹೆಸರುಗಳು ಕೇಳಿ ಬರುತ್ತಿವೆ. ಅಂತಿಮವಾಗಿ ಹೈಕಮಾಂಡ್ ಜೊತೆಗೆ ಚರ್ಚಿಸಿ ಇವರಲ್ಲಿ ಒಬ್ಬರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದ್ದು, ನಿನ್ನೆಯಷ್ಟೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಮತ್ತು ಎಂಟು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಿನ್ನೆಯೇ ಮೊದಲ ಸಚಿವ ಸಂಪುಟ ಸಭೆ ಕೂಡ ನಡೆದು ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿತ್ತು.

 


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ