Breaking News
Home / ರಾಜಕೀಯ / ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದ ಟಾಪ್​ 10 ಶಾಸಕರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರು ಶಾಸಕರು ಸ್ಥಾನ ಪಡೆದುಕೊಂಡಿದ್ದಾರೆ.

ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದ ಟಾಪ್​ 10 ಶಾಸಕರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರು ಶಾಸಕರು ಸ್ಥಾನ ಪಡೆದುಕೊಂಡಿದ್ದಾರೆ.

Spread the love

ಬೆಳಗಾವಿ : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಗೆಲುವನ್ನು ಸಾಧಿಸಿದೆ.

ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿರುವ 10 ಶಾಸಕರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರು ಶಾಸಕರು ಸ್ಥಾನ ಪಡೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವಷ್ಟು ಪ್ರಭಾವ ಹೊಂದಿರುವ ಜಿಲ್ಲೆ. ಇಲ್ಲಿ ಯಾವ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆಯೋ ಆ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯುತ್ತದೆ. ಅಲ್ಲದೇ ಹಲವು ರಾಜಕೀಯ ವಿದ್ಯಮಾನಗಳಿಂದಲೂ ಸದಾ ಸುದ್ದಿಯಲ್ಲಿರುವ ಬೆಳಗಾವಿ ಜಿಲ್ಲೆ ಇದೀಗ ಮೊನ್ನೆಯಷ್ಟೇ ಹೊರ ಬಂದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲೂ ಹೊಸ ದಾಖಲೆ ಬರೆದಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಅಂತರದಿಂದ ಗೆದ್ದವರ ಪಟ್ಟಿಯಲ್ಲಿ ಕನಕಪುರ ಶಾಸಕ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ. ಕೆ. ಶಿವಕುಮಾರ ಮೊದಲ ಸ್ಥಾನ ಪಡೆದುಕೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಬಿ. ನಾಗರಾಜ್ ವಿರುದ್ಧ 1,22,392 ಮತಗಳ ದಾಖಲೆ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಎರಡನೇ ಸ್ಥಾನ ಪಡೆದಿರುವ ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್​ ಹುಕ್ಕೇರಿ ಬಿಜೆಪಿ ಅಭ್ಯರ್ಥಿ ರಮೇಶ್​ ಕತ್ತಿ ವಿರುದ್ಧ 77,749 ಮತಗಳ ಭಾರಿ ಅಂತರದಿಂದ ವಿಜಯಶಾಲಿಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಗಣೇಶ್​ ಹುಕ್ಕೇರಿ ತಂದೆ ಹಾಲಿ ವಿಧಾನಪರಿಷತ್ ಸದಸ್ಯ ಪ್ರಕಾಶ್​ ಹುಕ್ಕೇರಿ ಅವರು ಬಿಜೆಪಿ ಅಭ್ಯರ್ಥಿ ಬಿ ಆರ್ ಸಂಗಪ್ಪಗೋಳ ವಿರುದ್ಧ 76,588 ಮತಗಳ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದೀಗ ತಂದೆಯ ಹಾದಿಯಲ್ಲೇ ಸಾಗಿರುವ ಪುತ್ರ ಗಣೇಶ ಕೂಡ ದಾಖಲೆಯ ಗೆಲುವು ದಾಖಲಿಸಿದ್ದಾರೆ.

ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ್​ ಸವದಿ ಬರೋಬ್ಬರಿ 76,122 ಮತಗಳ ಭಾರಿ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಲಕ್ಷ್ಮಣ್​ ಸವದಿ ಸೋಲಿಸಲು ರಮೇಶ ಜಾರಕಿಹೊಳಿ ಅಥಣಿಯಲ್ಲೇ ಠಿಕಾಣಿ ಹೂಡಿದ್ದರು. ಹತ್ತು ಹಲವು ತಂತ್ರಗಾರಿಕೆ ಮಾಡಿ, ಟೀಕಾಪ್ರಹಾರ ನಡೆಸಿದ್ದರು. ಇದ್ಯಾವುದೂ ಕೂಡ ವರ್ಕೌಟ್ ಆಗಿಲ್ಲ. ಅಥಣಿ ಮತದಾರ ಪ್ರಭುಗಳು ದಾಖಲೆ ಅಂತರದಲ್ಲಿ ಗೆಲ್ಲಿಸುವ ಮೂಲಕ‌ ಸವದಿಗೆ ಜೈ ಎಂದಿದ್ದಾರೆ.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಭೀಮಪ್ಪ ಗಡಾದ್ ವಿರುದ್ಧ 71,540 ಮತಗಳ‌ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ. ಈ ಹಿಂದೆಯೂ 2013ರಲ್ಲಿ ನಡೆದ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ರಾಮಪ್ಪ ಕರೆಪ್ಪ ಉಟಗಿ ವಿರುದ್ಧ 75,221 ಮತಗಳ ಭಾರಿ ಅಂತರದಿಂದ ಗೆದ್ದು ಬೀಗಿದ್ದರು. ಇದೀಗ ಮತ್ತೆ ದಾಖಲೆ ಅಂತರದಲ್ಲಿ ಗೆದ್ದಿದ್ದಾರೆ.

ಕಳೆದ ಬಾರಿ ಕೇವಲ 2850 ಮತಗಳ ಅಂತರದಿಂದ ಬಿಜೆಪಿ‌ ಅಭ್ಯರ್ಥಿ ಮಾರುತಿ ಅಷ್ಟಗಿ ವಿರುದ್ಧ ಗೆದ್ದಿದ್ದ ಯಮಕನಮರಡಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಈ ಬಾರಿ ದಾಖಲೆಯ ಅಂತರದಲ್ಲಿ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದರು. ತಮ್ಮ‌ ಪ್ರಚಾರ ಸಂದರ್ಭದಲ್ಲಿ ರಾಜ್ಯದಲ್ಲಿ ಟಾಪ್ ಟೆನ್​ ಅಲ್ಲಿ ನಾನು ಬರಬೇಕು ಎಂದು ಹೇಳುತ್ತಿದ್ದರು. ಅದೇ ಪ್ರಕಾರ ಸತೀಶ್​ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ‌ ಬಸವರಾಜ ಹುಂದ್ರಿ ವಿರುದ್ಧ 57211 ಮತಗಳ ಅಂತರದಿಂದ ಗೆಲ್ಲುವ ಮೂಲಕ ಬಹು ಅಂತರದಿಂದ ಗೆದ್ದ ಹತ್ತು ಶಾಸಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ ಪಾಟೀಲ‌ ವಿರುದ್ಧ 51,724 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಾರಿಯೂ 56,016 ಮತಗಳ ಅಂತರದಿಂದ‌ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮನ್ನು ಸೋಲಿಸಬೇಕೆಂದು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದ ರಮೇಶ ಜಾರಕಿಹೊಳಿಗೆ ಭರ್ಜರಿ ತಿರುಗೇಟು ಕೊಟ್ಟಿದ್ದಾರೆ.

ದಾಖಲೆ ಅಂತರದಲ್ಲಿ ಗೆದ್ದವರ ಪಟ್ಟಿ:

ಕ್ಷೇತ್ರ: ಕನಕಪುರ
ವಿಜೇತ: ಡಿ.ಕೆ.ಶಿವಕುಮಾರ(ಕಾಂಗ್ರೆಸ್)
ಪರಾಜಿತ: ಬಿ.ನಾಗರಾಜ(ಜೆಡಿಎಸ್)
ಅಂತರ: 1,22,392 ಮತಗಳು

ಕ್ಷೇತ್ರ: ಚಿಕ್ಕೋಡಿ‌-ಸದಲಗಾ
ವಿಜೇತ: ಗಣೇಶ ಹುಕ್ಕೇರಿ(ಕಾಂಗ್ರೆಸ್)
ಪರಾಜಿತ: ರಮೇಶ ಕತ್ತಿ(ಬಿಜೆಪಿ)
ಅಂತರ: 77,749 ಮತಗಳು

ಕ್ಷೇತ್ರ: ಅಥಣಿ

ವಿಜೇತ: ಲಕ್ಷ್ಮಣ್​ ಸವದಿ(ಕಾಂಗ್ರೆಸ್)
ಪರಾಜಿತ: ಮಹೇಶ ಕುಮಠಳ್ಳಿ(ಬಿಜೆಪಿ)
ಅಂತರ: 76,122 ಮತಗಳು

ಕ್ಷೇತ್ರ: ಅರಭಾವಿ
ವಿಜೇತ: ಬಾಲಚಂದ್ರ ಜಾರಕಿಹೊಳಿ(ಬಿಜೆಪಿ)
ಪರಾಜಿತ: ಭೀಮಪ್ಪ‌ ಗಡಾದ(independent )
ಅಂತರ: 71,540 ಮತಗಳು

ಕ್ಷೇತ್ರ: ಪುಲಕೇಶಿನಗರ
ವಿಜೇತ: ಎ.ಸಿ. ಶ್ರೀನಿವಾಸ(ಕಾಂಗ್ರೆಸ್)
ಪರಾಜಿತ: ಅಖಂಡ‌ ಶ್ರೀನಿವಾಸ(ಬಿಎಸ್ಪಿ)
ಅಂತರ: 62,210 ಮತಗಳು

ಕ್ಷೇತ್ರ: ಕೊಳ್ಳೇಗಾಲ
ವಿಜೇತ: ಎ.ಆರ್. ಕೃಷ್ಣಮೂರ್ತಿ(ಕಾಂಗ್ರೆಸ್)
ಪರಾಜಿತ: ಎನ್. ಮಹೇಶ(ಬಿಜೆಪಿ)
ಅಂತರ: 59,519 ಮತಗಳು

ಕ್ಷೇತ್ರ: ಯಮಕನಮರಡಿ
ವಿಜೇತ: ಸತೀಶ ಜಾರಕಿಹೊಳಿ(ಕಾಂಗ್ರೆಸ್)
ಪರಾಜಿತ: ಬಸವರಾಜ ಹುಂದ್ರಿ(ಬಿಜೆಪಿ)
ಅಂತರ: 57211 ಮತಗಳು

ಕ್ಷೇತ್ರ: ಬೆಳಗಾವಿ ಗ್ರಾಮೀಣ
ವಿಜೇತ: ಲಕ್ಷ್ಮೀ ಹೆಬ್ಬಾಳ್ಕರ್(ಕಾಂಗ್ರೆಸ್)
ಪರಾಜಿತ: ನಾಗೇಶ ಮನ್ನೋಳ್ಕರ್(ಬಿಜೆಪಿ)
ಅಂತರ: 56,016 ಮತಗಳು

ಕ್ಷೇತ್ರ: ಸರ್ವಜ್ಞ ನಗರ
ವಿಜೇತ: ಕೆ.ಜೆ. ಜಾರ್ಜ್(ಕಾಂಗ್ರೆಸ್)
ಪರಾಜಿತ: ಪದ್ಮನಾಭರೆಡ್ಡಿ (ಬಿಜೆಪಿ)
ಅಂತರ: 55,768 ಮತಗಳು

ಕ್ಷೇತ್ರ: ಪದ್ಮನಾಭನಗರ
ವಿಜೇತ: ಆರ್.ಅಶೋಕ (ಬಿಜೆಪಿ)
ಪರಾಜಿತ: ವ್ಹಿ.ರಘುನಾಥ ನಾಯ್ಡು (ಕಾಂಗ್ರೆಸ್)
ಅಂತರ: 55,175 ಮತಗಳು

ಲಕ್ಷಕ್ಕೂ ಹೆಚ್ಚು ಮತ ಪಡೆದ ಬೆಳಗಾವಿ ಶಾಸಕರು :

• ಅಥಣಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಲಕ್ಷ್ಮಣ್​ ಸವದಿ -1,31,404 ಮತಗಳು

• ಚಿಕ್ಕೋಡಿ ಸದಲಗಾ ಕಾಂಗ್ರೆಸ್‌ ವಿಜೇತ ಅಭ್ಯರ್ಥಿ ಗಣೇಶ್ ಹುಕ್ಕೇರಿ -1,28,349 ಮತಗಳು

• ಅರಭಾವಿ ಬಿಜೆಪಿ ವಿಜೇತ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ -1,14,242 ಮತಗಳು

• ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ -1,07,619 ಮತಗಳು

• ಗೋಕಾಕ್ ಬಿಜೆಪಿ ವಿಜೇತ ಅಭ್ಯರ್ಥಿ ರಮೇಶ್​ ಜಾರಕಿಹೊಳಿ -1,05,313 ಮತಗಳು

• ಹುಕ್ಕೇರಿ ಬಿಜೆಪಿ ವಿಜೇತ ಅಭ್ಯರ್ಥಿ ನಿಖಿಲ್ ಕತ್ತಿ – 1,03,574 ಮತಗಳು

• ಯಮಕನಮರಡಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಸತೀಶ್​ ಜಾರಕಿಹೊಳಿ -1,00290 ಮತಗಳು


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ