Breaking News
Home / ರಾಜಕೀಯ / ಹೂಲಿ ಇತಿಹಾಸಕ್ಕೆ ಬೆಳಕು ನೀಡಿದ ಹಿತ್ತಾಳೆ ಶಿಲ್ಪ

ಹೂಲಿ ಇತಿಹಾಸಕ್ಕೆ ಬೆಳಕು ನೀಡಿದ ಹಿತ್ತಾಳೆ ಶಿಲ್ಪ

Spread the love

ಗರಗೋಳ: ‘ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದ ಹೊಲದಲ್ಲಿ ಈಚೆಗೆ ದೊರೆತ 12ನೇ ಶತಮಾನದ ಹಿತ್ತಾಳೆ ಲಾಂಛನ ಮತ್ತಷ್ಟು ಕುತೂಹಲ ಹುಟ್ಟಿಸಿದೆ. ಈವರೆಗೆ ಶಿಲ್ಪಕಲಾಕೃತಿಗಳು ಮಾತ್ರ ಸಿಕ್ಕಿದ್ದವು. ಇದೇ ಮೊದಲ ಬಾರಿಗೆ ಹಿತ್ತಾಳೆ ಶಿಲ್ಪ ಸಿಕ್ಕಿದ್ದು ಗಮನಾರ್ಹ’ ಎನ್ನುತ್ತಾರೆ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯವಸ್ತು ಅಧ್ಯಯನ ವಿಭಾಗದ ನಿವೃತ್ತ ನಿರ್ದೇಶಕ ಪ್ರೊ.ಆರ್.ಎಂ. ಷಡಕ್ಷರಯ್ಯ.

 

ತಜ್ಞರ ತಂಡದೊಂದಿಗೆ ಗ್ರಾಮಕ್ಕೆ ಈಚೆಗೆ ಭೇಟಿ ನೀಡಿ, ಸ್ಥಳ ಹಾಗೂ ವಾಸ್ತುಶಿಲ್ಪ ಪರಿಶೀಲಿಸಿದ ನಂತರ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈ ಮೂರ್ತಿಯಲ್ಲಿ ಎರಡು ಭಾಗ ಇವೆ. ಸಿಂಹ ಹಾಗೂ ಸಳನ ಭಾಗ. ಎರಡೂ ಭಾಗಗಳು ಐದಾರು ಪಾರ್ಟ್‌ಗಳಲ್ಲಿವೆ. ಅಂದರೆ ಈ ಮೂರ್ತಿಗಳನ್ನು ಸಂಪೂರ್ಣ ಬಿಚ್ಚಿ, ಮತ್ತೆ ಜೋಡಿಸಲು ಸಾಧ್ಯವಿದೆ. ಪುರಾತನದಲ್ಲೇ ಇಂಥ ತಂತ್ರಜ್ಞಾನದ ಬಳಕೆ ಈ ಭಾಗದಲ್ಲಿ ಇತ್ತು ಎಂಬ ಗಮನಾರ್ಹ ಅಂಶ ಇದರಲ್ಲಿ ಕಂಡುಬರುತ್ತದೆ’ ಎಂದರು.

‘ಸಿಂಹಕ್ಕೆ ಉಬ್ಬಿದ ಕಣ್ಣು, ತೆರೆದ ಬಾಯಿ, ಮಡಚಿಕೊಂಡ ನಾಲಿಗೆ, ಗಡ್ಡ, ಕೋಡು, ಬಾಲವನ್ನು ಹಿಂದಕ್ಕೆತ್ತಿ ವೃತ್ತಾಕಾರ ಮಾಡಲಾಗಿದೆ. ಇದೇ ವೃತ್ತಾಕಾರದಲ್ಲಿ ಮಾಲೆ ಹಿಡಿದುಕೊಂಡ ಚಿತ್ರವನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಸಿಂಹದ ಕಾಲುಗಳಲ್ಲಿ ಸಿಕ್ಕಿಕೊಂಡ ಆನೆಗಳಿವೆ. ಇದು ಪರಾಕ್ರಮದ ಸಂಕೇತವಾಗಿದೆ’ ಎಂದರು.

‘ಸಳನು ಬಲಗೈಯಲ್ಲಿ ಖಡ್ಗ ಹಿಡಿದು ಕೆಳಕ್ಕೆ ಮುಖ ಮಾಡಿದ್ದಾನೆ. ಅವನ ಕೇಶವನ್ನೇ ಕಿರೀಟದಂತೆ ಸುತ್ತಿ ಅಲಂಕಾರ ಮಾಡಿದ್ದು ಸೊಗಸಾಗಿದೆ. ಕೊರಳಲ್ಲಿ ಹಾರ, ಕೈ- ಕಾಲುಗಳಲ್ಲಿ ಕಡಗ ಧರಿಸಿದ್ದಾನೆ. ವಸ್ತ್ರವನ್ನೂ ಧರಿಸಿದ್ದು ಸುಂದರವಾದ ವದನವಿದೆ’ ಎಂದೂ ಹೇಳಿದರು.

ಹೊಯ್ಸಳರದ್ದು ಎಂಬುದ ಅನುಮಾನ: ‘ದೇಹದ ಭಾಗ, ಲಕ್ಷಣ, ವಸ್ತ್ರಾಭರಣ ಲಕ್ಷಣಗಳನ್ನು ಗಮನಿಸಿ 12ರಿಂದ 13ನೇ ಶತಮಾನದ್ದು ಎಂದು ಅಂದಾಜಿಸಬಹುದು. ಆದರೆ, ಇದು ಹೊಯ್ಸಳರ ಲಾಂಛನ ಎಂದು ಹೇಳಲು ಇನ್ನಷ್ಟು ಸಂಶೋಧನೆ ಬೇಕು. ಹೊಯ್ಸಳರು ಮಲಪ್ರಭಾ ನದಿ ದಾಟಿ ಅಧಿಕಾರ ನಡೆಸಿಲ್ಲ. ಮಲಪ್ರಭೆ ಅವರ ಉತ್ತರದ ಗಡಿಯಾಗಿತ್ತು. ಅದರ ಅಭಿಮುಖವಾಗಿ ಸೇವುಣರ ಆಳ್ವಿಕೆ ಇತ್ತು. ಅಲ್ಲದೇ, ಬಸವನ ಕಲ್ಯಾಣದಲ್ಲಿಯೂ 12ನೇ ಶತಮಾನದ ಇದೇ ರೀತಿ ಮೂರ್ತಿಗಳು ಸಿಕ್ಕಿವೆ. ಹಾಗಾಗಿ, ಇದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಬೇಕಿದೆ’ ಎಂದರು.

ಹೀಗಿದೆ ಮೂರ್ತಿ: 90 ಸೆಂ.ಮೀ. ಉದ್ದ, 70 ಸೆಂ.ಮೀ. ಅಗಲವಿರುವ ಈ ಮೂರ್ತಿ ಬಹಳ ಭಾರವಿದೆ. ಇದನ್ನು ಲೋಹದ ಪೀಠದ ಮೇಲೆ ಅಳವಡಿಸಿ, ಆ ಪೀಠವನ್ನು ದೇವಸ್ಥಾನ ಸುಖನಾಸಿಯಲ್ಲಿ ಅಳವಡಿಸಿದ ಸಾಧ್ಯತೆ ಇದೆ. ಆದರೆ, ಇದೊಂದು ಉತ್ಸವ ಮೂರ್ತಿ ಎಂದು ಕೆಲವು ಇತಿಹಾಸಕಾರರು ಹೇಳಿದ್ದಾರೆ. ಆದರೆ, ಇಂಥ ಮೂರ್ತಿಗಳ ಉತ್ಸವ ಮಾಡಿದ್ದು ಎಲ್ಲಿಯೂ ಕಂಡುಬಂದಿಲ್ಲ’ ಎಂದೂ ಅವರು ವಿವರಿಸಿದರು.

ಈ ಸಂಶೋಧಕರ ತಂಡದಲ್ಲಿ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಡೆಪ್ಯೂಟಿ ಸುಪರಿಂಟೆಂಡೆಂಟ್‌ ಡಾ.ದೇಸಾಯಿ, ಸಂಶೋಧಕರಾದ ಈರಣ್ಣ ಪತ್ತಾರ, ದೇವರಾಜ, ಸುರೇಬಾನ ಅವರೂ ಇದ್ದರು.

*

2,000 ವರ್ಷದ ಪಾತ್ರೆಗಳು ಪತ್ತೆ!

‘ಹೂಲಿಯಲ್ಲಿ ಸಿಂಹದ ಮೂರ್ತಿ ಸಿಕ್ಕ ಸ್ಥಳದಲ್ಲಿ ಉತ್ಖನನ ಮಾಡಿದಾಗ ಕೆಂಪು ಬಣ್ಣದ ಮಣ್ಣಿನ ಮಡಕೆಗಳು ಸಿಕ್ಕಿವೆ. ಇವು 2,000 ವರ್ಷಕ್ಕೂ ಹಳೆಯವು. ಇದರಿಂದಾಗಿ ಕ್ರಿಸ್ತಪೂರ್ವ ಕಾಲದಿಂದಲೂ ಇಲ್ಲಿ ಜನವಸತಿ ಇತ್ತು ಎಂದು ಖಚಿತವಾಗಿ ಹೇಳಬಹುದು’ ಎಂದು ಪ್ರೊ.ಷಡಕ್ಷರಯ್ಯ ಹೇಳಿದರು.

’17ನೇ ಶತಮಾನದ ನಂತರ ಇಲ್ಲಿದ್ದ ಊರು ನಾಶವಾಗಿದೆ. ಈ ಸ್ಥಳದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದರೆ ಇನ್ನಷ್ಟು ಕುತೂಹಲಕರ ಅಂಶಗಳು ಬೆಳಕಿಗೆ ಬರಲಿವೆ’ ಎಂದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ