Breaking News
Home / ರಾಜಕೀಯ / ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ.. 110 ಕ್ಷೇತ್ರದಲ್ಲಿ ಪ್ರಜಾಕೀಯ ಸ್ಪರ್ಧೆ – ಉಪೇಂದ್ರ ಮಾಹಿತಿ

ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ.. 110 ಕ್ಷೇತ್ರದಲ್ಲಿ ಪ್ರಜಾಕೀಯ ಸ್ಪರ್ಧೆ – ಉಪೇಂದ್ರ ಮಾಹಿತಿ

Spread the love

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರ ರಂಗೇರಿದೆ.

ಮೇ 10ರಂದು ಮತದಾನ ನಡೆಯಲಿದ್ದು, ರಾಜ್ಯದ ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ರಾಜ್ಯ ಚುನಾವಣೆಗೆ ಇನ್ನು 9 ದಿನ ಮಾತ್ರ ಬಾಕಿ ಇದೆ. ಈಗ ಬುದ್ಧಿವಂತ ನಟ ಹಾಗು ನಿರ್ದೇಶಕ ಉಪೇಂದ್ರ ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಜೊತೆ ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಮಾಧ್ಯಮಗೋಷ್ಟಿ ನಡೆಸಿದರು. ತಮ್ಮ ಉತ್ತಮ ಪ್ರಜಾಕೀಯ ಪಕ್ಷದ 110 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳನ್ನು ಪರಿಚಯಿಸಿದರು.

ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ ಎಂಬ ಘೋಷಣೆ ಮೂಲಕ ನಟ ಉಪೇಂದ್ರ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನಟ ಉಪೇಂದ್ರ, ಪ್ರಜಾಕೀಯ ಆಯಪ್​​ ಬಗ್ಗೆ ಮಾಹಿತಿ ನೀಡಿದರು. ಜನರ ಬೇಡಿಕೆ ನಮಗೆ ಗೊತ್ತಿದೆ. ಪಾರದರ್ಶಕ ವರದಿ ಕೊಡುತ್ತೇನೆ. ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ. ಪ್ರಜಾಕೀಯ ಬರೀ ವೋಟ್ ಹಾಕಿ ಅಂತಿಲ್ಲ ಎಂದರು.

ಈಗ 110 ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಾನು ಆಯ್ಕೆ ಮಾಡಿಲ್ಲ. ಆಯಾ ಕ್ಷೇತ್ರದ ಮತದಾರ ಜನರು ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ನಾವು ಅವರಿಗೆ ಬಿ ಫಾರಂ ಕೊಟ್ಟಿದ್ದೀವಿ ಅಷ್ಟೇ. ನಮ್ಮ ಪಕ್ಷದ ಪರವಾಗಿ ಯಾರು ಪ್ರಚಾರ ಮಾಡಬೇಕಿಲ್ಲ. ಅಲ್ಲಿನ ಜನರಿಗೆ ಅವರು ಗೊತ್ತಿರಬೇಕು. ಜೊತೆಗೆ ಆ ಕ್ಷೇತ್ರದ ಅಭ್ಯರ್ಥಿಗಳು ಅಲ್ಲಿ ಹೋಗಿ ಜನರ ಸಮಸ್ಯೆ ಬಗ್ಗೆ ಪಟ್ಟಿ ಮಾಡಿ ಅದನ್ನು ಬಗೆಹರಿಸುವ ಪ್ರಯತ್ನ ಮಾಡಬೇಕು. ಅಲ್ಲದೆ ಆರು ತಿಂಗಳಿಗೊಮ್ಮೆ ಪಕ್ಷದಿಂದ ಮತದಾನ ನಡೆಸಲಾಗುತ್ತದೆ. ಈ ವೇಳೆ ಅಲ್ಲಿ ಯಾವ ಅಭ್ಯರ್ಥಿ ಸರಿಯಾಗಿ ಕೆಲಸ ಮಾಡುವುದಿಲ್ಲವೋ ಆ ಅಭ್ಯರ್ಥಿಯನ್ನ ಕೆಳಗೆ ಇಳಿಸಬಹುದು ಎಂದು ಹೇಳಿದ್ರು.

ಇದು ರಾಜಕೀಯ ಅಲ್ಲ. ಇದೊಂದು ಕೆಲಸ. ಜನ ಇವರನ್ನು ಆಯ್ಕೆ ಮಾಡಿ ಕೆಲಸ ಕೊಟ್ಟರೆ ಕೆಲಸ ಮಾಡುತ್ತಾರೆ. ನಮ್ಮ ಪಕ್ಷಕ್ಕೆ ಮತಹಾಕಿ ಸುಮ್ಮನೆ ಇರಬೇಕಿಲ್ಲ. ನಮ್ಮ ಜೊತೆ ಮತದಾರರು ಇರುತ್ತಾರೆ. ಇಲ್ಲಿ ನಾನು 110 ಕ್ಷೇತ್ರಕ್ಕೆ ನಿಂತುಕೊಳ್ಳಿ ಎಂದು ಹೇಳಿಲ್ಲ. ಇಲ್ಲಿ ಆಯಾ ಕ್ಷೇತ್ರದ ಜನರು ಆಯ್ಕೆ ಮಾಡಿರುವ ಅಭ್ಯರ್ಥಿಗಳಿದ್ದಾರೆ. ಇನ್ನುಳಿದ 114 ಕ್ಷೇತ್ರದ ಜನರು ಅಷ್ಟೊಂದು ಆಸಕ್ತಿ ತೋರಿಸಿಲ್ಲ. ಅದಕ್ಕೆ ನಾವು ಕೂಡ ಬಲವಂತ ಮಾಡೋದಿಕ್ಕೆ ಹೋಗಿಲ್ಲ ಎಂದು ತಿಳಿಸಿದರು.

ಈ ರಾಜಕೀಯವನ್ನು ಬದಲಾಯಿಸಿ ಪ್ರಜಾಕೀಯ ಬರಬೇಕು. ಈ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಇರಬಾರದು. ನಾಯಕ ಸಂಸ್ಕೃತಿ ಹೋಗಿ ಕಾಯಕ ಸಂಸ್ಕೃತಿ ಆಗಬೇಕು. ಇಲ್ಲಿ ಯಾರು ಹಣ ಖರ್ಚು ಮಾಡಬೇಕಿಲ್ಲ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪ್ರಜಾಕೀಯ ಪಕ್ಷ 40 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಆತ್ಮವಿಶ್ವಾಸ ಇದೆ. ಇಲ್ಲಿ ಯಾರು ಸ್ಟಾರ್​ಗಳು ಬಂದು ಪ್ರಚಾರ ಮಾಡಬೇಕಿಲ್ಲ ಎಂದು ಇದೇ ಸಂದರ್ಭದಲ್ಲಿ ಉಪೇಂದ್ರ ಹೇಳಿದರು.

ಪ್ರಜಾಕೀಯ appನಿಂದ ಜನರು ಪ್ರಚಾರ ಮಾಡುತ್ತಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷ ಆಗಿರುವುದರಿಂದ ಇದು ನಗದು ರಹಿತ ಪಕ್ಷ. ಇಲ್ಲಿ ಯಾವುದೇ ರೀತಿಯಲ್ಲಿ ಪಕ್ಷವು ಹಣ ಸಂಗ್ರಹಿಸುವುದಿಲ್ಲ. ಪಕ್ಷದ ಕಾರ್ಯಚಟುವಟಿಕೆಗಳ ಅನಿವಾರ್ಯ ವೆಚ್ಚಗಳನ್ನು ಮಾತ್ರ ಪಕ್ಷದ ಅಧ್ಯಕ್ಷರು ಭರಿಸುತ್ತಾರೆ. ಯಾವುದೇ ಕಾರ್ಯಕರ್ತರನ್ನು ಹೊಂದಿರುವುದಿಲ್ಲ. ಪ್ರಾದೇಶಿಕ ಕಚೇರಿಗಳಿರುವುದಿರಲ್ಲ. ಮೆರವಣಿಗೆ, ರ್ಯಾಲಿ, ಬ್ಯಾನರ್‌ಗಳು, ಜನರನ್ನು ಒಟ್ಟುಗೂಡಿಸುವ ಪ್ರಮೇಯ ಇರುವುದಿಲ್ಲ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮನ್ನು ಕನಿಷ್ಟ ವೆಚ್ಚಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಸೂಚಿಸಲಾಗಿದೆ. ಯಾರನ್ನೂ ದೂಷಿಸುವುದಿಲ್ಲ, ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ರಾಜಕೀಯ ಲಾಭಕ್ಕಾಗಿ ಮಾಡುವ ಪ್ರತಿಭಟನೆಗಳು ಇರುವುದಿಲ್ಲ. ರಾಜಕೀಯ ಲಾಭಕ್ಕಾಗಿ ಮಾಡುವ ಸಮಾಜಸೇವೆ ಇರುವುದಿಲ್ಲ ಎಂದು ತಮ್ಮ ಉದ್ದೇಶಗಳನ್ನು ನಟ ಉಪೇಂದ್ರ ಹಂಚಿಕೊಂಡರು.

 


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ