Home / ರಾಜಕೀಯ / ಕುರಿ ಲೆಕ್ಕ ಹಾಕಲು ಬಾರದವ ಅನ್ನಿಸಿಕೊಂಡಿದ್ದ ಸಿದ್ದರಾಮಯ್ಯ.. ಈಗ 24ನೇ ಮುಖ್ಯಮಂತ್ರಿ

ಕುರಿ ಲೆಕ್ಕ ಹಾಕಲು ಬಾರದವ ಅನ್ನಿಸಿಕೊಂಡಿದ್ದ ಸಿದ್ದರಾಮಯ್ಯ.. ಈಗ 24ನೇ ಮುಖ್ಯಮಂತ್ರಿ

Spread the love

ಬೆಂಗಳೂರು: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪದಗ್ರಹಣ ಸನ್ನಿಹಿತವಾಗಿದೆ. ಮೇ 20ರಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಸಮಾರಂಭ ನೆರವೇರಲಿದ್ದು, ಸಿದ್ದರಾಮಯ್ಯ ಸಿಎಂ ಆಗಿ ಹಾಗೂ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಅಗಿ ಪದಗ್ರಹಣ ಮಾಡಲಿದ್ದಾರೆ.

ಒಂದು ಸಂದರ್ಭದಲ್ಲಿ ಕುರಿ ಲೆಕ್ಕ ಹಾಕಲು ಬಾರದವ, ಹೇಗೆ ಹಣಕಾಸು ಸಚಿವನಾಗಿ ಬಜೆಟ್ ಮಂಡಿಸುತ್ತಾನೆ ಎಂದು ಟೀಕೆಗೆ ಒಳಗಾಗಿದ್ದರು. ಆದರೆ ಇದುವರೆಗೂ ಯಶಸ್ವಿಯಾಗಿ 13 ಹಣಕಾಸು ಬಜೆಟ್ ಮಂಡಿಸಿದ್ದು, 14ನೇ ಬಜೆಟ್​ ಮಂಡನೆಗೆ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿ ಕೊಳ್ಳುತ್ತಿದ್ದಂತೆ ಸಂಪ್ರದಾಯದಂತೆ ಹೊಸ ಬಜೆಟ್​ ಮಂಡನೆ ಆಗಬೇಕಿದೆ. ಅದರ ಸಿದ್ಧತೆಯನ್ನು ಪದಗ್ರಹಣವಾಗುತ್ತಿದ್ದಂತೆ ಆರಂಭಿಸಲಿದ್ದಾರೆ.

ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ 1948ರ ಆಗಸ್ಟ್ 12 ರಂದು ಜನಿಸಿದ ಸಿದ್ದರಾಮಯ್ಯ ಹತ್ತನೇ ವರ್ಷದವರೆಗೆ ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ನಡೆಸಿದರು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿಯುಸಿಯನ್ನು ಮೈಸೂರಿನಲ್ಲಿ, ಬಿಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಪೂರೈಸಿದ್ದರು.

ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್ ಆಗಿ ನಂತರ 1978ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು. ಸಿದ್ದರಾಮಯ್ಯ ಅವರ ಪಾಲಕರು ತಮ್ಮ ಮಗ ಡಾಕ್ಟರ್ ಆಗಲಿ ಎಂದು ಬಯಸಿದ್ದರು. ಆದರೆ, ಅವರು ಮಾತ್ರ ವಕೀಲ ವೃತ್ತಿ ಆರಿಸಿಕೊಂಡರು.

 ಸಿದ್ದರಾಮಯ್ಯ

ಸುದೀರ್ಘ 45 ವರ್ಷ ರಾಜಕೀಯ ಬದುಕು ಕಳೆದಿರುವ 75 ವರ್ಷ ಪ್ರಾಯದ ಸಿದ್ದರಾಮಯ್ಯ ಕಳೆದ ವರ್ಷ ಆಗಸ್ಟ್ 3ರಂದು ಹುಟ್ಟು ಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಎಂಬ ಸಮಾವೇಶ ಆಯೋಜನೆ ಮಾಡಿದ್ದರು. ಅಲ್ಲಿ 10 ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಇದು ಸಿದ್ದರಾಮಯ್ಯ ಶಕ್ತಿಯನ್ನು ಬಹಿರಂಗವಾಗಿ ತೋರಿಸಿತ್ತು.

ರಾಜಕೀಯಕ್ಕೆ ಬರಲು ತಂದೆ ವಿರೋಧ: ವಿಶೇಷ ಅಂದರೆ ಇವರ ರಾಜಕೀಯ ಪ್ರವೇಶವನ್ನು ತಂದೆ ಸಿದ್ಧರಾಮೇಗೌಡ ವಿರೋಧಿಸಿದ್ದರು. ಏಕೆಂದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಸಿದ್ಧರಾಮೇಗೌಡರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಜನ ನಮ್ಮನ್ನು ಸೋಲಿಸಿ ಬಿಡುತ್ತಾರೆ ಎಂದು ಬೇಸರ ಪಟ್ಟುಕೊಂಡಿದ್ದರು. ರಾಮ್​ ಮನೋಹರ್ ಲೋಹಿಯಾ ಹೋರಾಟದಿಂದ ಪ್ರಭಾವಿತರಾದ ಸಿದ್ದರಾಮಯ್ಯ ರಾಜಕೀಯದತ್ತ ಅಸಕ್ತಿ ತೋರಿಸಿದ್ದರು.

ರೈತ ಹೋರಾಟಗಾರ ಪ್ರೊ. ನಂಜುಂಡಸ್ವಾಮಿ ಅವರು ಇವರಿಗೆ ಆದರ್ಶ ವ್ಯಕ್ತಿ. ಪ್ರಾಧ್ಯಾಪಕರಾಗಿ ಅವರು ಸಿದ್ದರಾಮಯ್ಯಗೆ ಪಾಠ ಮಾಡುವ ಜತೆಗೆ ಹೋರಾಟ ಹಾದಿಗೂ ಕರೆತಂದರು. ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದರಾಮಯ್ಯ ಅವರನ್ನು 1983ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದರು.

ಕಣಕ್ಕಿಳಿದ ಸಿದ್ದರಾಮಯ್ಯ ವಿಧಾನಸಭೆ ಪ್ರವೇಶಿಸಿದರು. ಇದಕ್ಕೂ ಮುನ್ನ ಒಮ್ಮೆ ಚುನಾವಣೆಗೆ ಸ್ಪರ್ಧಿಸಿ ಕೈಸುಟ್ಟುಕೊಂಡಿದ್ದ ಸಿದ್ದರಾಮಯ್ಯ ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿದ್ದರು. ಆದರೆ ನಂಜುಂಡಸ್ವಾಮಿಯವರ ಒತ್ತಾಯ ಅವರ ಬದುಕಿಗೆ ತಿರುವು ನೀಡಿತು.

ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಅವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು. 1985ರಲ್ಲಿ ಮತ್ತೊಮ್ಮೆ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಸಿದ್ದರಾಮಯ್ಯ ಅಂದು ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪಶುಸಂಗೋಪನೆ ಸಚಿವರಾಗಿ ನೇಮಕಗೊಂಡರು. ಸಂಪುಟ ಪುನಾರಚನೆಯ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

 ಸಿದ್ದರಾಮಯ್ಯ

1989ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. 1992ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು. 1994ರ ಚುನಾವನಣೆಯಲ್ಲಿ ಗೆದ್ದು ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾದರು.

1996ರಲ್ಲಿ ಬಂದ ಜೆ.ಎಚ್​. ಪಟೇಲ್​ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆದರು. 1999ರ ಚುನಾವಣೆಯ ಹೊತ್ತಿಗೆ ಜನತಾ ದಳ ಎರಡು ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು. 1999ರ ಚುನಾವಣೆಯಲ್ಲಿ ಸೋಲನುಭವಿಸಿದರು. ಆದರೆ ಹೋರಾಟ ಬಿಡಲಿಲ್ಲ. 2004ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು.

2004ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ಎರಡನೇ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. 2006ರ ಡಿಸೆಂಬರ್ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ವರುಣ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯ ಪಕ್ಷ ಸಂಘಟನೆಯಲ್ಲಿ ತೊಡಗಿದರು.

2013ರಲ್ಲಿ ಗೆದ್ದು ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಆದರು. 2013ರ ಮೇ 10ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೇ 13 ರಂದು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 1996ರಲ್ಲಿ ಜೆ.ಎಚ್​. ಪಟೇಲ್​ಗೆ ಹೆಚ್ಚಿನ ಶಾಸಕರ ಬೆಂಬಲ ಇದ್ದ ಕಾರಣ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿತ್ತು. ಇದಾದ ಬಳಿಕ 2004ರಲ್ಲಿ ಅತಂತ್ರ ಸರ್ಕಾರ ರಚನೆ ಆದ ಸಂದರ್ಭ ಎನ್​. ಧರ್ಮಸಿಂಗ್ ಸಿಎಂ ಆದ ಹಿನ್ನೆಲೆ ಅವರಿಗೆ ಸಿಎಂ ಸ್ಥಾನ ತಪ್ಪಿತ್ತು.

ಇದೀಗ 2013ರಲ್ಲಿ ಒಮ್ಮೆ ಸಿಎಂ ಆಗಿದ್ದ ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆಗಲು ಸಜ್ಜಾಗಿದ್ದಾರೆ. ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಮಾಡಿದರು ಮತ್ತು ದಲಿತವರ್ಗಗಳಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅವುಗಳಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದರು.

ಕಾಂಗ್ರೆಸ್- ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿಯಲ್ಲಿ ಇದ್ದರೆ, ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ 4 ವರ್ಷ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹಿಂದುಳಿದ ವರ್ಗಗಳ ನೇತಾರ ಎನಿಸಿಕೊಂಡಿದ್ದ ದೇವರಾಜ್ ಅರಸು ನಂತರ 5 ವರ್ಷ ಪೂರ್ಣಾವಧಿ ಅಧಿಕಾರ ನಡೆಸಿದ ಸಿಎಂ ಎಸಿಕೊಂಡಿರುವ ಸಿದ್ದರಾಮಯ್ಯ ಇದೀಗ ಮುಂದಿನ 30 ತಿಂಗಳಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ